ಮಾಲ್ದೀವ್ಸ್ ಚುನಾವಣಾ ಫಲಿತಾಂಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

Update: 2018-10-21 16:50 GMT

ಕೊಲಂಬೊ, ಅ. 21: ಕಳೆದ ತಿಂಗಳು ನಡೆದ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸಿ ಹೊಸದಾಗಿ ಚುನಾವಣೆ ನಡೆಸಲು ಆದೇಶ ನೀಡುವಂತೆ ಕೋರಿ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರವಿವಾರ ತಿರಸ್ಕರಿಸಿದೆ.

ಸೆಪ್ಟಂಬರ್ 23ರಂದು ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಅಭ್ಯರ್ಥಿ ಇಬ್ರಾಹೀಮ್ ಮುಹಮ್ಮದ್ ವಿಜಯಿಯಾಗಿದ್ದರು.

ಈ ಚುನಾವಣೆಯಲ್ಲಿ ಅವ್ಯವಹಾರ ನಡೆಸಲಾಗಿತ್ತು ಎಂಬುದಾಗಿ ಅಧ್ಯಕ್ಷರು ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಆದರೆ, ಸರ್ವಾನುಮತದ ತೀರ್ಪನ್ನು ನೀಡಿದ ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ, ತನ್ನ ಆರೋಪವನ್ನು ಸಾಬೀತುಪಡಿಸಲು ಯಮೀನ್ ವಿಫಲರಾಗಿದ್ದಾರೆ ಎಂದು ಹೇಳಿದೆ.

ವಿದೇಶಗಳ ಒತ್ತಡಕ್ಕೆ ಒಳಗಾದ ಯಮೀನ್ ಆರಂಭದಲ್ಲಿ ಸೋಲನ್ನು ಒಪ್ಪಿಕೊಂಡಿದ್ದರು ಹಾಗೂ ನವೆಂಬರ್ 17ರಂದು ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿದ್ದರು. ಆದರೆ, ಈ ತಿಂಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣೆಯಲ್ಲಿ ಅಕ್ರಮ ನಡೆಸಲು ಮ್ಯಾಜಿಕ್ ಶಾಯಿಯನ್ನು ಬಳಸಲಾಗಿದೆ ಹಾಗೂ ತನ್ನ ಪರವಾಗಿ ಚಲಾವಣೆಯಾಗಿದ್ದ ಮತಗಳು ನಾಪತ್ತೆಯಾಗಿವೆ ಎಂಬುದಾಗಿ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News