ಶಬರಿಮಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ: ನಾಲ್ವರು ವರದಿಗಾರ್ತಿಯರ ಮೇಲೆ ಪ್ರತಿಭಟನಕಾರರಿಂದ ದಾಳಿ

Update: 2018-10-17 10:08 GMT
ಫೋಟೊಕೃಪೆ: ndtv.com

ತಿರುವನಂತಪುರಂ, ಅ.17: ಶಬರಿಮಲೆ ದೇವಸ್ಥಾನಕ್ಕೆ ವರದಿಗೆಂದು ತೆರಳಿದ್ದ ನಾಲ್ವರು ಪತ್ರಕರ್ತರ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ವರದಿ ಮಾಡಲು ಸ್ಥಳಕ್ಕೆ ತೆರಳಿದ್ದ ಎನ್ ಡಿಟಿವಿ ಪತ್ರಕರ್ತೆ ಸ್ನೇಹಾ ಮೇರಿ ಕೋಶಿ ಮತ್ತು ಕ್ಯಾಮರಾಮ್ಯಾನ್ ಎಸ್.ಪಿ. ಬಾಬು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರತಿಭಟನಕಾರರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ ಸಿಎನ್ ಎನ್ ನ್ಯೂಸ್ 18 ವರದಿಗಾರ್ತಿ ಹಾಗು ರಿಪಬ್ಲಿಕ್ ಟಿವಿ ವರದಿಗಾರ್ತಿ ಮೇಲೆ ದಾಳಿ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ದಿ ನ್ಯೂಸ್ ಮಿನಿಟ್’ ವೆಬ್ ಸೈಟ್ ವರದಿಗಾರ್ತಿ ಸರಿತಾ ಎಸ್ ಬಾಲನ್ ಅವರ ಮೇಲೆ ಪಂಬಾ ಎಂಬಲ್ಲಿ ಪ್ರತಿಭಟನಕಾರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಬರಿಮಲೆ ಭಕ್ತರು ಪ್ರಯಾಣಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸರಿತಾ ಅವರಿದ್ದಾಗ ಸುಮಾರು 20 ಮಂದಿಯಷ್ಟಿದ್ದ ಪುರುಷರ ಗುಂಪು ಬಸ್ಸನ್ನು ಸುತ್ತುವರಿದು ಆಕೆಯನ್ನು ಬಸ್ಸಿನಿಂದ ಹೊರಕ್ಕೆಳೆಯಲು ಯತ್ನಿಸಿದೆ. ಶಬರಿಮಲೆ ಪ್ರತಿಭಟನೆಗಳ ವರದಿ ಮಾಡಲೆಂದು ಸರಿತಾ ಬಸ್ಸಿನಲ್ಲಿದ್ದಾಗ ಕರ್ಮ ಸಮಿತಿಯವರು ಅದನ್ನು `ತಪಾಸಣೆ' ನಡೆಸಿದ್ದರು. ಅಕೆಯನ್ನು ಆ ಗುಂಪು ಬೆದರಿಸಿದ್ದು ಮಾತ್ರವಲ್ಲದೆ ದೈಹಿಕ ಹಲ್ಲೆ ನಡೆಸಿ ನಿಂದಿಸಿದೆ ಎಂದು ಆರೋಪಿಸಲಾಗಿದೆ.

ಸರಿತಾ ಈಗ ಪೊಲೀಸ್ ಠಾಣೆಯಲ್ಲಿದ್ದರೂ ಠಾಣೆಯ ಸುತ್ತ ಭಕ್ತರೆಂದು ಹೇಳಿಕೊಳ್ಳುತ್ತಿರುವ ನೂರಾರು ಮಂದಿ ಜಮಾಯಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News