ಶಬರಿಮಲೆ ಪ್ರವೇಶಿಸಲು ಹೋದ ರೆಹಾನಾ ಫಾತಿಮಾ ನಿಜವಾಗಿ ಯಾರು...?

Update: 2018-10-21 11:09 GMT

‘ಶಬರಿಮಲೆ ಪ್ರತಿಭಟನಾಕಾರರು ಕೋಮುಜ್ವಾಲೆಯನ್ನು ಹರಡಲು ನನ್ನ ಮುಸ್ಲಿಂ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ’ ಎನ್ನುತ್ತಾರೆ ರೆಹಾನಾ ಫಾತಿಮಾ

ಸರ್ವೋಚ್ಚ ನ್ಯಾಯಾಲಯವು ಎಲ್ಲ ವಯೋಮಾನಗಳ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನದಲ್ಲಿ ಪ್ರವೇಶಾವಕಾಶ ಕಲ್ಪಿಸಿದ ಬಳಿಕ ಶುಕ್ರವಾರ ರೆಹಾನಾ ಫಾತಿಮಾ ಅಲಿಯಾಸ್ ಸೂರ್ಯಗಾಯತ್ರಿ ಮತ್ತು ಪತ್ರಕರ್ತೆ ಜೆ.ಕವಿತಾ ಅವರಿಗೆ ಶಬರಿಮಲೆಯನ್ನು ಪ್ರವೇಶಿಸಿದ ಋತುಮತಿಯಾಗುವ ವಯಸ್ಸಿನ ಮೊದಲ ಮಹಿಳೆಯರೆಂಬ ಹೆಗ್ಗಳಿಕೆಗೆ ಪಾತ್ರರಾಗುವ ಅವಕಾಶ ಸ್ವಲ್ಪದರಲ್ಲಿಯೇ ತಪ್ಪಿಹೋಗಿದೆ. ಹೆಲ್ಮೆಟ್ ಮತ್ತು ಫ್ಲಾಕ್ ಜಾಕೆಟ್‌ಗಳನ್ನು ಧರಿಸಿದ್ದ ಈ ಮಹಿಳೆಯರು 80 ಪೊಲೀಸರ ಬೆಂಗಾವಲಿನೊಂದಿಗೆ ಬೆಳಿಗ್ಗೆ ಏಳು ಗಂಟೆಗೆ ಪಂಪಾದಿಂದ ಸನ್ನಿಧಾನಕ್ಕೆ ಚಾರಣವನ್ನು ಆರಂಭಿಸಿದ್ದರು. ಎರಡು ಗಂಟೆಗಳ ಬಳಿಕ ದೇವಸ್ಥಾನವನು ತಲುಪಿದ್ದರಾದರೂ ಮಕ್ಕಳು ಸೇರಿದಂತೆ ಸುಮಾರು 300 ಜನರ ಗುಂಪು ಶ್ರೀ ಅಯ್ಯಪ್ಪ ಸನ್ನಿಧಾನವನ್ನು ತಲುಪುವ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಲು ತಡೆಯೊಡ್ಡಿದ್ದರಿಂದ ಗರ್ಭಗುಡಿಯನ್ನು ಪ್ರವೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಇದಕ್ಕೂ ಮುನ್ನ ಅ.17ರಂದು ಇತರ ಇಬ್ಬರು ಮಹಿಳೆಯರು ಸನ್ನಿಧಾನಕ್ಕೆ ತೆರಳಲು ಪ್ರಯತ್ನಿಸಿದ್ದರಾದರೂ ಪ್ರತಿಭಟನಾಕಾರರು ಬಹು ದೂರದಲ್ಲಿಯೇ ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಕಾಕಿನಾಡಾ ನಿವಾಸಿ ಮಾಧವಿ ಇನ್ನು ಕೇವಲ ಹತ್ತು ನಿಮಿಷಗಳ ಕಾಲ ನಡೆದಿದ್ದರೆ ಹದಿನೆಂಟು ಮೆಟ್ಟಿಲುಗಳ ಬಳಿ ತಲುಪುತ್ತಿದ್ದರು. ನ್ಯೂಯಾರ್ಕ್ ಟೈಮ್ಸ್‌ನ ಪತ್ರಕರ್ತೆ ಸುಹಾಸಿನಿ ರಾಜ್ 30 ನಿಮಿಷಗಳ ಚಾರಣದ ಬಳಿಕ ವಾಪಸಾಗುವಂತಾಗಿತ್ತು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಅದನ್ನು ವಿರೋಧಿಸಿ ವಿವಿಧ ಹಿಂದು ಗುಂಪುಗಳ ಪ್ರತಿಭಟನೆಗಳ ನಡುವೆಯೇ ಅ.17ರಂದು ಶಬರಿಮಲೆ ದೇವಸ್ಥಾನದ ಬಾಗಿಲುಗಳನ್ನು ಮೊದಲ ಬಾರಿಗೆ ತೆರೆಯಲಾಗಿತ್ತು. ಈವರೆಗೆ ಒಬ್ಬಳೇ ಒಬ್ಬ ಮಹಿಳೆ ದೇವಸ್ಥಾನವನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ರೆಹಾನಾ ಮತ್ತು ಕವಿತಾ ಮಾತ್ರ ಇತಿಹಾಸ ಸೃಷ್ಟಿಸುವ ಅವಕಾಶದ ಸಮೀಪ ತಲುಪಿದ್ದರು.

ಆದರೂ ಅದು ಯಶಸ್ವಿ ಪ್ರಯತ್ನವಾಗಿತ್ತು. ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎನ್ನುವುದು ತನ್ನ ಸುದೀರ್ಘ ಕಾಲದ ಕನಸಾಗಿತ್ತು. ಅದು ಈಡೇರಿದ್ದಕ್ಕೆ ತನಗೆ ಸಂತೋಷವಾಗಿದೆ ಎನ್ನುತ್ತಾರೆ 32ರ ಹರೆಯದ ರೆಹಾನಾ.

ಶಬರಿಮಲೆಗೆ ತೆರಳುವ ಮುನ್ನ ತಾನು ವೃತದ ಎಲ್ಲ ಕಟ್ಟುಪಾಡುಗಳನ್ನು ಅನುಸರಿಸಿದ್ದೆ. ಆದರೆ ಮತಾಂಧರು ಸನ್ನಿಧಾನಕ್ಕೆ ಪ್ರವೇಶವನ್ನು ತಡೆದಿದ್ದಾರೆ. ಇದನ್ನು ಪ್ರಶ್ನಿಸಲೇಬೇಕಿದೆ ಎಂದರು ರೆಹಾನಾ.

ಅಂದ ಹಾಗೆ ರೆಹಾನಾರಿಗೆ ವಿವಾದಗಳು ಹೊಸದೇನಲ್ಲ. ಕಲ್ಲಂಗಡಿ ವಿವಾದ,ಕಿಸ್ ಆಫ್ ಲವ್ ಅಭಿಯಾನ ಇತ್ಯಾದಿಗಳಲ್ಲಿ ಅವರ ಹೆಸರು ಕೇಳಿಬಂದಿತ್ತು.

ಶನಿವಾರ ಸುದ್ದಿ ಜಾಲತಾಣ ‘ಸ್ಕ್ರೋಲ್.ಇನ್’ಗೆ ನೀಡಿದ ಸಂದರ್ಶನದಲ್ಲಿ ರೆಹಾನಾ ತನ್ನ ಹೋರಾಟಗಳು ಮತ್ತು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸುವ ತನ್ನ ಪ್ರಯತ್ನದ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಸಾರಾಂಶ ಇಲ್ಲಿದೆ............

* ನೀವು ಶಬರಿಮಲೆಗೆ ಹೋಗಿದ್ದೇಕೆ?

ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ನನ್ನ ದೀರ್ಘಕಾಲದ ಕನಸಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಅಲ್ಲಿಗೆ ಭೇಟಿ ನೀಡಲು ಅವಕಾಶಕ್ಕಾಗಿ ಕಾಯುತ್ತಿದ್ದೆ. ಆದರೆ ಅ.17ರಂದು ದೇವಸ್ಥಾನವನ್ನು ತೆರೆದ ಬಳಿಕ ಮಹಿಳೆಯರನ್ನು ಪ್ರತಿಭಟನಾಕಾರರು ತಡೆಯುತ್ತಿದ್ದಾರೆಂಬ ವರದಿಗಳನ್ನು ಓದಿದ ಬಳಿಕ ಸಾಧ್ಯವಾದಷ್ಟು ಶೀಘ್ರ ಅಲ್ಲಿಗೆ ಭೇಟಿ ನೀಡಲು ನಿರ್ಧರಿಸಿದ್ದೆ. ಯಾತ್ರೆಗಾಗಿ ಅ.1ರಿಂದಲೇ ಕಟ್ಟುನಿಟ್ಟಿನಿಂದ ವೃತವನ್ನು ಆಚರಿಸುತ್ತಿದ್ದೆ. ಪ್ರತಿಭಟನಾಕಾರರು ತೊಂದರೆಯನ್ನು ಸೃಷ್ಟಿಸಲು ಅವಕಾಶ ನೀಡದಿರಲು ನಾನು ನಿರ್ಧರಿಸಿದ್ದೆ. ಇದೇ ಕಾರಣದಿಂದ ಯಾತ್ರೆಗೆ ಮುನ್ನ ನನ್ನಿಂದ ಸಾಧ್ಯವಾದ ಎಲ್ಲ ಧಾರ್ಮಿಕ ವಿಧಿಗಳನ್ನೂ ಪೂರೈಸಿದ್ದೆ.

 * ಯಾತ್ರೆಗೆ ಸಿದ್ಧತೆಗಳನ್ನು ಹೇಗೆ ಮಾಡಿಕೊಂಡಿದ್ದೀರಿ?

 ಅ.17ರಂದು ಪಟ್ಟಣಂಥಿಟ್ಟ ಜಿಲ್ಲಾಧಿಕಾರಿ ಪಿ.ಬಿ.ನೂಹ್ ಮತ್ತು ಐಜಿಪಿ ಮನೋಜ್ ಅಬ್ರಹಾಂ ಅವರನ್ನು ಸಂಪರ್ಕಿಸಿ ಶಬರಿಮಲೆ ಪ್ರವೇಶಿಸಲು ರಕ್ಷಣೆಯನ್ನು ಕೋರಿದ್ದೆ. ಶಬರಿಮಲೆಗೆ ಪ್ರವೇಶದ್ವಾರವಾಗಿರುವ ಪಂಪಾ ತಲುಪಿದರೆ ಸರಕಾರವು ರಕ್ಷಣೆಯನ್ನು ಒದಗಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಅ.18ರಂದು ನಾನು ಮತ್ತು ನನ್ನ ಪಾರ್ಟನರ್ ಇರುಮುಡಿ ಕಟ್ಟಲು ಅಗತ್ಯವಾದ ಎಲ್ಲ ಪೂಜಾ ಸಾಮಗ್ರಿಗಳನ್ನು ಖರೀದಿಸಿದ್ದೆವು. ಅ.18ರಂದು ಕೊಚ್ಚಿಯಿಂದ ಪ್ರಯಾಣವನ್ನು ಆರಂಭಿಸಿದ್ದೆವು.

* ಪಂಪಾ ತಲುಪಲು ನಿಮಗೆ ತೊಂದರೆಯಾಗಿತ್ತೇ?

 ಶುಕ್ರವಾರ ನಸುಕಿನ 12:30ಕ್ಕೆ ನಾವು ಪಂಪಾ ಪೊಲೀಸ್ ಠಾಣೆಯನ್ನು ತಲುಪಿದ್ದೆವು. ನೀಲಕ್ಕಲ್‌ವರೆಗೆ ಕಾರಿನಲ್ಲಿ ತೆರಳಿ ಬಳಿಕ ಬಸ್ಸಿನಲ್ಲಿ ಪಂಪಾಕ್ಕೆ ತೆರಳಿದ್ದೆವು. ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕಿರುವುದರಿಂದ ಕಾಯುವಂತೆ ಪೊಲೀಸರು ತಿಳಿಸಿದ್ದರು. ಬೆಳಿಗ್ಗೆ ಆರು ಗಂಟೆಗೆ ಅವರ ಸೂಚನೆಯ ಮೇರೆಗೆ ನಾವು ಪ್ರವೇಶದ್ವಾರವನ್ನು ತಲುಪಿದ್ದೆವು ಮತ್ತು ಏಳು ಗಂಟೆಗೆ ಚಾರಣವನ್ನಾರಂಭಿಸಿದ್ದೆವು. ನೀಲಕ್ಕಲ್ ಮಾರ್ಗದಲ್ಲಿ ಜನರು ನಮ್ಮನ್ನು ತಡೆಯಲು ಯತ್ನಿಸಿದ್ದರು,ಆದರೆ ನಾವು ವೇಗವಾಗಿ ಸಾಗಿ ಬಂದಿದ್ದೆವು.

* ಆದರೆ ದೇವಸ್ಥಾನವನ್ನು ಪ್ರವೇಶಿಸುವ ನಿಮ್ಮ ಪ್ರಯತ್ನವನ್ನು ಪ್ರತಿಭಟನಾಕಾರರು ವಿಫಲಗೊಳಿಸಿದರಲ್ಲ?

ದೇವಸ್ಥಾನಕ್ಕೆ ತೆರಳುವ ನಮ್ಮ ಮಾರ್ಗದಲ್ಲಿ ‘ಮಕ್ಕಳ ಗುರಾಣಿ’ಯನ್ನು ಕಂಡು ನಮಗೆ ಆಘಾತವಾಗಿತ್ತು. 100ಕ್ಕೂ ಅಧಿಕ ಮಕ್ಕಳನ್ನು ರಸ್ತೆಗಡ್ಡವಾಗಿ ಮಲಗಿಸಲಾಗಿತ್ತು. ಅದು ಮಕ್ಕಳ ಪಾಲಿಗೆ ಕ್ರೌರ್ಯವಾಗಿತ್ತು. ದೇವಸ್ಥಾನವನ್ನು ತಲುಪಲು ನೆರವಾಗುವುದಾಗಿ ಪೊಲೀಸರು ನಮಗೆ ತಿಳಿಸಿದ್ದರಾದರೂ ಅಮಾಯಕ ಮಕ್ಕಳ ಮೇಲೆ ನಡೆಯುವುದನ್ನು ನಾವು ಬಯಸಿರಲಿಲ್ಲ.

ಕೋಮುಜ್ವಾಲೆಯನ್ನು ಉತ್ತೇಜಿಸುವ ಮೂಲಕ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ನಾವು ದೇವಸ್ಥಾನದ ಆವರಣವನ್ನು ಪ್ರವೇಶಿಸಿದರೆ ಶುದ್ಧೀಕರಣ ವಿಧಿಗಳನ್ನು ನಡೆಸಲು ಮಂದಿರವನ್ನು ಮುಚ್ಚುವುದಾಗಿ ಅವರು ಘೋಷಿಸಿದ್ದರು. ನನ್ನ ಮುಸ್ಲಿಂ ಹೆಸರಿನಿಂದಾಗಿ ಅವರು ಕ್ಷೋಭೆಗೊಳಗಾಗಿದ್ದರು ಎಂದು ನಾನು ಭಾವಿಸಿದ್ದೇನೆ. ಮಹಿಳೆಯರು ಪ್ರವೇಶಿಸಿದರೆ ತಾನು ದೇವಸ್ಥಾನವನ್ನು ಮುಚ್ಚುವುದಿಲ್ಲ ಎಂದು ಇದೇ ಅರ್ಚಕರು ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ನನ್ನ ಮುಸ್ಲಿಂ ಹೆಸರು ಅವರ ನಿಲುವನ್ನು ಬದಲಿಸಿತ್ತು ಎನ್ನುವುದು ಸ್ಪಷ್ಟವಿದೆ. ನನಗೆ ತಿಳಿದಿರುವಂತೆ ಎಲ್ಲ ಧರ್ಮಗಳು ಮತ್ತು ಜಾತಿಗಳ ಜನರು ಶಬರಿಮಲೆಯಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಬಹುದು. ದೇವಸ್ಥಾನದ ಅನನ್ಯತೆಯನ್ನು ಬದಲಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಮುಖ್ಯ ಅರ್ಚಕರ ವಿರುದ್ಧ ನಾನು ಪೊಲೀಸ್ ದೂರನ್ನು ದಾಖಲಿಸುತ್ತಿದ್ದೇನೆ.

* ನಿಮ್ಮ ಪ್ರಯತ್ನ ಯಶಸ್ವಿಯಾಗಿದೆ ಎಂದು ನೀವು ಈಗಲೂ ಭಾವಿಸುತ್ತಿದ್ದೀರಾ?

ಹೌದು. ಶಬರಿಮಲೆಗೆ ಭೇಟಿ ನೀಡಬೇಕೆಂಬ ನನ್ನ ಬಯಕೆಯನ್ನು ತೀರಿಸಿಕೊಂಡಿದ್ದೇನೆ. ಚಾರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೆ. ಕಪ್ಪು ವಸ್ತ್ರಗಳನ್ನು ತೊಟ್ಟು,ಮಣಿಸರಗಳನ್ನು ಧರಿಸಿ ತಲೆಯ ಮೇಲೆ ಇರುಮುಡಿ ಹೊತ್ತು ಬೆಟ್ಟದ ತುದಿಯನ್ನು ತಲುಪಿದ್ದೆ. ಆದರೆ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಲು,ಗರ್ಭಗುಡಿಯಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲು ಮತ್ತು ಅರ್ಚಕರಿಂದ ಪ್ರಸಾದವನ್ನು ಸ್ವೀಕರಿಸಲು ನನಗೆ ಸಾಧ್ಯವಾಗಿಲ್ಲ. ಆದರೆ ಸ್ತ್ರೀದ್ವೇಷಿ ಅರ್ಚಕರಿಂದ ಪ್ರಸಾದವನ್ನು ಸ್ವೀಕರಿಸದಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ.

* ಪೊಲೀಸ್ ರಕ್ಷಣೆ ನಿಮಗೆ ತೃಪ್ತಿ ನೀಡಿದೆಯೇ?

ಪೊಲೀಸರು ನಮ್ಮ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸಿದ್ದರು. ಚಾರಣದುದ್ದಕ್ಕೂ ಕಟ್ಟೆಚ್ಚರದಿಂದಿದ್ದರು.

* ಶಬರಿಮಲೆಗೆ ತೆರಳುವ ನಿಮ್ಮ ನಿರ್ಧಾರದ ಬಗ್ಗೆ ವಿಷಾದವಿದೆಯೇ?

ಇಲ್ಲ,ನನಗೆ ಯಾವುದೇ ವಿಷಾದವಿಲ್ಲ. ನಾನು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೆ ಎಂದು ನಂಬಿದ್ದೇನೆ.

* ನೀವು ಪ್ರತಿಭಟನೆಗಳನ್ನು ನಿರೀಕ್ಷಿಸಿದ್ದೀರಾ?

 ಹೌದು. ಪೊಲೀಸರು ಮತ್ತು ಜಿಲ್ಲಾಡಳಿತದ ಬೆಂಬಲ ದೊರೆಯುತ್ತದೆ ಎಂಬ ವಿಶ್ವಾಸ ನನಗಿತ್ತು ಮತ್ತು ಅವರು ಅದನ್ನು ಹುಸಿಗೊಳಿಸಲಿಲ್ಲ. ದಾರಿಯುದ್ದಕ್ಕೂ ಗೂಂಡಾಗಳು ಇದ್ದಾರೆ ಎನ್ನುವುದು ನಮಗೆ ಗೊತ್ತಿತ್ತು. ಮರುಪ್ರಯಾಣದ ಬಗ್ಗೆ ನನಗೆ ಅತ್ಯಂತ ಹೆಚ್ಚಿನ ಚಿಂತೆಯಿತ್ತು. ಯಾರಾದರೂ ನಮ್ಮ ಮೇಲೆ ದಾಳಿ ನಡೆಸುತ್ತಾರೆ ಎಂದು ಹೆದರಿಕೊಂಡಿದ್ದೆ.

ಶುಕ್ರವಾರ ರಾತ್ರಿ ನಾನು ಕೊಚ್ಚಿಯ ನನ್ನ ಮನೆಯನ್ನು ತಲುಪಿದಾಗ ಹಿಂದುತ್ವ ಕಾರ್ಯಕರ್ತರು ಅಲ್ಲಿ ದಾಂಧಲೆ ನಡೆಸಿದ್ದರು. ಬರಿಗಾಲಿನ ಚಾರಣದಿಂದಾಗಿ ಕಾಲುಗಳಲ್ಲಿ ಗುಳ್ಳೆಗಳೆದ್ದಿದ್ದವು,ಆದರೂ ನನ್ನೊಂದಿಗೆ ಶಬರಿಮಲೆಗೆ ಬಂದಿದ್ದ ಪಾರ್ಟನರ್ ಮನೋಜ ಶ್ರೀಧರ ಮತ್ತು ನಾನು ಸೇರಿಕೊಂಡು ಮನೆಯನ್ನು ಒಂದು ಹದಕ್ಕೆ ತರುವಾಗ ಬೆಳಕು ಹರಿದಿತ್ತು.

* ನಿಮ್ಮ ಯಾತ್ರೆಯ ರಾಜಕೀಯ ಪರಿಣಾಮದ ಬಗ್ಗೆ ನೀವೆಂದಾದರೂ ಯೋಚಿಸಿದ್ದೀರಾ?

ನನ್ನ ಮುಸ್ಲಿಂ ಹೆಸರಿನಿಂದಾಗಿ ಪ್ರತಿಭಟನಾಕಾರರು ಕೋಮುಬಣ್ಣ ನೀಡುತ್ತಾರೆಂದು ನಾನೆಂದೂ ಯೋಚಿಸಿರಲೇ ಇಲ್ಲ. ಪವಿತ್ರ ಮೆಟ್ಟಲುಗಳನ್ನು ತಲುಪುವದರಲ್ಲಿದ್ದಾಗ ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ ಎನ್ನುವುದು ನನಗೆ ಅರ್ಥವಾಗಿತ್ತು ಮತ್ತು ನನ್ನ ಮನೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಯಾರೋ ಕೂಗುತ್ತಿರುವುದು ನನ್ನ ಕಿವಿಗೆ ಬಿದ್ದಿತ್ತು.

* ನೀವು ಇರುಮುಡಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಸಾಗಿಸಿದ್ದೀರಿ ಎಂದು ಕೆಲವು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರಲ್ಲ?

ಅಯ್ಯಪ್ಪ ಸ್ವಾಮಿಗೆ ಇರುಮುಡಿ ಅರ್ಪಿಸಲು ಸಾಧ್ಯವಾಗದಿದ್ದಾಗ ಅದನ್ನು ನಾನು ಪೊಲೀಸರಿಗೆ ಒಪ್ಪಿಸಿದ್ದೆ. ಸ್ವೀಕರಿಸುವ ಮುನ್ನ ಅವರು ಅದನ್ನು ಪರೀಕ್ಷಿಸಿದ್ದರು. ಇರುಮುಡಿಯಲ್ಲಿ ವಸ್ತುಗಳನ್ನು ತುಂಬಲು ನಾವು 2,000 ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡಿದ್ದೆವು.

* ದೇವಸ್ಥಾನವನ್ನು ಪ್ರವೇಶಿಸುವ ನಿಮ್ಮ ಪ್ರಯತ್ನವು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರ ಸೂಚನೆಯಂತೆ ಆಡಿದ್ದ ನಾಟಕವಾಗಿತ್ತು ಎಂಬ ಆರೋಪಗಳಿಗೆ ನಿಮ್ಮ ಪ್ರತಿಕ್ರಿಯೆ ಏನು?

ಸುರೇಂದ್ರನ್ ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ. ಎರಡು ವರ್ಷಗಳ ಹಿಂದೆ ಅವರು ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಬೆಂಬಲಿಸಿ ಫೇಸ್‌ಬುಕ್ ಪೋಸ್ಟ್‌ವೊಂದನ್ನು ಬರೆದಿದ್ದರು (ಈ ತಿಂಗಳು ಪ್ರತಿಭಟನೆಗಳು ಆರಂಭವಾದ ಬಳಿಕ ಈ ಪೋಸ್ಟ್‌ನ್ನು ಅವರು ತೆಗೆದಿದ್ದಾರೆ). ಯಾರೋ ನನ್ನನ್ನು ಅವರ ಪೋಸ್ಟ್‌ಗೆ ಟ್ಯಾಗ್ ಮಾಡಿದ್ದರು. ಅದು ಮಹಿಳೆಯರನ್ನು ಬೆಂಬಲಿಸುವ ಪೋಸ್ಟ್ ಆಗಿದ್ದರಿಂದ ನಾನದನ್ನು ಸ್ವೀಕರಿಸಿದ್ದೆ. ಸುರೇಂದ್ರನ್‌ಗೂ ನನಗೂ ಯಾವುದೇ ಸಂಪರ್ಕವಿಲ್ಲ. ಇದು ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಹೆಣೆದ ಕಟ್ಟುಕಥೆಯಾಗಿದೆ.

* ನಿಮಗೆ ಸೂರ್ಯಗಾಯತ್ರಿ ಎಂಬ ಹೆಸರು ಬಂದಿದ್ದು ಹೇಗೆ?

ನನ್ನ ಅಧಿಕೃತ ಹೆಸರು ಎ.ಎಸ್.ಫಾತಿಮಾ. ಆದರೆ ಹಲವಾರು ವರ್ಷಗಳ ಹಿಂದೆಯೇ ಅಂಟಿಸಿಕೊಂಡಿರುವ ರೆಹಾನಾ ಹೆಸರಿನಿಂದ ಕರೆದುಕೊಳ್ಳಲು ನಾನು ಇಷ್ಟ ಪಡುತ್ತೇನೆ. ಪರಮ ಹಿಂದುವಾಗಿರುವ ನನ್ನ ನಿಕಟ ಸ್ನೇಹಿತನೊಂದಿಗೆ ನಾನು ಹಿಂದು ಧರ್ಮದ ಬಗ್ಗೆ ಚರ್ಚಿಸುತ್ತಿದ್ದೆ. ಹಿಂದು ಧರ್ಮದ ಕುರಿತು ಬಹಳಷ್ಟು ಪುಸ್ತಕಗಳನ್ನು ನಾನು ಓದಿದ್ದೇನೆ ಮತ್ತು ಸೂರ್ಯಗಾಯತ್ರಿ ಎಂಬ ಹೆಸರನ್ನಿಟ್ಟುಕೊಳ್ಳಲು ನಿರ್ಧರಿಸಿದ್ದೆ.

* ಮಹಿಳೆಯರು ಕೊನೆಗೂ ಶಬರಿಮಲೆಯ ಗರ್ಭಗುಡಿಯನ್ನು ಪ್ರವೇಶಿಸುವುದು ಯಾವಾಗ ಸಾಧ್ಯವಾಗುತ್ತದೆ?

ಅದು ಶೀಘ್ರದಲ್ಲಿಯೇ ಸಂಭವಿಸಲಿದೆ ಎಂದು ನಾನು ಭಾವಿಸಿದ್ದೇನೆ. ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ.

ಕೃಪೆ : scroll.in

Writer - ಟಿ.ಎ.ಅಮೀರುದ್ದೀನ್

contributor

Editor - ಟಿ.ಎ.ಅಮೀರುದ್ದೀನ್

contributor

Similar News