ವಿಜಯ್ ಹಝಾರೆ ಟ್ರೋಫಿ: ದಿಲ್ಲಿ ಫೈನಲ್‌ಗೆ

Update: 2018-10-18 13:22 GMT

ಬೆಂಗಳೂರು, ಅ.18: ನವದೀಪ್ ಸೈನಿ(4-30)ಅತ್ಯುತ್ತಮ ಬೌಲಿಂಗ್ ಹಾಗೂ ಪವನ್ ನೇಗಿ ಅಜೇಯ 39 ರನ್ ನೆರವಿನಿಂದ ದಿಲ್ಲಿ ತಂಡ ಜಾರ್ಖಂಡ್ ವಿರುದ್ಧದ ಎರಡನೇ ಸೆಮಿ ಫೈನಲ್ ಪಂದ್ಯವನ್ನು 2 ಎಸೆತ ಬಾಕಿ ಇರುವಾಗಲೇ 2 ವಿಕೆಟ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ದಿಲ್ಲಿ ತಂಡ ರಾಷ್ಟ್ರೀಯ ಏಕದಿನ ಟೂರ್ನಮೆಂಟ್‌ ವಿಜಯ್ ಹಝಾರೆ ಟ್ರೋಫಿನಲ್ಲಿ ಫೈನಲ್‌ಗೆ ತಲುಪಿದೆ. ಶನಿವಾರ ನಡೆಯುವ ಫೈನಲ್‌ನಲ್ಲಿ ಮುಂಬೈ ಸವಾಲನ್ನು ಎದುರಿಸಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದಿಲ್ಲಿ ನಾಯಕ ಗೌತಮ್ ಗಂಭೀರ್ ಜಾರ್ಖಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಸೈನಿ, ಕುಲ್ವಂತ್ ಖಜ್ರೊಲಿಯ(2-31) ಹಾಗೂ ವಿಜಯರಾನ್(2-33)ದಾಳಿಗೆ ಕಂಗಾಲಾದ ಜಾರ್ಖಂಡ್ 48.5 ಓವರ್‌ಗಳಲ್ಲಿ 199 ರನ್‌ಗೆ ಆಲೌಟಾಯಿತು.

ವಿರಾಟ್ ಸಿಂಗ್(71) ಸರ್ವಾಧಿಕ ಸ್ಕೋರ್ ಗಳಿಸಿದರೆ, ಆರಂಭಿಕ ಆಟಗಾರ ಆನಂದ್ ಸಿಂಗ್(36)ಹಾಗೂ ಎಸ್.ನದೀಮ್(29)ಎರಡಂಕೆಯ ಸ್ಕೋರ್ ಗಳಿಸಿದರು.

 ಗೆಲ್ಲಲು 200 ರನ್ ಗುರಿ ಪಡೆದ ದಿಲ್ಲಿ ತಂಡ 49.4 ಓವರ್‌ಗಳಲ್ಲಿ ಪ್ರಯಾಸ ಜಯ ದಾಖಲಿಸಿತು. ದಿಲ್ಲಿ ಆರಂಭವೂ ಕಳಪೆಯಾಗಿತ್ತು. 29ನೇ ಓವರ್‌ನಲ್ಲಿ 123 ರನ್‌ಗೆ ಅಗ್ರ ಐವರು ದಾಂಡಿಗರನ್ನು ಕಳೆದುಕೊಂಡಿತು.

ಔಟಾಗದೆ 39 ರನ್ ಗಳಿಸಿದ ನೇಗಿ ತಂಡಕ್ಕೆ ರೋಚಕ ಜಯ ತಂದರು. ಜಾರ್ಖಂಡ್ ಪರ ಆನಂದ್ ಸಿಂಗ್ 39ಕ್ಕೆ 3 ವಿಕೆಟ್ ಗಳನ್ನು ಪಡೆದರು. ವರುಣ್ ಆ್ಯರೊನ್(2-39) ಹಾಗೂ ನದೀಮ್(2-34)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News