ಪ್ರೀತಿ ಇದೆಯೇ ಹೊರತು 'ಜಿಹಾದ್' ಇಲ್ಲ ಎಂದ ಎನ್‍ಐಎ

Update: 2018-10-18 09:08 GMT

ತಿರುವನಂತಪುರಂ, ಅ.18: ಕೇರಳದಲ್ಲಿ ನಡೆದ ಅಂತರ್-ಧರ್ಮೀಯ ವಿವಾಹಗಳ ಕುರಿತಂತೆ ರಾಷ್ಟ್ರೀಯ ತನಿಖಾ ಏಜನ್ಸಿ (ಎನ್‍ಐಎ) ನಡೆಸಿದ ತನಿಖೆ ಅಂತಿಮಗೊಂಡಿದ್ದು, 'ಲವ್ ಜಿಹಾದ್' ಎಂದು ಬಣ್ಣಿಸಲಾಗಿದ್ದ ಯಾವುದೇ ಪ್ರಕರಣಗಳಲ್ಲಿ ಬಲವಂತದ ವಿವಾಹ ನಡೆದ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು hindustantimes.com ವರದಿ ಮಾಡಿದೆ.

ಭಾರೀ ಸುದ್ದಿ ಮಾಡಿದ್ದ ಹಾದಿಯಾ ಅಂತರ್-ಧರ್ಮೀಯ ವಿವಾಹ ಪ್ರಕರಣ ‘ಲವ್ ಜಿಹಾದ್’ ಎಂದು ಹಲವರು ಆರೋಪಿಸಿದ್ದ  ಹಿನ್ನೆಲೆಯಲ್ಲಿ ಎನ್‍ಐಎ ಈ ಪ್ರಕರಣ ಸಹಿತ ಒಟ್ಟು 11 ಅಂತರ್ ಧರ್ಮೀಯ ವಿವಾಹ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ತನಿಖಾ ಏಜನ್ಸಿಯ ಮುಂದಿದ್ದ 89 ವಿವಾಹ ಪ್ರಕರಣಗಳ ಪೈಕಿ 11 ಪ್ರಕರಣಗಳ ವಿಚಾರಣೆ ನಡೆಸಲಾಗಿತ್ತು. ಈ 89 ಪ್ರಕರಣಗಳಲ್ಲಿ ವಿವಾಹವಾದವರ ಹೆತ್ತವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸರಕಾರ ಅವುಗಳನ್ನು ಕೇರಳ ಪೊಲೀಸರ ಉಗ್ರ ನಿಗ್ರಹ ಘಟಕಕ್ಕೆ ಹಸ್ತಾಂತರಿಸಿತ್ತು.

ಈ ವಿವಾಹಗಳಿಗೆ ಸಂಬಂಧಿಸಿದಂತೆ ಪುರುಷ ಅಥವಾ ಮಹಿಳೆಯನ್ನು ಯಾವುದೇ ಬಲವಂತದಿಂದ ಮತಾಂತರಗೊಳಿಸಲಾಗಿಲ್ಲ ಎಂದು ಎನ್‍ಐಎ ವರದಿ ತೀರ್ಮಾನಕ್ಕೆ ಬಂದಿದೆಯಲ್ಲದೆ ಈ ವಿವಾಹಗಳ ಹಿಂದೆ ಯಾವುದೇ ಕ್ರಿಮಿನಲ್ ಉದ್ದೇಶವೂ ಇಲ್ಲ ಎಂದು ಹೇಳಿದೆ.

ಹೆಚ್ಚಿನ ಪ್ರಕರಣಗಳಲ್ಲಿ ಪುರುಷ ಅಥವಾ ಮಹಿಳೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜತೆ ನಂಟು ಹೊಂದಿದ ಸಂಘಟನೆಗಳು ಶಾಮೀಲಾಗಿದ್ದರೂ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಯಾವುದೇ ಪುರಾವೆ ದೊರಕಿರಲಿಲ್ಲ ಎಂದು ಎನ್‍ಐಎ ಹೇಳಿದೆ.

ತನಿಖಾ ಏಜನ್ಸಿ ಪರೀಶೀಲಿಸಿದ 11 ಪ್ರಕರಣಗಳ ಪೈಕಿ ಕನಿಷ್ಠ  ನಾಲ್ಕು ಪ್ರಕರಣಗಳಲ್ಲಿ ಹಿಂದು ಪುರುಷರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಉಳಿದ ಪ್ರಕರಣಗಳಲ್ಲಿ ಹಿಂದು ಮಹಿಳೆಯರು ಮುಸ್ಲಿಂ ಪುರುಷರನ್ನು ವಿವಾಹವಾಗಿದ್ದರು. ಕನಿಷ್ಠ ಮೂರು ಪ್ರಕರಣಗಳಲ್ಲಿ ಮತಾಂತರ ಯತ್ನ ಯಶಸ್ವಿಯಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News