ಗಡಿ ನುಸುಳಲು ಯತ್ನಿಸಿದ ಮೂವರು ಉಗ್ರರ ಹತ್ಯೆ
Update: 2018-10-19 22:37 IST
ಶ್ರೀನಗರ, ಅ. 19: ಜಮ್ಮು ಹಾಗೂ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಸೇನೆ ಹತ್ಯೆಗೈದಿದೆ. ಬಾರಮುಲ್ಲಾ ಜಿಲ್ಲೆಯ ಉರಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಗುರುವಾರ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಬೋನಿಯಾರ್ ಪ್ರದೇಶದ ಟೌರ್ನಾದ ಸಮೀಪದ ಗಡಿ ನಿಯಂತ್ರಣ ರೇಖೆಯಲ್ಲಿ ಗುರುವಾರ ಮುಂಜಾನೆ ಉಗ್ರರ ಚಲನವಲನವನ್ನು ಗಮನಿಸಿ ಭದ್ರತಾ ಪಡೆ ಜಾಗೃತವಾಯಿತು ಹಾಗೂ ಅವರ ಪ್ರಯತ್ನವನ್ನು ವಿಫಲಗೊಳಿಸಿತು.
ಒಳನುಸುಳುಕೋರರು ಭದ್ರತಾ ಪಡೆಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದರು. ಯೋಧರು ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾದರು.
ಉಗ್ರರ ಗುರುತು ಹಾಗೂ ಅವರು ಸೇರಿದ ಸಂಘಟನೆಯ ಗುರುತು ಇದುವರೆಗೆ ಗೊತ್ತಾಗಿಲ್ಲ ಎಂದು ಅವರು ಹೇಳಿದ್ದಾರೆ.