ಗಾಯಾಳು ಉಸ್ಮಾನ್‌ಗೆ ಶಸ್ತ್ರಚಿಕಿತ್ಸೆ ಆಸೀಸ್‌ಗೆ ಗಾಯದ ಮೇಲೆ ಬರೆ

Update: 2018-10-20 18:47 GMT

ಸಿಡ್ನಿ, ಅ.20: ಪ್ರಮುಖ ಆಟಗಾರರ ಅಲಭ್ಯತೆಯಿಂದಾಗಿ ಶಕ್ತಿಗುಂದಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆಯುವಂತಹ ಸುದ್ದಿಯೊಂದು ಬಂದಿದೆ. ಮೊಣಕಾಲ ಗಾಯಕ್ಕೆ ಒಳಗಾಗಿರುವ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು ಸುಮಾರು 6 ವಾರ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಟಿಮ್ ಪೇಯ್ನಿ ತಿಳಿಸಿದ್ದಾರೆ. ಇದರೊಂದಿಗೆ ಡಿಸೆಂಬರ್‌ನಲ್ಲಿ ಭಾರತದೆದುರು ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮೂವರು ಅಗ್ರಪಂಕ್ತಿಯ ಆಟಗಾರರ ಸೇವೆಯಿಂದ ವಂಚಿತವಾಗುವ ಸಾಧ್ಯತೆಯಿದೆ. ಈಗಾಗಲೇ ಚೆಂಡು ವಿರೂಪಗೊಳಿಸಿದ ಆರೋಪದಲ್ಲಿ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಅವರಿಲ್ಲದೆ ಅಸ್ಥಿರ ಪ್ರದರ್ಶನ ತೋರುತ್ತಿರುವ ಆಸ್ಟ್ರೇಲಿಯ ತಂಡಕ್ಕೆ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಆಸರೆಯಾಗಿದ್ದರು. ಪಾಕ್ ಎದುರು ಯುಎಇಯಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶಿಸಿ ಶತಕ ಬಾರಿಸಿದ್ದ ಖ್ವಾಜಾಪಂದ್ಯವನ್ನು ಡ್ರಾಗೊಳಿಸಲು ಪ್ರಧಾನ ಕಾರಣರಾಗಿದ್ದರು. ಆದರೆ ಪಾಕ್ ಎದುರಿಗಿನ ದ್ವಿತೀಯ ಟೆಸ್ಟ್ ಪಂದ್ಯದ ಸಂದರ್ಭ ಗಾಯಗೊಂಡ 31ರ ಹರೆಯದ ಖ್ವಾಜಾ ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ದ್ವಿತೀಯ ಸರದಿಯಲ್ಲಿ ಕೇವಲ 164ಕ್ಕೆ ಆಲೌಟಾಗಿದ್ದ ಆಸ್ಟ್ರೇಲಿಯ 373 ರನ್‌ಗಳ ಹೀನಾಯ ಸೋಲನುಭವಿಸಿತ್ತು.

ಖ್ವಾಜಾ ಮೊಣಕಾಲು ಮುಂಭಾಗದ ಮೂಳೆ ಮುರಿತಕ್ಕೆ ಒಳಗಾಗಿದ್ದು ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಆರು ವಾರದ ವಿಶ್ರಾಂತಿಯ ಅಗತ್ಯ ಇರಬಹುದು. ಆದರೆ 2014ರಲ್ಲಿ ಇದೇ ರೀತಿಯ ಗಾಯಕ್ಕೆ ಒಳಗಾಗಿದ್ದ ಅವರು ಒಂದು ವರ್ಷ ಅಂಗಳದಿಂದ ಹೊರಗುಳಿದಿದ್ದರು. ಈ ಕಾರಣ ಡಿ.6ರಿಂದ ಅಡಿಲೇಡ್‌ನಲ್ಲಿ ಭಾರತದ ಎದುರು ನಡೆಯಲಿರುವ ಪ್ರಥಮ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಟೆಸ್ಟ್‌ಗೆ ಪಾದಾರ್ಪಣೆ ಮಾಡಿರುವ ಆ್ಯರೊನ್ ಫಿಂಚ್, ಟ್ರಾವಿಸ್ ಹೆಡ್, ಮಾರ್ನಸ್ ಲಬ್‌ಶಗ್ನೆ ಯುಎಇಯಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ತಕ್ಕಮಟ್ಟಿನ ಪ್ರದರ್ಶನ ತೋರಿದ್ದರೂ ಶಾನ್ ಮಾರ್ಶ್ ವಿಫಲವಾಗಿರುವುದು ಆಸ್ಟ್ರೇಲಿಯ ತಂಡಕ್ಕೆ ಪ್ರಮುಖ ಹಿನ್ನಡೆಯಾಗಿತ್ತು ಎಂದು ಪೆಯ್ನೆ ಒಪ್ಪಿಕೊಂಡಿದ್ದಾರೆ. ಇದೀಗ ಭಾರತದೆದುರಿಗಿನ ಮುಂಬರುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ತಂಡಕ್ಕೆ ಸೇರ್ಪಡೆಗೊಳ್ಳುವ ಅವಕಾಶ ಹಲವು ಯುವ ಆಟಗಾರರಿಗೆ ಒದಗಿ ಬಂದಿದೆ ಎಂದು ಅವರು ಹೇಳಿದ್ದಾರೆ. ಪಾಕ್ ಎದುರಿಗಿನ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ತಲೆನೋವು ಹೆಚ್ಚಿದೆ ಎಂದು ಸಿಡ್ನಿಯ ‘ಡೈಲಿ ಟೆಲಿಗ್ರಾಫ್’ ಪತ್ರಿಕೆಯ ವರದಿ ತಿಳಿಸಿದೆ. ಅಲ್ಲದೆ ಪಾಕ್ ಎದುರಿಗಿನ ಸರಣಿಯಲ್ಲಿ ಶಾನ್ ಮಾರ್ಶ್, ಅವರ ಸಹೋದರ ಮಿಶೆಲ್ ಮಾರ್ಶ್, ಬೌಲರ್‌ಗಳಾದ ಪೀಟರ್ ಸಿಡ್ಲ್, ಮಿಶೆಲ್ ಸ್ಟಾರ್ಕ್ ಹಾಗೂ ಜಾನ್ ಹೊಲ್ಲಾಂಡ್ ಅವರು ಫೇಲಾಗಿದ್ದಾರೆ ಎಂದು ಟೀಕಿಸಿದೆ. ಆಸ್ಟ್ರೇಲಿಯ ತಂಡಕ್ಕೆ ಈಗ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಪತ್ರಿಕೆ ಯ ವರದಿ ತಿಳಿಸಿದೆ. ಸ್ಮಿತ್, ವಾರ್ನರ್ ಹಾಗೂ ಇದೀಗ ಖ್ವಾಜಾ. ಆಸ್ಟ್ರೇಲಿಯದ ಬ್ಯಾಟಿಂಗ್ ಬತ್ತಳಿಕೆ ಇದೀಗ ಬರಿದಾಗಿದೆ ಎಂದು ‘ಫೇರ್‌ಫ್ಯಾಕ್ಸ್ ಮೀಡಿಯ’ ವಿಷಾದ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News