ಸಿಬಿಐ ಮುಖ್ಯಸ್ಥ-ಉಪಮುಖ್ಯಸ್ಥರ ನಡುವಿನ ಸಂಘರ್ಷ ಉತ್ತುಂಗಕ್ಕೆ

Update: 2018-10-21 17:29 GMT

ಹೊಸದಿಲ್ಲಿ,ಅ.21: ಸಿಬಿಐ ತನ್ನ ಉಪಮುಖ್ಯಸ್ಥ ರಾಕೇಶ ಅಸ್ಥಾನಾರ ವಿರುದ್ಧ ಲಂಚ ಪ್ರಕರಣವನ್ನು ದಾಖಲಿಸುವುದರೊಂದಿಗೆ ದೇಶದ ಉನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥ ಅಲೋಕ ವರ್ಮಾ ಮತ್ತು ಅಸ್ಥಾನಾ ನಡುವಿನ ಆಂತರಿಕ ಸಂಘರ್ಷ ಉತ್ತುಂಗಕ್ಕೇರಿದೆ. ಇದಕ್ಕೆ ಪ್ರತಿಯಾಗಿ ಅಸ್ಥಾನಾ ತನ್ನ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೂರಿಕೊಂಡು ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಅಕ್ರಮ ಹಣ ವಹಿವಾಟು ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಮಾಂಸ ರಫ್ರುವ್ಯಾಪಾರಿ ಮೊಯಿನ್ ಕುರೇಶಿಯನ್ನು ಒಳಗೊಂಡಿರುವ ಪ್ರಕರಣದಲ್ಲಿ ತನಿಖೆಗೊಳಗಾಗಿರುವ ಹೈದರಾಬಾದ್‌ನ ಉದ್ಯಮಿ ಸತೀಶ ಸಿನ್ಹಾ ಸಲ್ಲಿಸಿರುವ ದೂರಿನಲ್ಲಿ ಅಸ್ಥಾನಾರ ಹೆಸರು ಪ್ರಸ್ತಾವಗೊಂಡಿದೆ.

ಕುರೇಶಿ ವಿರುದ್ಧದ ಪ್ರಕರಣದಲ್ಲಿ ತನ್ನನ್ನು ಹೆಸರಿಸದಿರಲು 2017 ಡಿಸೆಂಬರ್‌ನಿಂದ ಆರಂಭಗೊಂಡು 10 ತಿಂಗಳ ಅವಧಿಯಲ್ಲಿ ತಾನು ಎರಡು ಕೋ.ರೂ.ಗಳ ಲಂಚವನ್ನು ನೀಡಿರುವುದಾಗಿ ಸಿನ್ಹಾ ಸಿಬಿಐಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಸಿನ್ಹಾರ ದೂರು ಅವರ ಮತ್ತು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಕೆಲವು ಅಧಿಕಾರಿಗಳ ನಡುವಿನ ಪಿತೂರಿಯ ಫಲಶೃತಿಯಾಗಿದೆ ಎಂದು ಆರೋಪಿಸಿರುವ ಅಸ್ಥಾನಾ,ವರ್ಮಾ ಮತ್ತು ಅವರ ಮುಖ್ಯ ಜಾಗ್ರತ ಅಧಿಕಾರಿ ಅರುಣ ಶರ್ಮಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದಾರೆ.

 ಕುರೇಶಿ ಪ್ರಕರಣದಲ್ಲಿ ತನಿಖೆಯ ದಾರಿ ತಪ್ಪಿಸಲು ಸಿನ್ಹಾ ವರ್ಮಾರಿಗೆ ಎರಡು ಕೋ.ರೂ.ಗಳನ್ನು ನೀಡಿದ್ದಾರೆ ಎಂದೂ ಅಸ್ಥಾನಾ ಕಳೆದ ಆಗಸ್ಟ್‌ನಲ್ಲಿ ಸಂಪುಟ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದರು. ಸಿನ್ಹಾ ದೇಶವನ್ನು ತೊರೆಯುವುದನ್ನು ತಡೆದು,ತನಿಖೆಯಲ್ಲಿ ಭಾಗಿಯಾಗುವಂತೆ ಸೂಚಿಸಿದ ಬಳಿಕ ತನ್ನ ವಿರುದ್ಧ ಸಂಚು ರೂಪುಗೊಂಡಿತ್ತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News