ದ್ವಿತೀಯ ಟೆಸ್ಟ್: ಆಸೀಸ್ ಗೆಲುವಿಗೆ ಕಠಿಣ ಸವಾಲು ನೀಡಿದ ಪಾಕ್

Update: 2018-10-18 13:40 GMT

ಅಬುಧಾಬಿ, ಅ.18: ಬಾಬರ್ ಆಝಮ್ (99), ಸರ್ಫರಾಝ್ ಅಹ್ಮದ್(81),ಫಕಾರ್ ಝಮಾನ್(66) ಹಾಗೂ ಅಝರ್ ಅಲಿ(64)ಅರ್ಧಶತಕಗಳ ಕೊಡುಗೆ ನೆರವಿನಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯ ತಂಡಕ್ಕೆ ಎರಡನೇ ಟೆಸ್ಟ್ ಪಂದ್ಯದ ಗೆಲುವಿಗೆ 538 ರನ್ ಕಠಿಣ ಸವಾಲು ವಿಧಿಸಿದೆ.

ಮಧ್ಯಮ ಕ್ರಮಾಂಕದ ದಾಂಡಿಗ ಬಾಬರ್ ಆಝಮ್ ಕೇವಲ ಒಂದು ರನ್‌ನಿಂದ ಚೊಚ್ಚಲ ಶತಕ ಗಳಿಸುವುದರಿಂದ ವಂಚಿತರಾದರು. ಆಝಮ್ 171 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಿಡಿಸಿದ್ದರು. ಆಝಮ್ ಔಟಾಗುವ ಮೊದಲು ನಾಯಕ ಅಹ್ಮದ್‌ರೊಂದಿಗೆ 6ನೇ ವಿಕೆಟ್‌ಗೆ 133 ರನ್ ಜೊತೆಯಾಟ ನಡೆಸಿ ಪಾಕ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ನೆರವಾದರು.

ಪಾಕ್‌ನ ಅಗ್ರ ಕ್ರಮಾಂಕದಲ್ಲಿ ಆರಂಭಿಕ ಆಟಗಾರ ಝಮಾನ್ ಹಾಗೂ ಅಲಿ ಅರ್ಧಶತಕಗಳ ಕೊಡುಗೆ ನೀಡಿ ಉತ್ತಮ ಆರಂಭ ನೀಡಿದರು. ಆಸೀಸ್ ಪರ ಸ್ಪಿನ್ನರ್ ನಥಾನ್ ಲಿಯೊನ್(4ಕ್ಕೆ135)ಯಶಸ್ವಿ ಬೌಲರ್ ಎನಿಸಿಕೊಂಡರು.

ಗೆಲ್ಲಲು ಕಠಿಣ ಗುರಿ ಪಡೆದಿರುವ ಆಸ್ಟ್ರೇಲಿಯ ಮೂರನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. ಇನ್ನೆರಡು ದಿನಗಳ ಆಟದಲ್ಲಿ 9 ವಿಕೆಟ್ ನೆರವಿನಿಂದ ಇನ್ನೂ 491 ರನ್ ಗಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News