ಚಾಟ್ ವಾಲ ಮೇಲೆ ಐಟಿ ದಾಳಿ: 1.2 ಕೋಟಿ ರೂ. ಅಘೋಷಿತ ಆದಾಯ ಬಹಿರಂಗ

Update: 2018-10-19 07:10 GMT

ಲುಧಿಯಾನ, ಅ.19: ಪಂಜಾಬ್ ರಾಜ್ಯದ ಪಟಿಯಾಲ ನಗರದ ಖ್ಯಾತ ಚಾಟ್‍ ವಾಲ ಒಬ್ಬರ ಉದ್ಯಮದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ನಂತರ ಆತನ 1.2 ಕೋಟಿ ರೂ. ಅಘೋಷಿತ ಆದಾಯವನ್ನು  ಬಹಿರಂಗಗೊಳಿಸಿದ್ದಾನೆ.

ಇದರಿಂದಾಗಿ ಈಗ ಈ ಚಾಟ್‍ ವಾಲ ಸುಮಾರು 52 ಲಕ್ಷ ರೂ. ಆದಾಯ ತೆರಿಗೆ ಪಾವತಿಸಬೇಕಿದೆ. ಆದಾಯ ತೆರಿಗೆ ಇಲಾಖೆಯ ಲುಧಿಯಾನ ಮತ್ತು ಪಟಿಯಾಲ ಕಮಿಷನರೇಟ್ ಇಲ್ಲಿನ ಮುಖ್ಯ ಆಯುಕ್ತರಾದ ಪರ್ನೀತ್ ಸಚದೇವ್ ಅವರ ಸೂಚನೆ ಮೇರೆಗೆ ದಾಳಿ ನಡೆದಿದೆ.

ಚಾಟ್‍ ವಾಲ ಬಳಿ ದೊಡ್ಡ ಪ್ರಮಾಣದ ಅಘೋಷಿತ ಆದಾಯ ಮಾತ್ರವಲ್ಲದೆ ಆತ ಸ್ಥಿರಾಸ್ತಿಯ ಮೇಲೂ ದೊಡ್ಡ ಮಟ್ಟದ ಹೂಡಿಕೆ ನಡೆಸಿದ್ದಾನೆಂದು ದಾಳಿ ಸಂದರ್ಭ ತಿಳಿದು ಬಂದಿದ್ದು ಆತ ಕಳೆದೆರಡು ವರ್ಷಗಳಿಂದ ಆದಾಯ ತೆರಿಗೆ ಪಾವತಿಸಿಲ್ಲ ಎಂದು ಹೇಳಲಾಗಿದೆ.

ಈ ಚಾಟ್‍ ವಾಲ ಬಳಿ ಎರಡು ಪಾರ್ಟಿ ಹಾಲ್‍ಗಳಿವೆಯಲ್ಲದೆ ಸಮಾರಂಭಗಳಲ್ಲಿ ಚಾಟ್ ಪೂರೈಸಲು ಆತ ರೂ 2.5 ಲಕ್ಷದಿಂದ ರೂ 3 ಲಕ್ಷದ ತನಕ ವಸೂಲಿ ಮಾಡುತ್ತಿದ್ದನೆನ್ನಲಾಗಿದೆ. ಹತ್ತು ದಿನಗಳ ಹಿಂದೆ ಲುಧಿಯಾನಾದ ಪಕೋಡ ಮಾರಾಟಗಾರರೊಬ್ಬರು  ರೂ 60 ಲಕ್ಷ ಅಘೋಷಿತ ಆದಾಯ ಬಹಿರಂಗಪಡಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News