ಅತಿಯಾದ ಸಕ್ಕರೆ ಖಿನ್ನತೆಗೆ ಕಾರಣವಾಗುತ್ತದೆಯೇ...?

Update: 2018-10-18 12:02 GMT

2020ರ ವೇಳೆಗೆ ಖಿನ್ನತೆಯು ಮಾನಸಿಕ ಅಸ್ವಸ್ಥತೆಗೆ ಎರಡನೇ ಪ್ರಮುಖ ಕಾರಣವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿದೆ. ವಿಶ್ವದಲ್ಲಿ ಪ್ರತಿ ಏಳು ವ್ಯಕ್ತಿಗಳ ಪೈಕಿ ಓರ್ವರು ತಮ್ಮ ಜೀವನದಲ್ಲಿ ಖಿನ್ನತೆಗೆ ಗುರಿಯಾಗುತ್ತಾರೆ. ಖಿನ್ನತೆಯುಂಟಾಗಲು ಅನೇಕ ಕಾರಣಗಳಿವೆ,ಆದರೆ ಆಹಾರದ....ವಿಶೇಷವಾಗಿ ಸಕ್ಕರೆಯ ಪಾತ್ರದ ಬಗ್ಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ. ಮೃದು ಪಾನೀಯಗಳು ಮತ್ತು ರಸಗಳು ಸೇರಿದಂತೆ ಸಕ್ಕರೆಯನ್ನು ಸೇರಿಸಿರುವ ಆಹಾರಗಳ ಅತಿಯಾದ ಸೇವನೆಗೂ ಖಿನ್ನತೆಯ ಅಪಾಯ ಹೆಚ್ಚುವುದಕ್ಕೂ ಸಂಬಂಧವಿದೆ ಎನ್ನುವುದು ಈ ಅಧ್ಯಯನಗಳಲ್ಲಿ ಕಂಡುಬಂದಿದೆ.

►ಖಿನ್ನತೆಯೊಂದಿಗೆ ಸಕ್ಕರೆ ಹೇಗೆ ತಳುಕು ಹಾಕಿಕೊಂಡಿದೆ?

ಅತಿಯಾದ ಸಕ್ಕರೆಯ ಸೇವನೆ ಬೊಜ್ಜು,ಮಧುಮೇಹ ಮತ್ತು ಇತರ ಸಂಬಂಧಿತ ಕಾಯಿಲೆಗಳನ್ನು ಹೆಚ್ಚಿಸುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿರುವ ವಿಷಯವೇ ಆಗಿದೆ. ಆದರೆ ಮಾನಸಿಕ ಸ್ವಾಸ್ಥದಲ್ಲಿ ಸಕ್ಕರೆಯ ಪಾತ್ರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳ ಸೇವನೆಯು ಖಿನ್ನತೆಯ ಅಪಾಯವನ್ನೊಡ್ಡುವ ಸಾಮಾನ್ಯ ಕಾರಣಗಳಾಗಿವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಸಕ್ಕರೆಯು ನಮ್ಮನ್ನು ಹೇಗೆ ಖಿನ್ನತೆಯ ಅಪಾಯಕ್ಕೆ ತಳ್ಳುತ್ತದೆ ಎಂಬ ಬಗ್ಗೆ ಮಾಹಿತಿಗಳಿಲ್ಲಿವೆ.......

►ಅತಿಯಾದ ಸಕ್ಕರೆ ಉರಿಯೂತಕ್ಕೆ ಕಾರಣವಾಗುತ್ತದೆ

ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳು ಹೆಚ್ಚಾಗಿರುವ ಆಹಾರಗಳು ಉರಿಯೂತಕ್ಕೆ ಕಾರಣವಾದರೆ,ಒಮೆಗಾ-3 ಫ್ಯಾಟ್‌ಗಳು,ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧ ಆಹಾರಗಳು ಉರಿಯೂತ ಪ್ರತಿವರ್ತನೆಯನ್ನು ಕಡಿಮೆ ಮಾಡಬಹುದು. ಖಿನ್ನತೆಯಲ್ಲಿ ಉರಿಯೂತದ ಪಾತ್ರವನ್ನು ಹಲವಾರು ಅಧ್ಯಯನಗಳು ಸಾಬೀತುಗೊಳಿಸಿವೆ. ಸಂಸ್ಕರಿತ ಪಿಷ್ಟಗಳು,ಸಕ್ಕರೆ ಮತ್ತು ಸ್ಯಾಚ್ಯುರೇಟೆಡ್ ಫ್ಯಾಟ್‌ಗಳನ್ನು ಹೆಚ್ಚಾಗಿ ಮತ್ತು ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಆಹಾರಗಳು ಉರಿಯೂತದ ಅಪಾಯವನ್ನುಂಟು ಮಾಡುತ್ತವೆ. ಪೌಷ್ಟಿಕಾಂಂಶ ಸೇವನೆ ಮತ್ತು ಕೇಂದ್ರ ನರಮಂಡಳ ಹಾಗೂ ಮಾನಸಿಕ ಸ್ವಾಸ್ಥದ ಮೇಲೆ ಪರಿಣಾಮವನ್ನುಂಟು ಮಾಡುವ ನಿರೋಧಕ ಕಾರ್ಯದ ನಡುವೆ ಸಂಬಂಧವಿದೆ. ಹೀಗಾಗಿ ಉರಿಯೂತವನ್ನು ಪ್ರಚೋದಿಸುವ ಆಹಾರಗಳು ಖಿನ್ನತೆಯ ಲಕ್ಷಣಗಳಿಗೆ ಕಾರಣವಾಗುತ್ತವೆ ಎಂದು ಹೇಳಬಹುದು.

►ಸಕ್ಕರೆ ವಿಟಾಮಿನ್‌ಗಳ ಕೊರತೆಗೆ ಕಾರಣವಾಗುತ್ತದೆ

ನೈಸರ್ಗಿಕ ಸಕ್ಕರೆಯಂತಲ್ಲದೆ ಸಂಸ್ಕರಿತ ಸಕ್ಕರೆಯು ಅಗತ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುವುದಿಲ್ಲ ಮತ್ತು ಕ್ಯಾಲರಿಗಳ ಸೇವನೆಯನ್ನು ಹೆಚ್ಚಿಸುತ್ತದೆ ಅಷ್ಟೇ. ಅಲ್ಲದೆ ಅದು ಆಹಾರದ ಮೂಲಕ ದೊರೆಯುವ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಕೊಳ್ಳೆ ಹೊಡೆಯುತ್ತದೆ. ನಾವು ಸಂಸ್ಕರಿತ ಸಕ್ಕರೆಯನ್ನು ಸೇವಿಸಿದಾಗ ಅದನ್ನು ಜೀರ್ಣಿಸಲು ಶರೀರವು ದಾಸ್ತಾನಾಗಿರುವ ಪೌಷ್ಟಿಕಾಂಶಗಳನ್ನು ಬಳಸಿಕೊಳ್ಳುತ್ತದೆ ಮತ್ತು ಇದು ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ. ವಿಟಾಮಿನ್ ಡಿ ಮತ್ತು ಬಿ(ಫಾಲೇಟ್ ಮತ್ತು ವಿಟಾಮಿನ್ ಬಿ12) ಹಾಗೂ ಮ್ಯಾಗ್ನೀಷಿಯಂ ಕೊರತೆಗೂ ಖಿನ್ನತೆಗೂ ಸಂಬಂಧವಿದೆ ಎನ್ನುವುನ್ನು ಅಧ್ಯಯನಗಳು ತೋರಿಸಿವೆ. ವಿಟಾಮಿನ್ ಬಿ12ರ ತೀವ್ರ ಕೊರತೆಯು ಜ್ಞಾಪಕ ಶಕ್ತಿ ನಷ್ಟ,ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಗಳನ್ನುಂಟು ಮಾಡುತ್ತದೆ ಎನ್ನುವುದು ಅಧ್ಯಯನಗಳಲ್ಲಿ ಕಂಡು ಬಂದಿದೆ.

►ಕಾರ್ಬೊಹೈಡ್ರೇಟ್‌ಗಳು ಚಿತ್ತವೃತ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ

  ಕಾರ್ಬೊಹೈಡ್ರೇಟ್‌ಗಳು ಮಾನಸಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಅವು ನಮ್ಮ ಮೂಡ್ ಅಥವಾ ಚಿತ್ತವೃತ್ತಿ ಹಾಗು ವರ್ತನೆಗಳ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಕಾರ್ಬೊಹೈಡ್ರೇಟ್‌ಗಳು ಸಮೃದ್ಧವಾಗಿರುವ ಆಹಾರಗಳು ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುತ್ತವೆ. ಇದು ಗ್ಲುಕೋಸ್‌ನ ಹೀರುವಿಕೆಗೆ ನೆರವಾಗುತ್ತದೆ ಮತ್ತು ಟ್ರಿಪ್ಟೊಫ್ಯಾನ್ ಎಂಬ ಅಮಿನೊ ಆ್ಯಸಿಡ್ ಮಿದುಳನ್ನು ಪ್ರವೇಶಿಸುವಂತೆ ಮಾಡುತ್ತದೆ. ಟ್ರಿಪ್ಟೊಫ್ಯಾನ್ ಮಿದುಳಿನ ರಾಸಾಯನಿಕಗಳ ಮಟ್ಟಗಳನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಮತ್ತು ನಮ್ಮಲ್ಲಿ ಹಿತಕರ ಭಾವನೆಗಳನ್ನು ಉತ್ತೇಜಿಸುತ್ತದೆ.

ಮಿದುಳಿನ ಒಟ್ಟಾರೆ ಕಾರ್ಯ ನಿರ್ವಹಣೆಗೆ ಕಾರ್ಬೊಹೈಡ್ರೇಟ್‌ಗಳು ಅಗತ್ಯವಾಗಿವೆಯಾದರೂ ಸರಿಯಾದ ವಿಧದ ಕಾರ್ಬೊಹೈಡ್ರೇಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇಲ್ಲಿ ಕಾರ್ಬೊಹೈಡ್ರೇಟ್‌ಗಳ ಗುಣಮಟ್ಟ ಮುಖ್ಯವಾಗುತ್ತದೆಯೇ ಹೊರತು ಪ್ರಮಾಣವಲ್ಲ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್(ಜಿಐ) ಅನ್ನು ಹೊಂದಿರುವ ಆಹಾರಗಳನ್ನು ಸೇವಿಸುವ ಮಹಿಳೆಯರು ಹೆಚ್ಚು ಜಿಐ ಆಹಾರಗಳನ್ನು ಸೇವಿಸುವವರಿಗಿಂತ ಕಡಿಮೆ ಖಿನ್ನತೆ ಅಪಾಯವನ್ನು ಹೊಂದಿರುತ್ತಾರೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಕಡಿಮೆ ಜಿಐ ಆಹಾರಗಳು ಮಿದುಳಿನ ಕಾರ್ಯ ನಿರ್ವಹಣೆ,ಚಿತ್ತವೃತ್ತಿ ಮತ್ತು ಶಕ್ತಿ ಮಟ್ಟಗಳ ಮೇಲೆ ಸುದೀರ್ಘ ಕಾಲ ಉಳಿದುಕೊಳ್ಳುವ ಪರಿಣಾಮಗಳನ್ನು ಬೀರುವುದು ಇದಕ್ಕೆೆ ಕಾರಣವಾಗಿದೆ. ಸಿಹಿತಿಂಡಿಗಳಂತಹ ಹೆಚ್ಚಿನ ಜಿಐ ಆಹಾರಗಳು ಸಾದಾ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಇವು ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ತ್ವರಿತವಾಗಿ ಏರಿಸುತ್ತವೆ ಮತ್ತು ಚಿತ್ತವೃತ್ತಿ ಹಾಗೂ ಶಕ್ತಿ ಮಟ್ಟಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತವೆ.

ಸಕ್ಕರೆ ಮತ್ತು ಖಿನ್ನತೆ:ಅಪಾಯ ಯಾರಿಗೆ?

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಸ್ಕಕರೆ ಸೇವನೆಯಿಂದಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುವ ಅಪಾಯ ಹೆಚ್ಚಾಗಿರುತ್ತದೆ. ಪ್ರತಿದಿನ ಸುಮಾರು 67 ಗ್ರಾಂ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುವ ಪುರುಷರಲ್ಲಿ ಖಿನ್ನತೆಯ ಅಪಾಯ ಶೇ.23ರಷ್ಟು ಹೆಚ್ಚಾಗಿರುತ್ತದೆ ಎನ್ನುವುದನ್ನು ಕಳೆದ ವರ್ಷ ನಡೆಸಲಾದ ಅಧ್ಯಯನವೊಂದು ಬೆಟ್ಟು ಮಾಡಿದೆ. ಪ್ರತಿದಿನ ಸುಮಾರು 40 ಗ್ರಾಂ ಅಥವಾ ಕಡಿಮೆ ಸಕ್ಕರೆ ಸೇವಿಸುವ ಪುರುಷರಲ್ಲಿ ಖಿನ್ನತೆಯ ಅಪಾಯ ಕಡಿಮೆಯಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News