ಜನ್ಮಜಾತ ವೈಕಲ್ಯ ಹೊಂದಿರುವರಿಗೇಕೆ ವಿಮೆ ರಕ್ಷಣೆಯಿಲ್ಲ?

Update: 2018-10-19 14:16 GMT

ಹೊಸದಿಲ್ಲಿ,ಅ.19: ಜನ್ಮಜಾತ ವೈಕಲ್ಯಗಳಿಂದ ನರಳುತ್ತಿರುವವರಿಗೆ ವಿಮಾ ರಕ್ಷಣೆಯನ್ನು ಏಕೆ ಒದಗಿಸಲಾಗುತ್ತಿಲ್ಲ ಎನ್ನುವುದಕ್ಕೆ ಕಾರಣಗಳ ಸಹಿತ ವಿವರಣೆಯನ್ನು ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ)ಕ್ಕೆ ಸೂಚಿಸಿದೆ.

ಜನ್ಮಜಾತ ವೈಕಲ್ಯಗಳಿಂದ ನರಳುತ್ತಿರುವವರಿಗೆ ವಿಮಾ ರಕ್ಷಣೆಯನ್ನು ನೀಡಲು ಏನು ತೊಂದರೆಯಿದೆ ಎಂದು ಐಆರ್‌ಡಿಎಐ ಅನ್ನು ಪ್ರಶ್ನಿಸಿದ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ನ್ಯಾ.ವಿ.ಕೆ.ರಾವ್ ಅವರ ಪೀಠವು,ಮುಂದಿನ ವಿಚಾರಣಾ ದಿನಾಂಕವಾದ ಡಿ.17ರ ಮೊದಲು ಉತ್ತರಿಸುವಂತೆ ನಿರ್ದೇಶ ನೀಡಿತು.

 ಸಾಮಾನ್ಯ ವಿಮೆ ಮಂಡಳಿ ಮತ್ತು ಜೀವವಿಮೆ ಮಂಡಳಿಗಳಿಗೂ ನೋಟಿಸ್‌ಗಳನ್ನು ಹೊರಡಿಸಿದ ನ್ಯಾಯಾಲಯವು ಮುಂದಿನ ವಿಚಾರಣಾ ದಿನಾಂಕದ ಮುನ್ನ ಈ ವಿಷಯದಲ್ಲಿ ತಮ್ಮ ನಿಲುವುಗಳನ್ನು ತಿಳಸುವಂತೆ ಆದೇಶಿಸಿತು.

ಆರೋಗ್ಯ ಅಥವಾ ಜೀವವಿಮೆ ಪಾಲಿಸಿಗಳನ್ನು ಪಡೆಯುವುದನ್ನು ಅನರ್ಹಗೊಳಿಸಿರುವ ರೋಗಗಳ ಪಟ್ಟಿಯಿಂದ ಗರ್ಭಕೋಶದಲ್ಲಿಯ ಬಾಹ್ಯ ಅಥವಾ ಆಂತರಿಕ ದೋಷಗಳಂತಹ ಜನ್ಮಜಾತ ವೈಕಲ್ಯಗಳನ್ನು ತೆಗೆಯುವಂತೆ ಕೇಂದ್ರ,ಐಆರ್‌ಡಿಎಐ ಮತ್ತು ವಿಮೆ ಕಂಪನಿಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಿ ನಿಪುಣ ಮಲ್ಹೋತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ನಡೆಸುತ್ತಿದೆ.

 ಜನ್ಮದಿಂದಲೇ ಕಾಲುಗಳಲ್ಲಿ ಚಲನೆಯ ಶಕ್ತಿಯನ್ನು ಕಳೆದುಕೊಂಡಿರುವ ಅಂಗವಿಕಲರ ಹಕ್ಕುಗಳ ಪರ ಹೋರಾಟಗಾರ ಮಲ್ಹೋತ್ರಾ ಐಆರ್‌ಡಿಎಐನ 2016,ಜು.29ರ ಸುತ್ತೋಲೆಯಲ್ಲಿ ವೈಕಲ್ಯಗಳುಳ್ಳ ವ್ಯಕ್ತಿಗಳ ಸ್ಥಿತಿಯನ್ನು ‘ಜನ್ಮಜಾತ ವೈಕಲ್ಯಗಳು’ ಎಂದು ವರ್ಗೀಕರಿಸಿರುವ ಕಾರಣವನ್ನೊಡ್ಡಿ ಅಂತಹ ವ್ಯಕ್ತಿಗಳ ವಿಮೆ ಹಕ್ಕನ್ನು ನಿರಾಕರಿಸುವಲ್ಲಿ ಐಆರ್‌ಡಿಎಐನ ನಿರಂಕುಶ ಮತ್ತು ಅಕ್ರಮ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. ಈ ಸುತ್ತೋಲೆಯಿಂದ ‘ಜನ್ಮಜಾತ ವೈಕಲ್ಯಗಳು’ ಶಬ್ದಗಳನ್ನು ತೆಗೆಯುವಂತೆ ಐಆರ್‌ಡಿಎಐಗೆ ನಿರ್ದೇಶ ನೀಡುವಂತೆ ಅವರು ತನ್ನ ಅರ್ಜಿಯಲ್ಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News