ಭಾರತದ ಅಥ್ಲೀಟ್‌ಗಳ ದಿನಭತ್ತೆ ಹೆಚ್ಚಿಸಿ: ಕ್ರೀಡಾ ಸಚಿವಾಲಯಕ್ಕೆ ಐಒಎ ಮನವಿ

Update: 2018-10-21 18:38 GMT

ಹೊಸದಿಲ್ಲಿ, ಅ.21: ಭಾರತದ ಅಥ್ಲೀಟ್‌ಗಳಿಗೆ ಅಂತರ್‌ರಾಷ್ಟ್ರೀಯ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲು ತೆರಳುವಾಗ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನೀಡಬೇಕು ಹಾಗೂ ಅವರ ಆಹಾರದ ದಿನಭತ್ತೆಯನ್ನು ಹೆಚ್ಚಳಗೊಳಿಸಬೇಕು ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ರವಿವಾರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್‌ಗೆ ವಿನಂತಿಸಿದ್ದಾರೆ.

ಇತ್ತೀಚೆಗೆ ಅರ್ಜೆಂಟೀನದಲ್ಲಿ ಕೊನೆಗೊಂಡ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಐಒಎ ರವಿವಾರ ಕ್ರಮವಾಗಿ 3 ಲಕ್ಷ, 1.5 ಲಕ್ಷ ಹಾಗೂ 1 ಲಕ್ಷ ರೂ.ನೀಡಿ ಗೌರವಿಸಿದೆ.

‘‘ಅಂತರ್‌ರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಲು ಅಧಿಕಾರಿಗಳು ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ, ಅಥ್ಲೀಟ್‌ಗಳು ಇಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಾರೆ. ಇದು ನಮಗೆ ಮುಜುಗರ ತರುವ ವಿಚಾರ. ಮೂರು ಗಂಟೆಗಿಂತ ಹೆಚ್ಚಿನ ಪ್ರಯಾಣದ ವೇಳೆ ಅಥ್ಲೀಟ್‌ಗಳಿಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಬೇಕೆಂದು ಸಚಿವಾಲಯಕ್ಕೆ ಮನವಿ ಸಲ್ಲಿಸುವೆ’’ ಎಂದು ಕ್ರೀಡಾ ಸಚಿವ ರಾಥೋಡ್ ಹಾಗೂ ಕ್ರೀಡಾ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಉಪಸ್ಥಿತಿಯಲ್ಲಿ ಮೆಹ್ತಾ ಹೇಳಿದ್ದಾರೆ.

‘‘ಒಂದು ವೇಳೆ ನಾವು ಇಂತಹ ವ್ಯವಸ್ಥೆಗಳತ್ತ ಕಾಳಜಿವಹಿಸಿದರೆ, ಪೂರಕ ಆಹಾರಕ್ಕಾಗಿ ದಿನಭತ್ತೆಯನ್ನು 450 ರೂ.ನಿಂದ 1,000 ರೂ.ಗೆ ಏರಿಕೆ ಮಾಡಿದರೆ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯ. ಸಾಯ್‌ನಲ್ಲಿ ನಡೆಯಲಿರುವ ಮುಂದಿನ ಕಾರ್ಯಕ್ರಮದ ವೇಳೆ ಕ್ರೀಡಾ ಸಚಿವರು ನಮಗೆ ಈ ಕುರಿತು ಭರವಸೆ ನೀಡುವ ವಿಶ್ವಾಸವಿದೆ’’ ಎಂದರು. ‘‘ಪ್ರಧಾನಮಂತ್ರಿ ಮೋದಿ ಅವರು ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ನಿಮ್ಮೆಲ್ಲರನ್ನು ಬೆಳಗ್ಗೆ ಭೇಟಿಯಾಗಿದ್ದಾರೆ. ಇದು ನೀವೆಷ್ಟು ಪ್ರಮುಖರು ಎಂದು ತೋರಿಸುತ್ತದೆ. ನಾವು 2020ರ ಟೋಕಿಯೋ ಒಲಿಂಪಿಕ್ಸ್ ಮಾತ್ರವಲ್ಲ 2024ರ ಗೇಮ್ಸ್ ನತ್ತಲೂ ಗಮನ ಹರಿಸುತ್ತಿದ್ದೇವೆ’’ ಎಂದು ರಾಥೋಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News