ಹತ್ಯೆ, ವಿಷಪ್ರಾಶನದಲ್ಲಿ ಪುಟಿನ್ ಶಾಮೀಲು ಎಂದ ಟ್ರಂಪ್!

Update: 2018-10-16 16:42 GMT

ವಾಶಿಂಗ್ಟನ್, ಅ. 16: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ‘ಹತ್ಯೆಗಳು’ ಮತ್ತು ‘ವಿಷಪ್ರಾಶನ’ಗಳಲ್ಲಿ ಶಾಮೀಲಾಗಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಆದಾಗ್ಯೂ, ಅದೇನೂ ದೊಡ್ಡ ವಿಷಯವಲ್ಲ, ಯಾಕೆಂದರೆ ಅಂಥ ಘಟನೆಗಳು ನಮ್ಮ ದೇಶದಲ್ಲಿ ನಡೆದಿಲ್ಲ’’ ಎಂದಿದ್ದಾರೆ.

ಇದು ರಶ್ಯ ಅಧ್ಯಕ್ಷರ ಬಗ್ಗೆ ಅಮೆರಿಕ ಅಧ್ಯಕ್ಷರು ಈವರೆಗೆ ನೀಡಿರುವ ಹೇಳಿಕೆಗಳಲ್ಲೇ ಅತ್ಯಂತ ಕಠಿಣವಾಗಿದೆ.

ಸಿಬಿಎಸ್ ನ್ಯೂಸ್ ಚಾನೆಲ್‌ನ ‘60 ಮಿನಿಟ್ಸ್’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಮಾತುಗಳನ್ನು ಹೇಳಿದ್ದಾರೆ.

ಅಮೆರಿಕದ ಚುನಾವಣೆಗಳಲ್ಲಿ ಚೀನಾ ಹಸ್ತಕ್ಷೇಪ ನಡೆಸುತ್ತಿದೆ ಎಂಬುದಾಗಿ ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.

ಚೀನಾದೊಂದಿಗಿನ ವಾಣಿಜ್ಯ ಸಮರವು ವಾಸ್ತವಿಕವಾಗಿ ಸಣ್ಣದೊಂದು ‘ಸಮರ’ವಾಗಿದೆ ಎಂದು ಅವರು ಹೇಳಿದರು.

ಹತ್ಯೆಗಳು ಮತ್ತು ವಿಷಪ್ರಾಶನ ಪ್ರಕರಣಗಳಲ್ಲಿ ವ್ಲಾದಿಮಿರ್ ಪುಟಿನ್ ಶಾಮೀಲಾಗಿರುವುದನ್ನು ನೀವು ನಂಬುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘‘ಬಹುಷಃ ಹೌದು... ಬಹುಷಃ...’’ ಎಂದುತ್ತರಿಸಿದರು.

‘‘ಆದರೆ, ಅದೇನೂ ನಮ್ಮ ದೇಶದಲ್ಲಿ ನಡೆದಿಲ್ಲ’’ ಎಂದರು.

ರಶ್ಯದ ಮಾಜಿ ಬೇಹುಗಾರ ಮತ್ತು ಅವರ ಮಗಳಿಗೆ ಬ್ರಿಟನ್‌ನಲ್ಲಿ ವಿಷಪ್ರಾಶನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕ ಮತ್ತು ಅದರ ಪಾಶ್ಚಾತ್ಯ ಮಿತ್ರದೇಶಗಳು ಆಗಸ್ಟ್‌ನಲ್ಲಿ ರಶ್ಯ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ವಿಷಪ್ರಾಶನದಲ್ಲಿ ತನ್ನ ಪಾತ್ರವನ್ನು ರಶ್ಯ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News