ಎಚ್ಚರಿಕೆ, ಸುಲಭವಾಗಿ ಸಿಗುವ ಈ ಜನಪ್ರಿಯ ಔಷಧಿ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು !

Update: 2018-10-17 15:09 GMT

ತಲೆನೋವು, ಜ್ವರ, ಮೈಕೈ ನೋವು ಇತ್ಯಾದಿಗಳು ಕಾಣಿಸಿಕೊಂಡಾಗ ಹೆಚ್ಚಿನವರು ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಾಗುವ ಎಸಿಟಾಮಿನೊಫೆನ್ ಎಂದೂ ಕರೆಯಲಾಗುವ ಪ್ಯಾರಾಸಿಟಾಮಲ್ ಮಾತ್ರೆಗಳನ್ನು ನುಂಗುತ್ತಾರೆ. ಇಂತಹವರಿಗೆ ಎಚ್ಚರಿಕೆಯ ಗಂಟೆ ಈಗ ಮೊಳಗಿದೆ. ಪ್ಯಾರಾಸಿಟಾಮಲ್ ಯಕೃತ್ತಿನ ತೀವ್ಯ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವುದು ಇತ್ತೀಚಿನ ಸಂಶೋಧನೆಯೊಂದರಲ್ಲಿ ಬೆಳಕಿಗೆ ಬಂದಿದೆ.

ಪ್ಯಾರಾಸಿಟಾಮಲ್ ಯಕೃತ್ತಿನಲ್ಲಿ ಸಿಸ್ಟೀನ್ ಎಂದು ಕರೆಯಲಾಗುವ ಆ್ಯಮಿನೊ ಆ್ಯಸಿಡ್‌ನೊಂದಿಗೆ ಪ್ರೊಟೀನ್‌ಗಳನ್ನು ಸಹಸಂಯೋಜಕ ಬಂಧಕ್ಕೊಳಪಡಿಸುವ ನೂತನ ಸಂಯುಕ್ತವಾಗಿ ಪರಿವರ್ತನೆಗೊಳ್ಳುತ್ತದೆ. ಈ ಸಹಸಂಯೋಜಕ ಬಂಧಗಳು ಪ್ಯಾರಾಸಿಟಾಮಲ್‌ನ ವಿಷಾಕ್ತತೆಗೆ ಪೂರಕವಾಗುತ್ತವೆ,ಆದರೆ ಯಕೃತ್ತಿನ ವೈಫಲ್ಯದಲ್ಲಿ ಸಂಪೂರ್ಣ ಪಾತ್ರ ಹೊಂದಿರುವುದಿಲ್ಲ. ಈ ಸಂಯುಕ್ತವು ಜೀವಕೋಶಗಳಿಗೆ ಶಕ್ತಿಯನ್ನು ಪೂರೈಸುವ ಮೈಟೊಕಾಂಡ್ರಿಯಾದ ಚಟುವಟಿಕೆಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಆದರೆ ಮೈಟೊಕಾಂಡ್ರಿಯಾದಲ್ಲಿನ ಕೆಲವು ಕಿಣ್ವಗಳೊಂದಿಗೆ ನೇರ ಬಂಧಕ್ಕೊಳಪಡುವುದಿಲ್ಲ.

ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿಯ ಸಂಶೋಧಕರು ನೂತನ ಮಾರ್ಗವೊಂದನ್ನು ಕಂಡುಕೊಂಡು ಪ್ಯಾರಾಸಿಟಾಮಲ್‌ನ ವಿಭಜನೆಯಿಂದ ಉಂಟಾಗುವ ನೂತನ ಸಂಯುಕ್ತವು ಯಕೃತ್ತಿನಲ್ಲಿಯ ಪ್ರೋಟಿನ್‌ಗಳ ಮೇಲೆ ಹೇಗೆ ದುಷ್ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

ಗ್ಲುಟೇಥೈಯೊನೈಲೇಟೆಡ್ ಪ್ರೋಟಿನ್‌ಗಳನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ವಿಧಾನವನ್ನು ಕಂಡುಕೊಂಡ ಅವರು ಅದನ್ನು ಎಸಿಟಾಮಿನೊಫೆನ್‌ನಿಂದ ಪರಿಣಾಮಕ್ಕೊಳಗಾದ ಜೀವಕೋಶಗಳಿಗೆ ಅನ್ವಯಿಸಿದ್ದರು. ಒತ್ತಡದ ಸ್ಥಿತಿಗಳಲ್ಲಿ ಆಮ್ಲಜನಕದಿಂದ ಹಾನಿಯಿಂದ ರಕ್ಷಿಸಲು ಸಿಸ್ಟೀನ್ ರೆಸಿಡ್ಯೂಗಳಿಗೆ ಗ್ಲುಟಾಥೈಯೋನ್ ಅನ್ನು ಸೇರಿಸಲಾಗುತ್ತದೆ. ಎಸಿಟಾಮಿನೊಫೆನ್ ಮತ್ತು ಅದರ ವಿಭಜಿತ ಉತ್ಪನ್ನ ಗ್ಲುಟೇಥೈಯೊನೈಲೇಷನ್‌ನ್ನು ಕ್ರಿಯಾಶೀಲಗೊಳಿಸುತ್ತವೆ ಎಂದಿರುವ ಸಂಶೋಧಕರು,ಈ ರೂಪಾಂತರವು ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸುವ ಮೈಟುಕಾಂಡ್ರಿಯಾದ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರೋಟಿನ್‌ಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಇದು ಚಯಾಪಚಯ ನಿಷ್ಕ್ರಿಯತೆ ಮತ್ತು ಎಸಿಟಾಮಿನೊಫೆನ್ ವಿಷಾಕ್ತತೆಯಂತಹ ಇತರ ಪರಿಣಾಮಗಳಿಗೆ ಕಾರಣವಾಗುತ್ತದೆ. ಇದು ಯಕೃತ್ತಿನ ಕ್ಷಮತೆಯನ್ನು ಕುಗ್ಗಿಸಿ ಅಂತಿಮವಾಗಿ ಅದರ ವೈಫಲ್ಯಕ್ಕೆ ಕಾರಣವಾಗಬಹುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News