ಜಾಗತಿಕ ವಿಜ್ಞಾನ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 3 ಭಾರತೀಯ ವಿದ್ಯಾರ್ಥಿಗಳು

Update: 2018-10-16 17:08 GMT

ವಾಶಿಂಗ್ಟನ್, ಅ. 16: ಹದಿಹರೆಯದವರಿಗಾಗಿ ನಡೆಸಲಾಗುವ ವಾರ್ಷಿಕ ಜಾಗತಿಕ ವಿಜ್ಞಾನ ಸ್ಪರ್ಧೆ ‘ಬ್ರೇಕ್‌ತ್ರೂ ಜೂನಿಯರ್ ಚಾಲೆಂಜ್’ನ ಫೈನಲ್‌ಗೆ ಮೂವರು ಭಾರತೀಯ ವಿದ್ಯಾರ್ಥಿಗಳು ತಲುಪಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದಿಂದ ಒಟ್ಟು 12,000ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ ಹಾಗೂ ಅವರ ಪೈಕಿ ಕೇವಲ 15 ಮಂದಿ ಫೈನಲ್ ತಲುಪಿದ್ದಾರೆ.

ಭೌತ ಅಥವಾ ಜೀವ ವಿಜ್ಞಾನದ ಕಠಿಣ ಕಲ್ಪನೆಗಳು ಮತ್ತು ಸಿದ್ಧಾಂತಗಳನ್ನು ವಿವರಿಸುವ ವೀಡಿಯೊಗಳನ್ನು ಸ್ಪರ್ಧಿಗಳು ಸಲ್ಲಿಸಬೇಕಾಗುತ್ತದೆ.

ಅಂತಿಮ ಸುತ್ತು ತಲುಪಿರುವ ಭಾರತೀಯರೆಂದರೆ- ಬೆಂಗಳೂರಿನ 16 ವರ್ಷದ ಸಮಯ್ ಗೋದಿಕಾ ಮತ್ತು 16 ವರ್ಷದ ನಿಖಿಯಾ ಶಂಶೀರ್ ಹಾಗೂ ದಿಲ್ಲಿಯ 18 ವರ್ಷದ ಕಾವ್ಯಾ ನೇಗಿ.

ವಿಜೇತರನ್ನು ನವೆಂಬರ್ 4ರಂದು ಸಿಲಿಕಾನ್ ವ್ಯಾಲಿಯಲ್ಲಿ ಘೋಷಿಸಲಾಗುವುದು. ವಿಜೇತರಿಗೆ 2.5 ಲಕ್ಷ ಡಾಲರ್ (ಸುಮಾರು 1.83 ಕೋಟಿ ರೂಪಾಯಿ) ವೌಲ್ಯದ ವಿದ್ಯಾರ್ಥಿವೇತನ ಲಭಿಸುವುದು.

ವಿಜೇತ ವಿದ್ಯಾರ್ಥಿಗೆ ಪ್ರೇರಣೆ ನೀಡಿದ ವಿಜ್ಞಾನ ಶಿಕ್ಷಕನಿಗೆ 50,000 ಡಾಲರ್ (ಸುಮಾರು 36.67 ಲಕ್ಷ ರೂಪಾಯಿ) ಬಹುಮಾನ ದೊರೆಯುವುದು. ವಿಜೇತರ ಶಾಲೆಗೆ 1 ಲಕ್ಷ ಡಾಲರ್ (ಸುಮಾರು 73.50 ಲಕ್ಷ ರೂಪಾಯಿ) ಮೌಲ್ಯದ ಅತ್ಯಾಧುನಿಕ ಪ್ರಯೋಗಾಲಯ ನೀಡಲಾಗುವುದು.

ಜನಪ್ರಿಯ ಮತ ಸ್ಪರ್ಧೆಯಲ್ಲಿ ನಿಖಿಯಾ ಅತಿ ಹೆಚ್ಚು ಅಂಕ ಗಳಿಸಿದರು. ಅವರಿಗೆ 25,000ಕ್ಕೂ ಅಧಿಕ ‘ಲೈಕ್’ಗಳು ಸಿಕ್ಕಿದವು. ಅವರು ಅಂತಿಮ ಸುತ್ತಿಗೆ ನೇರ ಪ್ರವೇಶ ಪಡೆಯುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News