ಡಿಎನ್‌ಎ ಪರೀಕ್ಷೆ ಬಗ್ಗೆ ಟ್ರಂಪ್ ಹೇಳಿಕೆ ಅಸಹ್ಯಕರ: ಸೆನೆಟರ್ ಎಲಿಝಬೆತ್ ವಾರನ್

Update: 2018-10-16 17:56 GMT

ವಾಶಿಂಗ್ಟನ್, ಅ. 16: “ನನ್ನ ಮೂಲ ಅಮೆರಿಕನ್ ಪರಂಪರೆಯನ್ನು ಸಾಬೀತುಪಡಿಸಲು ನನ್ನ ಮೇಲೆ ನಡೆಸುವ ಡಿಎನ್‌ಎ ಪರೀಕ್ಷೆಯ ಮೇಲುಸ್ತುವಾರಿಯನ್ನು ಸ್ವತಃ ತಾನೇ ನೋಡಿಕೊಳ್ಳುವುದಾಗಿ” ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಅಸಹ್ಯಕರವಾಗಿದೆ ಎಂದು ಸೆನೆಟರ್ ಎಲಿಝಬೆತ್ ವಾರನ್ ಹೇಳಿದ್ದಾರೆ.

“ನಾನು ಸೇರಿದಂತೆ ತನ್ನ ವಿರುದ್ಧ ನಿಲ್ಲುವ ಮಹಿಳೆಯರಿಗೆ ಅಧ್ಯಕ್ಷರು ‘ಅಸಹ್ಯಕರ ದೈಹಿಕ ಬೆದರಿಕೆ’ಗಳನ್ನು ಹಾಕುತ್ತಾರೆ” ಎಂದು ಎಲಿಝಬೆತ್ ಸೋಮವಾರ ಟ್ವೀಟ್ ಮಾಡಿದ್ದಾರೆ.

   ‘‘ತನಗೆ ವಿರುದ್ಧವಾಗಿ ನಿಲ್ಲುವ ಮಹಿಳೆಯರಿಗೆ ಅವರು ಏನು ಮಾಡುತ್ತಾ ಬಂದಿದ್ದಾರೋ ಅದನ್ನು ನನಗೆ ಮಾಡಲು ಅವರೀಗ ಪ್ರಯತ್ನಿಸುತ್ತಿದ್ದಾರೆ. ಅಶ್ಲೀಲ ಭಾಷೆಯಿಂದ ಬೈಯುವುದು, ವೈಯಕ್ತಿಕ ದಾಳಿ ನಡೆಸುವುದು, ತನ್ನ ಬಗ್ಗೆ ಹೆಮ್ಮೆಪಟ್ಟುಕೊಳ್ಳಲು ನಮ್ಮಲ್ಲಿ ಕೀಳರಿಮೆ ಹುಟ್ಟಿಸುವುದು- ಮುಂತಾದ ತಂತ್ರಗಳನ್ನು ಅವರು ಅನುಸರಿಸುತ್ತಾರೆ’’ ಎಂದು ಮ್ಯಾಸಚುಸೆಟ್ಸ್‌ನ ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಹೇಳಿದರು.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಎದುರಾಳಿಯಾಗಿ ಡೆಮಾಕ್ರಟಿಕ್ ಪಕ್ಷದಿಂದ ಎಲಿಝಬೆತ್ ವಾರನ್ ಸ್ಪರ್ಧಿಸುತ್ತಾರೆಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಅವರ ಅಮೆರಿಕನ್ ಮೂಲದ ಬಗ್ಗೆ ಟ್ರಂಪ್ ವ್ಯಂಗ್ಯವಾಡಿದ್ದಾರೆ.

ತನ್ನ ವಂಶವಾಹಿಯಲ್ಲಿ ಮೂಲ ಅಮೆರಿಕನ್ ಲಕ್ಷಣಗಳಿರುವುದನ್ನು ತೋರಿಸುವ ಡಿಎನ್‌ಎ ಪರೀಕ್ಷೆಯ ಫಲಿತಾಂಶವನ್ನು ಎಲಿಝಬೆತ್ ಸೋಮವಾರ ಬೆಳಗ್ಗೆ ಪ್ರಕಟಿಸಿದ್ದರು. ಆದಾಗ್ಯೂ, ಪೂರ್ವಜರು ಆರರಿಂದ 10 ತಲೆಮಾರುಗಳ ಹಿಂದೆ ವಾಸಿಸಿರಬಹುದು ಎಂದು ಪರೀಕ್ಷೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News