'ಇದೊಂದು ಧಾರ್ಮಿಕ ವಿಪತ್ತು': ಶಬರಿಮಲೆಯಲ್ಲಿ ಇಬ್ಬರು ಮಹಿಳೆಯರಿಗೆ ಬೆಂಗಾವಲಾಗಿದ್ದ ಐಜಿಪಿ ಶ್ರೀಜಿತ್

Update: 2018-10-19 08:54 GMT

ಶಬರಿಮಲೆ, ಅ.19: “ಇದೊಂದು ಧಾರ್ಮಿಕ ವಿಪತ್ತು, ನಾವು ಅವರನ್ನು ದೇವಳದ ತೀರಾ ಸಮೀಪದ ತನಕ ಕರೆದುಕೊಂಡು ಬಂದು ಎಲ್ಲಾ ರಕ್ಷಣೆ ನೀಡಿದೆವು. ಆದರೆ `ದರ್ಶನ'ವೆಂಬುದು ಕೇವಲ ಅರ್ಚಕರ ಅನುಮತಿಯೊಂದಿಗೆ ಸಾಧ್ಯ''… ಹೀಗೆಂದು ಹೇಳಿದವರು ಕೇರಳದ ಐಜಿಪಿ ಎಸ್ ಶ್ರೀಜಿತ್.

 ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿಗೆ ತೀವ್ರ ಪ್ರತಿರೋಧದ ನಡುವೆಯೇ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿಯೇ ನೀಡುತ್ತೇವೆಂದು ಪಣ ತೊಟ್ಟ ಇಬ್ಬರು ಮಹಿಳೆಯರಿಗೆ  ಬೆಂಗಾವಲಾಗಿದ್ದ ಸುಮಾರು 200 ಮಂದಿಯ ಪೊಲೀಸ್ ಪಡೆಯ ನೇತೃತ್ವವನ್ನು ಶ್ರೀಜಿತ್ ವಹಿಸಿದ್ದರು.

ಇಬ್ಬರು ಮಹಿಳೆಯರೂ ಪೊಲೀಸ್ ಬೆಂಗಾವಲಿನೊಂದಿಗೆ ಶಬರಿಮಲೆ ಸನ್ನಿಧಾನಂನ ಪವಿತ್ರ ಮೆಟ್ಟಿಲುಗಳಿಂದ ಕೇವಲ 500 ಮೀಟರ್ ದೂರದಲ್ಲಿದ್ದರು. ಆಗ ಪ್ರತಿಭಟನಾಕಾರರ ವಿರೋಧ ಒಂದೆಡೆಯಾದರೆ ಇನ್ನೊಂದೆಡೆ, ದೇವಳದ ಅರ್ಚಕರ ಒಂದು ತಂಡ  ದೇವಳದ ಮೆಟ್ಟಿಲುಗಳಲ್ಲಿ ಪ್ರತಿಭಟಿಸಿ, ಅಯ್ಯಪ್ಪನ ಸ್ತುತಿಯನ್ನು ಚಪ್ಪಾಳೆ ತಟ್ಟುತ್ತಾ ಹಾಡಿದರು.

ಮಹಿಳೆಯರ ಬೆಂಗಾವಲು ಪಡೆಯ ನೇತೃತ್ವ ವಹಿಸಿದ್ದ ಐಜಿಪಿ ಎಸ್. ಶ್ರೀಜಿತ್ ತಾವು ಕೂಡ ಅಯ್ಯಪ್ಪ ಭಕ್ತರೆಂದು ಹೇಳಿಕೊಳ್ಳುತ್ತಾ ಮಹಿಳೆಯರನ್ನು ಹೇಗಾದರೂ ದೇವಳಕ್ಕೆ ತಲುಪಿಸಿಯೇ ಹಿಂದಿರುಗುತ್ತೇನೆ ಎಂಬ ಹಠದಲ್ಲಿದ್ದರೂ ಅಂತಿಮವಾಗಿ ಅವರಿಗೂ  ಮಹಿಳೆಯರನ್ನು ದೇವಳದ ತನಕ ತಲುಪಿಸುವುದು ಅಸಾಧ್ಯವಾಯಿತು.

ಪ್ರತಿಭಟನೆ ತೀವ್ರಗೊಂಡು ದೇವಳದ ಅರ್ಚಕರು ಪೂಜೆಗಳನ್ನು ನಿಲ್ಲಿಸಿ ದೇವಳವನ್ನು ಮುಚ್ಚುವುದಾಗಿ ಬೆದರಿಸಿದಾಗ ಅನಿವಾರ್ಯವಾಗಿ ಇಬ್ಬರು ಮಹಿಳೆಯರೂ ವಾಪಸಾಗಲು ನಿರ್ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News