ಮೃತದೇಹದ ಅವಶೇಷಗಳನ್ನು ಕಾಡಿನಲ್ಲಿ ಬಿಸಾಡಿರಬಹುದು: ಟರ್ಕಿ ಅಧಿಕಾರಿ

Update: 2018-10-20 16:59 GMT

ಇಸ್ತಾಂಬುಲ್ (ಟರ್ಕಿ), ಅ. 20: ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿಯಲ್ಲಿ, ಆ ದೇಶದ ಪತ್ರಕರ್ತ ಜಮಾಲ್ ಖಶೋಗಿಯನ್ನು ಹತ್ಯೆ ಮಾಡಿದ ಬಳಿಕ, ಅವರ ಮೃತದೇಹವನ್ನು ಇಸ್ತಾಂಬುಲ್‌ನ ಹೊರವಲಯದಲ್ಲಿರುವ ಕಾಡಿಗೆ ಅಥವಾ ಇನ್ನೊಂದು ನಗರಕ್ಕೆ ಸಾಗಿಸಿರುವ ಸಾಧ್ಯತೆಯಿದೆ ಎಂದು ಟರ್ಕಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಪತ್ರಕರ್ತ ಕಾನ್ಸುಲೇಟ್ ಕಚೇರಿಯನ್ನು ಪ್ರವೇಶಿಸಿ ನಾಪತ್ತೆಯಾದ ದಿನ ಅಕ್ಟೋಬರ್ 2ರಂದು ಕಾನ್ಸುಲೇಟ್‌ಗೆ ಸೇರಿದ ಎರಡು ವಾಹನಗಳು ಅಲ್ಲಿಂದ ಹೊರಹೋಗಿವೆ ಎನ್ನುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಅವರು ‘ಅಸೋಸಿಯೇಟಡ್ ಪ್ರೆಸ್’ಗೆ ತಿಳಿಸಿದರು.

ಒಂದು ವಾಹನವು ಸಮೀಪದ ಬೆಲ್ಗ್ರೇಡ್ ಅರಣ್ಯದತ್ತ ಹೊರಟರೆ, ಇನ್ನೊಂದು ವಾಹನವು ಯಲೋವ ನಗರದತ್ತ ಹೊರಟಿತ್ತು. ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಕಳುಹಿಸಿದ ಹಂತಕರ ತಂಡವೊಂದು ಪತ್ರಕರ್ತನಿಗೆ ಚಿತ್ರಹಿಂಸೆ ಕೊಟ್ಟು ಕೊಂದಿದೆ ಎಂಬುದಾಗಿ ಟರ್ಕಿಯ ಪತ್ರಿಕೆಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News