ಅವರು ಭಾರತೀಯರಾಗಿದ್ದರೂ ಅಸ್ಸಾಮಿನ ಶಿಬಿರಗಳಲ್ಲಿ ವಿದೇಶಿಯರಾಗಿ ಸತ್ತರು!

Update: 2018-10-20 12:05 GMT
ಮುಹಮ್ಮದ್ ಜಬ್ಬಾರ್ ಅಲಿ

ಈ ವರ್ಷ ಅಸ್ಸಾಮಿನಲ್ಲಿಯ ಅಕ್ರಮ ವಿದೇಶಿಯರ ಸ್ಥಾನಬದ್ಧತೆ ಶಿಬಿರಗಳಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಆಂಗ್ಲ ದೈನಿಕವೊಂದಕ್ಕೆ ಲಭ್ಯವಾಗಿರುವ ದಾಖಲೆಗಳಂತೆ ಇವರಿಬ್ಬರೂ ಪೌರತ್ವ ಕಾಯ್ದೆ,1955ರಡಿ ಕಟ್-ಆಫ್ ದಿನಾಂಕವಾದ 1971,ಮಾ.24ರಂದು ರಾಜ್ಯದ ನಿವಾಸಿಗಳಾಗಿದ್ದರು. ತಪ್ಪು ಕಾನೂನು ಸಲಹೆಗಳಿಂದಾಗಿ ಈ ದಾಖಲೆಗಳನ್ನು ವಿದೇಶಿಯರ ನ್ಯಾಯಾಧಿಕರಣ ಅಥವಾ ನ್ಯಾಯಾಲಯಗಳಲ್ಲಿ ಹಾಜರು ಪಡಿಸಲು ಅವರಿಗೆ ಸಾಧ್ಯವಾಗಿರಲಿಲ್ಲ ಎನ್ನುತ್ತಾರೆ ಕುಟುಂಬ ಸದಸ್ಯರು.

ಎರಡು ತಿಂಗಳುಗಳಿಂದ ಗೋಪಾಲಪುರ ಸ್ಥಾನಬದ್ಧತೆ ಶಿಬಿರದಲ್ಲಿ ಕೊಳೆಯುತ್ತಿದ್ದ ಸುಬ್ರತಾ ಡೇ(37) ಮೇ 26ರಂದು ಹೃದ್ರೋಗದಿಂದ ಮತ್ತು ಮೂರು ವರ್ಷಗಳಿಂದ ತೇಜಪುರ ಸ್ಥಾನಬದ್ಧತೆ ಶಿಬಿರದಲ್ಲಿದ್ದ ಮುಹಮ್ಮದ್ ಜಬ್ಬಾರ್ ಅಲಿ(70) ಅ.4ರಂದು ವೃದ್ಧಾಪ್ಯ ಸಂಬಂಧಿ ಅನಾರೋಗ್ಯಗಳಿಂದ ಮೃತಪಟ್ಟಿದ್ದಾರೆ ಎನ್ನುತ್ತಾರೆ ಪೊಲೀಸರು.

ಹಾಲಿ ಅಸ್ಸಾಮಿನ ವಿವಿಧೆಡೆಗಳಲ್ಲಿಯ ಶಿಬಿರಗಳಲ್ಲಿ 900ಕ್ಕೂ ಅಧಿಕ ‘ಶಂಕಾಸ್ಪದ’ವಿದೇಶಿಯರಿದ್ದಾರೆ. ರಾಜ್ಯಾದ್ಯಂತವಿರುವ 100 ವಿದೇಶಿಯರ ನ್ಯಾಯಾಧಿಕರಣಗಳು ಅವರ ಪ್ರಕರಣಗಳ ವಿಚಾರಣೆ ನಡೆಸಿ ಅವರ ಹಣೆಬರಹವನ್ನು ನಿರ್ಧರಿಸುತ್ತಿವೆ.

1951ರ ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಎನ್‌ಆರ್‌ಸಿ)ನ ಪ್ರಮಾಣೀಕೃತ ಪ್ರತಿಯಂತೆ ಡೇ ಕುಟುಂಬದ ಎಂಟು ಸದಸ್ಯರು ಧುಬ್ರಿ ಜಿಲ್ಲೆಯ ಸಲ್ಮಾರಾ ಗ್ರಾಮದ ನಿವಾಸಿಗಳಾಗಿದ್ದಾರೆ. ಎನ್‌ಆರ್‌ಸಿಯಲ್ಲಿ ಸುಬ್ರತಾ ತಂದೆ ಕೃಷ್ಣಪಾದ ಡೇ ಅವರು 10 ವರ್ಷದ ಬಾಲಕನಾಗಿ ನೋಂದಣಿಯನ್ನು ಹೊಂದಿದ್ದರು. ಸರಕಾರವು ಈ ಎನ್‌ಆರ್‌ಸಿಯನ್ನು ಈಗ ಮರುಪರಿಷ್ಕರಿಸುತ್ತಿದೆ.

ಕೃಷ್ಣಪಾದರ ತಂದೆ ಮನೋರಂಜನ್ ಡೇ ಮತ್ತು ತಾಯಿ ಮಾಖನ್ ಬಾಲಾ ಡೇ ಅವರ ಹೆಸರುಗಳು 1966ರ ರಾಜ್ಯದ ಮತದಾರರ ಪಟ್ಟಿಯಲ್ಲಿಯೂ ಇವೆ. ಕುಟುಂಬವು 1980ರ ದಶಕದ ಕೊನೆಯಲ್ಲಿ ಗೋಪಾಲಪುರಕ್ಕೆ ವಲಸೆ ಹೋಗಿತ್ತು. ಇದೇ ರೀತಿ ಅಲಿಯ ಹೆತ್ತವರಾದ ಸುತ್ಕೊ ಶೇಖ್ ಮತ್ತು ಸಂತಾ ನೆಸ್ಸಾ ಅವರ ಹೆಸರುಗಳು 1966 ಮತ್ತು 1994ರ ಮತದಾರರ ಪಟ್ಟಿಗಳಲ್ಲಿವೆ. 1994ರ ಮತದಾರರ ಪಟ್ಟಿಯಲ್ಲಿ ಅಲಿ ಅವರ ಹೆಸರೂ ಇದೆ. ಅಲ್ಲದೆ 2004ರ ಮತದಾರರ ಪಟ್ಟಿಯಲ್ಲಿ ಸಂತಾ ನೆಸ್ಸಾರನ್ನು ಕುಟುಂಬದ ಮುಖ್ಯಸ್ಥರಾಗಿ ಮತ್ತು ಜಬ್ಬಾರ್ ಅಲಿಯನ್ನು ಆಕೆಯ ಪುತ್ರನಾಗಿ ತೋರಿಸಲಾಗಿದೆ.

 ಕುತೂಹಲದ ವಿಷಯವೆಂದರೆ ‘ಶಂಕಾಸ್ಪದ ಮತದಾರ’ಎಂದು ಪರಿಗಣಿಸಲಾಗಿದ್ದ ಅಲಿಯವರ ಪುತ್ರ ಜೋಹರ್ ಅಲಿ(33) ಅವರು 1966ರ ತನ್ನ ಅಜ್ಜ-ಅಜ್ಜಿಯ ದಾಖಲೆಗಳ ಆಧಾರದಲ್ಲಿ ಭಾರತೀಯ ಪೌರನೆಂದು ಈ ವರ್ಷದ ಆರಂಭದಲ್ಲಿ ಮಾನ್ಯತೆ ಪಡೆದುಕೊಂಡಿದ್ದಾರೆ. ವಿದೇಶಿಯರ ನ್ಯಾಯಾಧಿಕರಣಗಳು 2011 ಮತ್ತು 2007ರಲ್ಲಿ ಅನುಕ್ರಮವಾಗಿ ಡೇ ಮತ್ತು ಅಲಿ ಅವರನ್ನು ‘ಅಕ್ರಮ ವಿದೇಶಿಯರು’ಎಂದು ಏಕಪಕ್ಷೀಯವಾಗಿ ಘೋಷಿಸಿದ್ದು,ಹಲವಾರು ದಿನಾಂಕಗಳನ್ನು ನೀಡಲಾಗಿದ್ದರೂ ಇವರಿಬ್ಬರೂ ವಿಚಾರಣೆಗೆ ಗೈರುಹಾಜರಾಗಿದ್ದರು ಎಂದು ಆದೇಶಗಳಲ್ಲಿ ತಿಳಿಸಲಾಗಿದೆ.

ನ್ಯಾಯಾಧಿಕರಣದ ಆದೇಶದ ಬಳಿಕ ಅಲಿಯನ್ನು 2015ರಲ್ಲಿ ಬಂಧಿಸಲಾಗಿತ್ತು. ತನ್ನ ಪೌರತ್ವವನ್ನು ರುಜುವಾತು ಪಡಿಸಲು ತನಗೆ ಇನ್ನೊಂದು ಅವಕಾಶ ನೀಡುವಂತೆ ಅವರು ಗುವಾಹಟಿ ಉಚ್ಚ ನ್ಯಾಯಾಲಯಕ್ಕೆ ಮೊರೆಯಿಟ್ಟಿದ್ದರು,ಆದರೆ 2007ರಲ್ಲಿ ನ್ಯಾಯಾಧಿಕರಣದ ಮುಂದೆ ತನ್ನ ಗೈರುಹಾಜರಿಗೆ ಯಾವುದೇ ದೃಢವಾದ ಕಾರಣವನ್ನೊದಗಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

ನನ್ನ ತಂದೆಗೆ ಅವಕಾಶ ದೊರಕಿದ್ದರೆ ತಾನು ಭಾರತೀಯ ಪೌರನೆಂದು ಅವರು ಸಾಬೀತುಗೊಳಿಸಲು ಸಾಧ್ಯವಾಗುತ್ತಿತ್ತು ಎನ್ನುತ್ತಾರೆ ಜೋಹರ್ ಅಲಿ.

ಡೇ 2009,ಎ.6ರಂದು ನ್ಯಾಯಾಧಿಕರಣದ ಮೊದಲ ನೋಟಿಸ್ ಸ್ವೀಕರಿಸಿದ್ದರು. ಅವರ ಲಿಖಿತ ಹೇಳಿಕೆಯನ್ನು ಅವರ ಪರ ವಕೀಲರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ್ದರಾದರೂ,ನಿಗದಿತ ಒಂಭತ್ತು ದಿನಾಂಕಗಳಲ್ಲಿ ನ್ಯಾಯಾಧಿಕರಣದ ಮುಂದೆ ಖುದ್ದಾಗಿ ಹಾಜರಾಗುವಲ್ಲಿ ವಿಫಲರಾಗಿದ್ದರು. ಡೇ ತನ್ನ ಹೆತ್ತವರ ಹೆಸರುಗಳಿದ್ದ 1966 ಮತ್ತು 1985ರ ಮತದಾರರ ಪಟ್ಟಿಗಳು ಮತ್ತು ತನ್ನ ಪ್ರಾಥಮಿಕ ಶಾಲಾ ಪ್ರಮಾಣಪತ್ರದ ಛಾಯಾಪ್ರತಿಗಳನ್ನು ಸಲ್ಲಿಸಿದ್ದರಾದರೂ ಅವುಗಳ ಮೂಲಪ್ರತಿಗಳನ್ನು ನ್ಯಾಯಾಧಿಕರಣದ ಮುಂದೆ ಹಾಜರು ಪಡಿಸಿರಲಿಲ್ಲ.

ನ್ಯಾಯಾಧಿಕರಣದ ಆದೇಶ ಹೊರಬಿದ್ದ ಏಳು ವರ್ಷಗಳ ಬಳಿಕ ಕಳೆದ ಮಾರ್ಚ್‌ನಲ್ಲಿ ಡೇ ಅವರನ್ನು ಬಂಧಿಸಲಾಗಿತ್ತು. ಡೇ ಪರ ವಾದಿಸಲು ಅವರ ಕುಟುಂಬವು ನಿಯೋಜಿಸಿದ್ದ ಗೋಪಾಲಪುರ ವಕೀಲರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಕುಟುಂಬವು ಪ್ರಕರಣವನ್ನು ನಡೆಸಲು ಗುವಾಹಟಿಯಲ್ಲಿ ವಕೀಲರನ್ನು ಗೊತ್ತುಮಾಡಿತ್ತಾದರೂ ಡೇ ಮಾತ್ರ ಇಹಲೋಕವನ್ನು ತೊರೆದಿದ್ದಾರೆ.

ಡೇ ಆಗಾಗ್ಗೆ ಕಾರ್ಯ ನಿಮಿತ್ತ ಪರಊರುಗಳಿಗೆ ತೆರಳುತ್ತಿದ್ದರು ಮತ್ತು ತಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ,ಇಲ್ಲಿ ಬಂಧನದ ಪ್ರಶ್ನೆಯೇ ಇಲ್ಲ ಎಂದು ವಕೀಲರು ಭರವಸೆ ನೀಡಿದ್ದರು. ಇವೆರಡು ಕಾರಣಗಳಿಂದ ಡೇ ನ್ಯಾಯಾಧಿಕರಣದ ಮುಂದೆ ಹಾಜರಾಗಿರಲಿಲ್ಲ ಎನ್ನುತ್ತಾರೆ ಅವರ ಸೋದರ ಬಿಷ್ಣು ಡೇ. ಆದರೆ ವಕೀಲರು ತಮ್ಮ ಮಾತಿನಂತೆ ನಡೆದುಕೊಳ್ಳಲಿಲ್ಲ ಎನ್ನುವುದು ಅವರ ದೂರು.

ತಮ್ಮನ್ನೂ ದಾರಿತಪ್ಪಿಸಲಾಗಿತ್ತು ಎನ್ನುತ್ತಿದೆ ಅಲಿಯವರ ಕುಟುಂಬ. 2007ರಿಂದ 2015ರವರೆಗೆ ತನ್ನ ತಂದೆಯನ್ನು ಬಂಧಿಸಿರಲಿಲ್ಲ,ಹೀಗಾಗಿ ಅವರು ಚಿಂತೆ ಮಾಡಿರಲಿಲ್ಲ. ಈಗ ನಿಧನರಾಗಿರುವ ವಕೀಲರೂ ಸಂಭವನೀಯ ಪರಿಣಾಮಗಳ ಬಗ್ಗೆ ನಮಗೆ ತಿಳಿಸಿರಲಿಲ್ಲ. ತಂದೆಯನ್ನು ಇನ್ನೇನು ಬಂಧಿಸುತ್ತಾರೆ ಎನ್ನುವಾಗ ನಾವು ಗುವಾಹಟಿಯ ವಕೀಲರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆವು. ಆದರೆ ನಮಗೆ ಎರಡನೇ ಅವಕಾಶ ನೀಡಲಾಗಿರಲಿಲ್ಲ ಎನ್ನುತ್ತಾರೆ ಜೋಹರ್ ಅಲಿ.

ಇವರಿಬ್ಬರ ಅಹವಾಲುಗಳನ್ನು ಸೂಕ್ತವಾಗಿ ಆಲಿಸಿದ್ದರೆ ಅವರು ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಹಲವಾರು ಸಾಕ್ಷಾಧಾರಗಳನ್ನು ಹಾಜರುಪಡಿಸುತ್ತಿದ್ದರು. ಬಡವರು ಮತ್ತು ಅವಿದ್ಯಾವಂತರು ವಂಚನೆಗೆ ಸುಲಭವಾಗಿ ಬಲಿಯಾಗುತ್ತಾರೆ. ಕೆಲವು ವಕೀಲರ ಅನೀತಿಯುತ ಪದ್ಧತಿಗಳಿಂದಾಗಿ ಹಲವಾರು ನಿಜವಾದ ಪೌರರು ವಿದೇಶಿಯರೆಂದು ಘೋಷಿಸಲ್ಪಟ್ಟಿರುವುದು ದುರದೃಷ್ಟಕರ ಎನ್ನುತ್ತಾರೆ ಅಲಿ ಮತ್ತು ಡೇ ಪ್ರಕರಣಗಳ ಒಳಹೊರಗನ್ನು ಬಲ್ಲ ಗುವಾಹಟಿಯ ಇಬ್ಬರು ವಕೀಲರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News