ಎರವಲು ಪಡೆದ ಶೂನಲ್ಲಿ ಬೆಳ್ಳಿಯ ನಡಿಗೆ

Update: 2018-10-21 03:35 GMT

ಅರ್ಜೆಂಟೀನಾದಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ. ಆದರೆ ಅವರಿಗೆ ಗೊತ್ತೇ ಇರಲಿಲ್ಲ, ಪದಕ ಗೆದ್ದವರಲ್ಲಿ ಒಬ್ಬ ಸಾಧಕ ಬೇರೆಯವರ ಶೂ ಧರಿಸಿ ಸ್ಪರ್ಧಿಸಿದ್ದಾನೆ ಎಂದು. ಇರಲಿ ಬಿಡಿ, ಟ್ವೀಟ್ ಮಾಡಿದ ವಿಷಯವೂ ಅವರಿಗೆ ಗೊತ್ತಿರುವುದಿಲ್ಲ, ತಾನು ಟ್ವೀಟ್ ಮಾಡಿದ್ದೇನೆ ಎಂದು. ಟ್ವೀಟ್ ಓದಿದವರಿಗೂ ಗೊತ್ತಿರುವುದಿಲ್ಲ, ಇದು ಪ್ರಧಾನಿ ನರೇಂದ್ರ ಮೋದಿಯವರೇ ಟ್ವೀಟ್ ಮಾಡಿದ್ದು ಅಲ್ಲ ಎಂದು. ಇರಲಿ... ಭಾರತದ ಕ್ರೀಡಾಪಟುಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಗೆದ್ದರೂ ಅದರ ಹಿಂದೆ ಒಂದು ಕಷ್ಟದ ಹಾಗೂ ಸ್ಫೂರ್ತಿಯ ಕತೆ ಇದ್ದೇ ಇರುತ್ತದೆ. ಏಕೆಂದರೆ ಈ ದೇಶದಲ್ಲಿ ಕ್ರೀಡಾಪಟುಗಳ ಬದುಕು ನಾವಂದುಕೊಂಡಷ್ಟು ಸುಲಭವಾಗಿಲ್ಲ. ಗೆದ್ದವರ ಜತೆ ಫೋಟೊ ಕ್ಲಿಕ್ಕಿಸಿಕೊಂಡು ಹಲ್ಲು ಕಿರಿದಷ್ಟು ಸುಂದರವಲ್ಲ.

5,000 ಮೀ. ರೇಸ್‌ವಾಕ್‌ನಲ್ಲಿ ಡೆಹ್ರಾಡೂನ್‌ನ ಸೂರಜ್ ಪನ್ವಾರ್ ಬೆಳ್ಳಿಯ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಸೂರಜ್ ಒಂದು ತಿಂಗಳ ಮಗುವಾಗಿದ್ದಾಗಲೇ ಕಾಡು ಮಾಫಿಯಾದ ಗುಂಡಿನೇಟಿಗೆ ಸಿಲುಕಿದ್ದರು. ಕೇವಲ ಪ್ರಾಥಮಿಕ ಶಿಕ್ಷಣವನ್ನು ಕಲಿತಿರುವ ತಾಯಿ ಪೂನಂಗೆ ಸೂರಜ್ ಗೆದ್ದಿರುವ ಬೆಳ್ಳಿ ಪದಕವನ್ನು ಅರ್ಪಿಸಿದ್ದಾರೆ.

ಎರವಲು ಶೂ
ಸೂರಜ್ ಗೆದ್ದ ಬೆಳ್ಳಿಯ ಪದಕದ ಹಿಂದೆ ಸ್ಫೂರ್ತಿಯ ಕತೆಯೊಂದಿದೆ. ಒಲಿಂಪಿಯನ್ ಮನೀಶ್ ರಾವತ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬಳಸಿದ್ದ ಶೂ ಧರಿಸಿ ಸೂರಜ್ 5,000 ಮೀ. ರೇಸ್‌ವಾಕ್‌ನಲ್ಲಿ ಸ್ಪರ್ಧಿಸಿದ್ದಾರೆ. ಮನೀಶ್ ರಾವತ್ ಹಿರಿಯ ನಡಿಗೆಗಾರ, ಅವರ ಶೂ ಕೂಡ ನೀರಜ್ ಪಾದಕ್ಕೆ ಸರಿಯಾಗಲಿಲ್ಲ. ಆಗ ಒಂದೆರಡು ಸಾಕ್ಸ್ ಹೆಚ್ಚು ಧರಿಸಿ ಶೂ ಜಾರಿ ಹೋಗದಂತೆ ಎಚ್ಚರ ವಹಿಸಿದರು. ಅದೇ ರೀತಿ ರಾವತ್ ಅವರಿಂದ ಸ್ಫೂರ್ತಿ ಪಡೆದು ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. 40 ನಿಮಿಷ 59.17 ಸೆಕೆಂಡುಗಳಲ್ಲಿ ಗುರಿ ತಲುಪಿದ ನೀರಜ್ ಐತಿಹಾಸಿಕ ಸಾಧನೆ ಮಾಡಿದರು. ಮನೀಶ್ ರಾವತ್ ಕೂಡ ಕಷ್ಟಗಳ ಮುಳ್ಳಿನ ಮೇಲೆ ನಡೆದು ಬಂದವರು. ಶಾಲೆಗಾಗಿ ಹತ್ತು ವರ್ಷಗಳ ಕಾಲ ನಿತ್ಯವೂ 14 ಕಿ.ಮೀ. ನಡಿಗೆ, ತಂದೆಯ ಸಾವಿನ ನಂತರ ತಾಯಿ ಹಾಗೂ ತಂಗಿಯ ಆರೈಕೆಗಾಗಿ ಗೈಡ್ ಆಗಿ ಕೆಲಸ ಮಾಡಿದರು. ನಂತರ ಹೊಟೇಲ್‌ನಲ್ಲಿ ಸಪ್ಲೈಯರ್ ಆಗಿ ದುಡಿದರು. ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ನಂತರ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಹುದ್ದೆ ಸಿಕ್ಕಿತು. ಉನ್ನತ ಹುದ್ದೆ ಮನೀಶ್ ಅವರ ಬದುಕಿನ ನಡೆಯ ಹಾದಿಯನ್ನು ಬದಲಾಯಿಸಿಲ್ಲ. ಸಾಗಿ ಬಂದ ಹಾದಿಯಲ್ಲೇ ಮುಂದೆ ನಡೆದರು. ತನ್ನಂತೆಯೇ ಕಷ್ಟದಲ್ಲಿ ಬಂದ ಸೂರಜ್‌ಗೆ ಕಾಮನ್‌ವೆಲ್ತ್‌ನಲ್ಲಿ ತಾವು ಉಪಯೋಗಿಸಿದ್ದ ಶೂ ಉಡುಗೊರೆಯಾಗಿ ನೀಡಿದರು.

ಯಾಕೆ ಹೀಗೆ?

ಕ್ರೀಡಾ ಪಟುವೇ ಕ್ರೀಡಾ ಸಚಿವರಾದ ನಂತರ ಭಾರತದ ಕ್ರೀಡಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ಹುಟ್ಟಿತ್ತು. ಅದು ಆಗುತ್ತಿದೆ. ಇಲ್ಲವೆಂದಲ್ಲ. ಆದರೆ ಇವೆಲ್ಲದರ ನಡುವೆ ಇಂಥ ಅವ್ಯವಸ್ಥೆ ಏಕೆ ಕಾಣಿಸಿಕೊಳ್ಳುತ್ತದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ನಮಗೆ ಕೆಲವೊಂದು ಅಥ್ಲೀಟ್‌ಗಳ ಕಷ್ಟಗಳು ಮಾತ್ರ ಬೆಳಕಿಗೆ ಬರುತ್ತದೆ. ಅದೂ ಆತ ಪದಕ ಗೆದ್ದ ನಂತರ. ಇನ್ನು ಕಷ್ಟದಿಂದ ಪದಕ ಗೆಲ್ಲಲಾಗದೆ ಅಥವಾ ಗೆದ್ದರೂ ಮುಜುಗರದಿಂದ ಹೇಳಲಾಗದೆ ಇರುವ ಕತೆಗಳು ಎಷ್ಟಿವೆಯೋ ಯಾರು ಬಲ್ಲರು? ನಮಗೆ ಗೆದ್ದು ಬಂದ ನಂತರ ಸಂಭ್ರಮಿಸುವುದಕ್ಕೆ ಮಾತ್ರ ಗೊತ್ತು. ‘‘ಸೂರಜ್, ರಾವತ್ ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ಅರ್ಜೆಂಟೀನಾದಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ’’ ಎಂದಷ್ಟೇ ಹೇಳಬಲ್ಲೆವು. ಭಾರತದ ಕ್ರೀಡಾ ಅವ್ಯವಸ್ಥೆಯಲ್ಲಿ ಕ್ರೀಡಾ ಅಧಿಕಾರಿಗಳ ಪಾತ್ರವೂ ಪ್ರಮಖವಾಗಿದೆ. ಕ್ರೀಡಾ ಅಸೋಸಿಯೇಷನ್‌ಗಳ ಕೊಡುಗೆಯೂ ಅಪಾರ. ಸೂರಜ್ ಪನ್ವಾರ್ ಹಾಗೂ ಮನೀಶ್ ರಾವತ್ ಅವರ ಕ್ರೀಡಾ ಬದುಕಿನ ಅವ್ಯವಸ್ಥೆಗೆ ಅಲ್ಲಿಯ ಕ್ರೀಡಾ ಅಧಿಕಾರಿಗಳ ಬೇಜವಾಬ್ದಾರಿಯ ಕೊಡುಗೆಯೂ ಇದೆ. ಕಳೆದ ವಾರ ಮುಕ್ತಾಯಗೊಂಡ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ದಾಖಲೆಯ ಪದಕ ಗೆದ್ದಿತು. ಅಲ್ಲಿ ಪದಕ ಗೆದ್ದ ಪ್ರತಿಯೊಬ್ಬ ಕ್ರೀಡಾಪಟುವಿನ ಯಶಸ್ಸಿನ ಹಿಂದೆ ಅಪಾರ ಶ್ರಮ ಇದೆ. ಆದರೆ ಈ ಕ್ರೀಡಾಕೂಟದಲ್ಲಿ ಸಂಘಟನೆಯ ಪದಾಧಿಕಾರಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಮೋಜು ಮಸ್ತಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಪ್ರತಿ ಬಾರಿಯೂ ವಿಕಲಚೇತನರ ಕ್ರೀಡಾಕೂಟ ನಡೆದಾಗಲೆಲ್ಲ ಈ ಅಧಿಕಾರಿಗಳ ಮೋಜು ಇದ್ದೇ ಇರುತ್ತದೆ. ತಮಗೆ ಇಷ್ಟ ಬಂದವರ ಹೆಸರನ್ನು ಕ್ರೀಡಾ ಇಲಾಖೆಗೆ ಕಳುಹಿಸುವುದು, ವಿಕಲ ಚೇತನರಿಗೆ ಎಸ್ಕಾರ್ಟ್ ಎಂದು ಹೇಳಿ ತಮಗಿಷ್ಟದವರಿಗೆ ವಿದೇಶಿ ಪ್ರವಾಸದ ಭಾಗ್ಯ ಕಲ್ಪಿಸುವುದು ಸಾಮಾನ್ಯವಾಗಿದೆ. ಕ್ರೀಡಾ ಇಲಾಖೆ ಇಂಥ ವಿಷಯದಲ್ಲಿ ಹಣ ವ್ಯಯ ಮಾಡುವ ಬದಲು ಕ್ರೀಡೆಯಲ್ಲಿ ತೊಡಗಿಕೊಂಡಿರುವವರ ಮೂಲಭೂತ ಸೌಕರ್ಯಗಳ ಬಗ್ಗೆ ಯೋಚಿಸಿದರೆ ಸೂರಜ್ ಪನ್ವಾರ್ ಹಾಗೂ ಮನೀಶ್ ರಾವತ್ ಅವರಂಥ ಕ್ರೀಡಾಪಟುಗಳು ಕಷ್ಟವನ್ನು ಎದುರಿಸಬೇಕಾಗಿರುತ್ತಿರಲಿಲ್ಲ.

ಕಳೆದ ತಿಂಗಳು ನಡೆದ ಏಶ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್‌ನಲ್ಲಿ ಭಾರತದ ಸ್ವಪ್ನಾ ಬರ್ಮನ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು. ಆದರೆ ಈ ಹೆಣ್ಣು ಮಗಳಿಗೆ ಕಾಲಿನಲ್ಲಿ ಒಟ್ಟು 12 ಬೆರಳುಗಳಿವೆ ಎಂಬುದು ಜಗತ್ತಿಗೇ ಗೊತ್ತಿತ್ತು. ಆದರೆ ನಮ್ಮ ಕ್ರೀಡಾ ಇಲಾಖೆಗೆ ಮಾತ್ರ ಗೊತ್ತಿದ್ದೂ ಗೊತ್ತಿರಲಿಲ್ಲ. ಆಕೆ ಪ್ರತಿಯೊಂದು ಸ್ಪರ್ಧೆಯಲ್ಲೂ ಕಷ್ಟಪಟ್ಟು ಸ್ಪರ್ಧಿಸಿ ಪದಕ ಗೆದ್ದು ಏಶ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದಳು. ಇವತ್ತು ತಂತ್ರಜ್ಞಾನ ಬಹಳ ಮುಂದುವರಿದಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಬಳಸುವ ಶೂ 12 ಇಂಚಿನದ್ದಾಗಿರುತ್ತದೆ. ಅಂದರೆ ಅವರಿಗೆ ಸೂಕ್ತವಾದ ಅಳತೆ ಶೋರೂಮ್‌ಗಳಲ್ಲಿ ಸಿಗುವುದಿಲ್ಲ. ಕಂಪೆನಿಗೆ ಆರ್ಡರ್ ಕೊಟ್ಟು ಮಾಡಿಸುತ್ತಾರೆ. ಕ್ರಿಕೆಟ್ ಅಷ್ಟು ವೃತ್ತಿಪರತೆಯಿಂದ ಕೂಡಿದ್ದ ಕಾರಣ ಇದು ಸಾಧ್ಯ. ಆದರೆ ಅಥ್ಲೆಟಿಕ್ಸ್‌ನಲ್ಲಿ ವೃತ್ತಿಪರತೆಯ ಕೊರತೆ ಇದೆ. ಸ್ವಪ್ನಾ ಬರ್ಮನ್‌ಗೆ ಆಕೆಯ ಅಳತೆಗೆ ತಕ್ಕಂತೆ ಶೂ ಕೊಡಿಸಲಾಗದ ನಾವು ಆಕೆ ಚಿನ್ನ ಗೆದ್ದ ನಂತರ ಹೊಗಳುವುದರಲ್ಲಿ ಅರ್ಥ ಇಲ್ಲ. ಆಕೆ ಏಶ್ಯನ್ ಗೇಮ್ಸ್‌ಗೆ ತೆರಳುವ ಮುನ್ನ ದಿಲ್ಲಿಯ ಎಲ್ಲ ಪತ್ರಿಕೆಗಳೂ 12 ಬೆರಳಿನ ಸುದ್ದಿಯನ್ನು ಪ್ರಕಟಿಸಿದ್ದವು. ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಈ ಸುದ್ದಿಯನ್ನು ಓದಿಕೊಂಡು 10-15 ದಿನಗಳ ಕಾಲ ಜಕಾರ್ತದಲ್ಲಿ ತಂಗಿದ್ದರು. ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ಚಿನ್ನ ಗೆದ್ದ ನಂತರ ಶೂ ನೀಡುವ ಬಗ್ಗೆ ಹೇಳಿಕೆ ನೀಡಿದ್ದರು. ಕೇರಳದ ಪಿಯು ಚಿತ್ರಾ ಅತ್ಯಂತ ಬಡ ಕುಟುಂಬದಿಂದ ಬಂದ ಅಥ್ಲೀಟ್. 2017ರ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದವರು, ಅಲ್ಲದೆ ಇತ್ತೀಚೆಗೆ ನಡೆದ ಏಶ್ಯನ್ ಗೇಮ್ಸ್‌ನಲ್ಲೂ 1,500 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದವರು. ಈಗ ನಾವು ಆಕೆಯ ಸಾಧನೆಯನ್ನು ಮೆಚ್ಚಿ ಗೌರವಿಸುತ್ತಿದ್ದೇವೆ. ಆದರೆ 2017ರಲ್ಲಿ ಚಿತ್ರಾ ಚಿನ್ನ ಗೆದ್ದಾಗ ಪರಿಸ್ಥಿತಿ ಬೇರೆಯೇ ಇತ್ತು. ಶೂ ಇಲ್ಲದ ಕಾರಣ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವ ಯೋಚನೆ ಮಾಡಿದ್ದರು. ಆದರೆ ಗೆಳತಿ ವಿದ್ಯಾ ಅವರಿಂದ ಶೂ ಎರವಲು ಪಡೆದು ಚಿನ್ನದ ಸಾಧನೆ ಮಾಡಿದರು. ಕೋಟ್ಯಂತರ ರೂ.ಗಳ ಕಾಮಗಾರಿಗೆ ಟೆಂಡರ್ ಕರೆದು ಕೆಲಸ ಮಾಡಿಸುವ ಸರಕಾರಕ್ಕೆ ಇಂಥ ಪುಟ್ಟ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ. ಕೋಟ್ಯಂತರ ರೂ.ಗಳ ಟೆಂಡರ್‌ನಲ್ಲಿ ಸಿಗುವ ಖುಷಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಸಲಕರಣೆ ನೀಡುವುದರಲ್ಲಿ ಸಿಗುವುದಿಲ್ಲ. 100 ಕೋಟಿ ರೂ.ಗಳ ಕ್ರೀಡಾಂಗಣ ಕಟ್ಟಲು ಖರ್ಚು ಮಾಡುವ ನಮ್ಮ ಸರಕಾರ 2,000 ರೂ. ವೌಲ್ಯದ ಶೂ ಕೊಡಿಸುವ ಬಗ್ಗೆ ತೋರುವುದಿಲ್ಲ. ಇದೇ ಕ್ರೀಡಾ ದುರಂತ.

Writer - ಸೋಮಶೇಖರ ಪಡುಕರೆ

contributor

Editor - ಸೋಮಶೇಖರ ಪಡುಕರೆ

contributor

Similar News