ಚತ್ತೀಸ್‌ಗಢ: ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲೀಯರ ಹತ್ಯೆ

Update: 2018-10-20 17:37 GMT
ಸಾಂದರ್ಭಿಕ ಚಿತ್ರ

ರಾಯ್‌ಪುರ, ಅ. 20: ಚತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಮೀಸಲು ರಕ್ಷಣೆ (ಡಿಆರ್‌ಜಿ) ಮಿರ್ತುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಡ್ಪಾಲ್ ಗ್ರಾಮದ ಸಮೀಪದ ಅರಣ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆಳಗ್ಗೆ 9.30ಕ್ಕೆ ಈ ಗುಂಡಿನ ಚಕಮಕಿ ನಡೆದಿದೆ ಎಂದು ಬಿಜಾಪುರ ಪೊಲೀಸ್ ಅಧೀಕ್ಷಕ ಮೋಹಿತ್ ಗರ್ಗ್ ತಿಳಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಅಡ್ಡಿ ಉಂಟು ಮಾಡಲು ತಂತ್ರ ರೂಪಿಸಲು ನಕ್ಸಲೀಯರು ಗುಂಪು ಸಭೆ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರಕಿದ ಬಳಿಕ ಡಿಆರ್‌ಜಿ ಸ್ಕ್ವಾಡ್ ಅನ್ನು ಕಳುಹಿಸಿ ಕೊಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

 ರಾಜಧಾನಿ ರಾಯಪುರದ 450 ಕಿ.ಮೀ. ದೂರದಲ್ಲಿರುವ ಮಡ್ಪಾಲ್ ಸಮೀಪ ಭದ್ರತಾ ಪಡೆ ನಕ್ಸಲೀಯರನ್ನು ಗುರುತಿಸಿದ ಬಳಿಕ ನಕ್ಸಲೀಯರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆ ಪ್ರತಿ ದಾಳಿ ನಡೆಸಿತು. ಈ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲೀಯರು ಹತರಾದರು ಎಂದು ಗರ್ಗ್ ತಿಳಿಸಿದ್ದಾರೆ. ನಕ್ಸಲೀಯರ ಶವ ಪತ್ತೆಯಾದ ಸ್ಥಳದಿಂದ ಒಂದು .303 ರೈಫಲ್, ಎರಡು ಗನ್, ಕೆಲವು ಸ್ಫೋಟಕ ಸಾಮಾಗ್ರಿ, ನಕ್ಸಲ್ ಸಾಹಿತ್ಯ ಹಾಗೂ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News