ತೆಂಡುಲ್ಕರ್ ಬ್ಯಾಟಿಂಗ್ ದಾಖಲೆ ಮುರಿಯುವ ಹಾದಿಯಲ್ಲಿ ಕೊಹ್ಲಿ

Update: 2018-10-16 13:16 GMT

ಹೊಸದಿಲ್ಲಿ, ಅ.16: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಅವರ ಮತ್ತೊಂದು ಬ್ಯಾಟಿಂಗ್ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯ ವೇಳೆ ಕೊಹ್ಲಿ ಈ ಸಾಧನೆ ಮಾಡಲು ಎದುರು ನೋಡುತ್ತಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧ ಸಾರ್ವಕಾಲಿಕ ಶ್ರೇಷ್ಠ ಸ್ಕೋರ್ ಗಳಿಸಿದ ಭಾರತದ ದಾಂಡಿಗ ಎನಿಸಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನು ಕೇವಲ 187 ರನ್ ಅಗತ್ಯವಿದೆ.

ನಿವೃತ್ತ ಭಾರತದ ಬ್ಯಾಟಿಂಗ್ ಮಾಂತ್ರಿಕ ತೆಂಡುಲ್ಕರ್ ತನ್ನ ಎರಡು ದಶಕಗಳ ವೃತ್ತಿಜೀವನದಲ್ಲಿ ವಿಂಡೀಸ್ ವಿರುದ್ಧ 39 ಪಂದ್ಯಗಳನ್ನು ಆಡಿದ್ದು 52.73ರ ಸರಾಸರಿಯಲ್ಲಿ 4 ಶತಕ, 11 ಅರ್ಧಶತಕಗಳ ಸಹಿತ 1,573 ರನ್ ಗಳಿಸಿದ್ದಾರೆ.

ಕೊಹ್ಲಿ ಈ ತನಕ ವಿಂಡೀಸ್ ವಿರುದ್ಧ 27 ಏಕದಿನ ಪಂದ್ಯಗಳನ್ನು ಆಡಿದ್ದು 60.30ರ ಸರಾಸರಿಯಲ್ಲಿ 1,387 ರನ್ ಗಳಿಸಿದ್ದಾರೆ. ಕೊಹ್ಲಿ ಕೆರಿಬಿಯನ್ ತಂಡದ ವಿರುದ್ಧ 4 ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಭಾರತದ ಬ್ಯಾಟಿಂಗ್ ಲೆಜೆಂಡ್ ರಾಹುಲ್ ದ್ರಾವಿಡ್ ವಿಂಡೀಸ್ ವಿರುದ್ಧ 40 ಪಂದ್ಯಗಳಲ್ಲಿ 42.12ರ ಸರಾಸರಿಯಲ್ಲಿ 3 ಶತಕ ಹಾಗೂ 8 ಅರ್ಧಶತಕಗಳ ಸಹಿತ ಒಟ್ಟು 1,348 ರನ್ ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

 ಭಾರತದ ಮಾಜಿ ನಾಯಕ ಸೌರವ್ ಗಂಗುಲಿ 27 ಪಂದ್ಯಗಳಲ್ಲಿ 1,142 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ. ಗಂಗುಲಿ ವಿಂಡೀಸ್ ವಿರುದ್ಧ 47.58ರ ಸರಾಸರಿಯಲ್ಲಿ 11 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ತೆಂಡುಲ್ಕರ್, ಕೊಹ್ಲಿ, ದ್ರಾವಿಡ್ ಹಾಗೂ ಗಂಗುಲಿ ವಿಂಡೀಸ್ ವಿರುದ್ಧ 1,000ಕ್ಕೂ ಅಧಿಕ ರನ್ ಗಳಿಸಿದ ಭಾರತದ ದಾಂಡಿಗರಾಗಿದ್ದಾರೆ.

ವಿಂಡೀಸ್ ವಿರುದ್ಧ ಗರಿಷ್ಠ ರನ್ ಗಳಿಸಿದ ಭಾರತದ ದಾಂಡಿಗರು

ಸಚಿನ್ ತೆಂಡುಲ್ಕರ್-39 ಏಕದಿನಗಳಲ್ಲಿ 1,573 ರನ್

ವಿರಾಟ್ ಕೊಹ್ಲಿ-27 ಏಕದಿನಗಳಲ್ಲಿ 1,387 ರನ್

ರಾಹುಲ್ ದ್ರಾವಿಡ್-40 ಏಕದಿನಗಳಲ್ಲಿ 1,348 ರನ್

ಸೌರವ್ ಗಂಗುಲಿ-27 ಏಕದಿನಗಳಲ್ಲಿ 1,142 ರನ್

ಮುಹಮ್ಮದ್ ಅಝರುದ್ದೀನ್-43 ಏಕದಿನಗಳಲ್ಲಿ 998

ಯುವರಾಜ್ ಸಿಂಗ್-31 ಏಕದಿನಗಳಲ್ಲಿ 978 ರನ್

ಎಂ.ಎಸ್. ಧೋನಿ-33 ಏಕದಿನಗಳಲ್ಲಿ 899 ರನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News