ಬರಗಾಲದ ಕರಾಳ ಛಾಯೆ

Update: 2018-10-17 18:32 GMT

ಕರ್ನಾಟಕದ ಉತ್ತರ ಭಾಗ ಮಾತ್ರವಲ್ಲ ಇನ್ನಿತರ ಕೆಲ ಜಿಲ್ಲೆಗಳಲ್ಲೂ ತೀವ್ರಸ್ವರೂಪದ ಬರದ ಛಾಯೆ ಕವಿದಿದೆ. ಮಳೆಯ ತೀವ್ರ ಕೊರತೆ ಉಂಟಾಗಿದೆ. ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರ ಈಗಾಗಲೇ ಘೋಷಿಸಿದೆ. ಸೋಮವಾರ ಮತ್ತೆ 14 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. 2018-19 ವರ್ಷದ ಮುಂಗಾರು ಹಂಗಾಮಿಗೆ ಈಗಾಗಲೇ ಒಟ್ಟು 23 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದ ಸುಮಾರು ನೂರು ತಾಲೂಕುಗಳಲ್ಲಿ ಬರಪರಿಸ್ಥಿತಿ ಮತ್ತು ಬೆಳೆ ನಷ್ಟದ ಬಗ್ಗೆ ವರದಿ ತಯಾರಿಸಿ ಕೇಂದ್ರಕ್ಕೆ ಕಳುಹಿಸಲು ಸಮೀಕ್ಷೆ ಕಾರ್ಯಕ್ಕೆ ಕಂದಾಯ ಇಲಾಖೆ ಚಾಲನೆ ನೀಡಿದೆ. ಬರಪೀಡಿತ ಮತ್ತು ಬರದ ಛಾಯೆ ಕಾಣಿಸಿಕೊಂಡಿರುವ ತಾಲೂಕುಗಳಲ್ಲಿ ಈಗಾಗಲೇ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಕುಡಿಯುವ ನೀರಿನ ಸಮಸ್ಯೆ, ಮೇವಿನ ಅಭಾವ, ಬೆಳೆ ನಷ್ಟ ಅಂದಾಜು ಮಾಡಲಾಗುತ್ತದೆ. ಮಳೆ ಕೊರತೆ ಅಥವಾ ಮೂರುವಾರ ಹಾಗೂ ಅದಕ್ಕಿಂತ ಹೆಚ್ಚಿಗೆ ಶುಷ್ಕ ವಾತಾವರಣವಿದ್ದರೆ ಮತ್ತು ಅಂತರ್ಜಲ ಕುಸಿತ ಉಂಟಾಗಿದ್ದರೆ ಇದನ್ನೆಲ್ಲ ಮಾನದಂಡವಾಗಿ ಇಟ್ಟುಕೊಂಡು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತದೆ, ಉತ್ತರ ಕರ್ನಾಟಕದ 86 ತಾಲೂಕುಗಳ ಜೊತೆಗೆ ಬೆಂಗಳೂರು ನಗರ ಜಿಲ್ಲೆಯ ಆನೆಕಲ್, ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ತುಮಕೂರು, ತುರುವೇಕೆರೆ, ಹೊಳಲ್ಕೆರೆ, ಹೊಸದುರ್ಗ, ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು, ಮಂಡ್ಯದ ಪಾಂಡವರ, ಬೀದರ್ ಜಿಲ್ಲೆಯ ಔರಾದ, ಬಸವಕಲ್ಯಾಣ, ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಜಿಲ್ಲೆಯ ಬೀಳಗಿ, ಮುಧೋಳ ತಾಲೂಕುಗಳನ್ನು ಬರಪೀಡಿತ ಎಂದು ಸಾರಲಾಗಿದೆ.

ವಾಸ್ತವವಾಗಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸರಕಾರ ತಡವಾಗಿ ಸ್ಪಂದಿಸುತ್ತಿದೆ. ಕಳೆದ ಎರಡು ತಿಂಗಳುಗಳಿಂದ ಪರಿಸ್ಥಿತಿ ಹದಗೆಡುತ್ತಲೇ ಬಂದಿದೆ. ಆದರೆ ಕೊಡಗು ಮುಂತಾದ ಕಡೆ ಅತಿವೃಷ್ಟಿ, ಭೂಕುಸಿತ ಮುಂತಾದ ನೈಸರ್ಗಿಕ ವಿಕೋಪದಿಂದಾಗಿ ಸರಕಾರ ಆ ಕಡೆ ಗಮನವನ್ನು ಕೇಂದ್ರೀಕರಿಸಬೇಕಾಯಿತು. ಈಗ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿದೆ. ತೊಗರಿಯನ್ನು ಬೆಳೆಯುವ ಕಲಬುರಗಿ ಮತ್ತು ಬಿಜಾಪುರದಲ್ಲಿ ಹಾಹಾಕಾರ ಉಂಟಾಗಿದೆ. ತೇವಾಂಶದ ಕೊರತೆಯಿಂದಾಗಿ ಮುಂಗಾರಿನ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ ಬೆಳೆಗೆ ಗಂಡಾಂತರ ಬಂದಿದೆ. ಇಳುವರಿಯಲ್ಲಿ ಗಣನೀಯ ಕುಸಿತ ಉಂಟಾಗುವ ಭೀತಿ ಎದುರಾಗಿದೆ. ಹೂ ಬಿಡುವ ಹಾಗೂ ಕಾಯಿಯಾಗುವ ಹಂತದಲ್ಲಿರುವ ತೊಗರಿ ಬೆಳೆಗೆ ಮಳೆಯ ತೀವ್ರ ಕೊರತೆ ಕಾಡುತ್ತಿದೆ. ಹೂವುಗಳು ಉದುರುತ್ತಿವೆ. ಹತ್ತಿ ಬೆಳೆಗೂ ಇದೇ ದುರ್ಗತಿ ಬಂದಿದೆ. ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಬೇಸಾಯಕ್ಕೆ ಮಾಡಿದ ಖರ್ಚು ವೆಚ್ಚ ಹೆಚ್ಚಾಗಿ ರೈತರು ಸಾಲದ ಸುಳಿಗೆ ಸಿಲುಕುವ ಭೀತಿ ಎದುರಾಗಿದೆ.

ಈಗ ಸಾಲ ಮಾಡಿ ದುಬಾರಿ ಹತ್ತಿ ಬೀಜ ತಂದು, ಬಿತ್ತನೆ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಮಳೆ ಕೈಕೊಟ್ಟಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಬಾರಿ ಬೇಸಾಯಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ ಎಂದು ರೈತರು ದಿಗಿಲುಗೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಬಿಜಾಪುರ, ಕಲಬುರಗಿ, ರಾಯಚೂರು, ಕೊಪ್ಪಳದಂಥ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಬಿಜಾಪುರ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಸರಕಾರವೇನೊ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ. ಆದರೆ ಈ ಟ್ಯಾಂಕರ್ ನೀರು ಯಾವುದಕ್ಕೂ ಸಾಲುವುದಿಲ್ಲ, ಐದಾರು ಜನರಿರುವ ಒಂದು ಮನೆಗೆ ಎರಡು ಬಕೆಟ್ ನೀರು ಸಿಕ್ಕರೆ ಪುಣ್ಯ ಎನ್ನುವಂತಾಗಿದೆ. ಈ ಎರಡೇ ಬಕೆಟ್ ನೀರಿನಲ್ಲಿ ಮನೆ ಮಂದಿಯೆಲ್ಲ ದಿನ ದೂಡಬೇಕಾಗಿದೆ. ಸ್ನಾನಕ್ಕೆ ನೀರಿಲ್ಲ, ಕೆರೆ ಬಾವಿಗಳು ಬತ್ತಿ ಹೋಗಿವೆ. ಕೆಲ ಉಳ್ಳವರ ಕೊಳವೆ ಬಾವಿಗಳಲ್ಲಿ ಎರಡು ರೂಪಾಯಿಗೆ ಒಂದು ಕೊಡಪಾನ ಇಲ್ಲವೇ ಬಕೆಟ್ ನೀರು ಕೊಡುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಅಧಿಕಾರಿಗಳು ಸರಿಯಾಗಿ ಲೆಕ್ಕ ಕೊಡುತ್ತಿಲ್ಲ.

ಸ್ಥಳೀಯವಾಗಿ ಒಂದು ದಿನದ ಕೆಲಸಕ್ಕೆ 249 ರೂಪಾಯಿ ಕೊಡಬೇಕೆಂದಿದೆ. ಅದು ಕಾಗದದಲ್ಲೇ ಉಳಿದಿದೆ. ನಕಲಿ ಬಿಲ್ಲು ತಯಾರಿಸಿ ಹಣ ಹೊಡೆಯಲಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ನೂರು ದಿನದ ಕೆಲಸ ಸಾಕಾಗುವುದಿಲ್ಲ, ಕನಿಷ್ಠ 300 ದಿನದ ಕೆಲಸ ಒದಗಿಸಬೇಕೆಂದು ಬರಪೀಡಿತ ಪ್ರದೇಶದ ಜನ ಆಗ್ರಹಿಸುತ್ತಿದ್ದಾರೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕು. ಮುಂಗಾರು ಜೊತೆಗೆ ಹಿಂಗಾರು ಮಳೆಯೂ ಕೈಕೊಟ್ಟಿದೆ. ಹೀಗಾಗಿ ಪರಿಸ್ಥಿತಿ ಗಂಭೀರವಾಗಿದೆ. ಪರ್ಯಾಯ ಬೆಳೆ ಬೆಳೆಯಲು ಅಧಿಕಾರಿಗಳು ಸಲಹೆ ನೀಡುತ್ತಿದ್ದರೂ ಪ್ರಯೋಜನಕಾರಿಯಾಗಿಲ್ಲ, ಮಳೆ ಅಭಾವದಿಂದ ಇಂತಹ ಸಲಹೆ ನಿರರ್ಥಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತಂದು ಹೆಚ್ಚಿನ ನೆರವಿಗೆ ಒತ್ತಾಯಿಸಿ, ಜನರಿಗೆ ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರಿನ ಅಭಾವ ಕೊನೆಗಾಣಿಸಬೇಕು. ಬರಪೀಡಿತ ಪ್ರದೇಶಗಳಿಂದ ಜನರು ವಲಸೆ ಹೋಗುವುದನ್ನು ತಡೆಯಬೇಕಾಗಿದೆ. ಮುಖ್ಯಮಂತ್ರಿಯವರು ತುರ್ತಾಗಿ ಬರಪೀಡಿತ ಪ್ರದೇಶಗಳ ಪ್ರವಾಸ ಕೈಗೊಳ್ಳಲಿ.

ಉತ್ತರ ಕರ್ನಾಟಕ ಮಾತ್ರವಲ್ಲ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳು ಕೂಡಾ ಶಾಶ್ವತ ಬರಪೀಡಿತ ಜಿಲ್ಲೆಗಳಾಗಿವೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳು ಹಲವಾರು ವರ್ಷಗಳಿಂದ ಬರದ ಬೇಗೆಗೆ ಸಿಲುಕಿ ಈ ಜಿಲ್ಲೆಗಳ ಬರ ಪರಿಹಾರಕ್ಕಾಗಿ ಶಾಶ್ವತವಾದ ಯೋಜನೆಯನ್ನು ಸರಕಾರ ರೂಪಿಸಬೇಕು. ಇಲ್ಲಿನ ಕೆರೆಗಳ ಹೂಳೆತ್ತಿ ಸುಸ್ಥಿತಿಗೆ ತರಬೇಕು. ಅಲ್ಲಿ ಗಿಡ ಮರಗಳನ್ನು ಬೆಳೆಸಲು ಯೋಜನೆ ರೂಪಿಸಬೇಕು. ಪ್ರತಿ ಬಾರಿ ಅಲ್ಲಿನ ಜನತೆ ಅನುಭವಿಸುವ ಯಾತನೆ ಅಸಹನೀಯವಾಗಿದೆ.

ಈ ಬಾರಿಯಂತೂ ಬರ ಪರಿಸ್ಥಿತಿ ಗಂಭೀರವಾಗಿದೆ. ಅಧಿಕಾರಿಗಳು ತೋರಿಸುವ ಪರಿಹಾರ ಕಾಮಗಾರಿಗಳ ಅಂಕಿ ಸಂಖ್ಯೆಗಳನ್ನು ನಂಬಿ ಕುಳಿತರೆ ಸಾಲದು. ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಸಂಬಂಧಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಹಾರ ಕಾಮಗಾರಿಗಳು ಹೇಗೆ ನಡೆದಿವೆ ಎಂಬ ಬಗ್ಗೆ ಪ್ರತ್ಯಕ್ಷ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News