ಈ ರಾಜ್ಯದಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ದುಬಾರಿ!

Update: 2018-10-22 04:00 GMT

ಭುವನೇಶ್ವರ, ಅ.22: ದೇಶದಲ್ಲೇ ಮೊದಲ ಬಾರಿಗೆ ಒಡಿಶಾದಲ್ಲಿ ಪೆಟ್ರೋಲ್ ಬೆಲೆಗಿಂತ ಅಧಿಕ ದರದಲ್ಲಿ ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ರಾಜಧಾನಿ ಭುವನೇಶ್ವರದಲ್ಲಿ ರವಿವಾರ ಪ್ರತಿ ಲೀಟರ್ ಡೀಸೆಲ್ 80.78 ರೂಪಾಯಿಗೆ ಮಾರಾಟವಾಗಿದ್ದರೆ, ಪೆಟ್ರೋಲ್ ಬೆಲೆ 80.65 ರೂಪಾಯಿ ಆಗಿತ್ತು. ಶನಿವಾರ ಮೊಟ್ಟಮೊದಲ ಬಾರಿಗೆ ಡೀಸೆಲ್ ಬೆಲೆ, ಪೆಟ್ರೋಲ್ ಬೆಲೆಯನ್ನು ಮೀರಿತ್ತು.

ಶನಿವಾರ ಪ್ರತಿ ಲೀಟರ್ ಡೀಸೆಲ್ 80.97 ರೂಪಾಯಿಗೆ ಮಾರಾಟವಾಗಿದ್ದರೆ, ಪೆಟ್ರೋಲ್ 80.90 ರೂಪಾಯಿ ದರದಲ್ಲಿ ಮಾರಾಟವಾಗಿತ್ತು. ಕಳೆದ ಐದು ದಿನಗಳಲ್ಲಿ ಎರಡೂ ಇಂಧನಗಳ ಬೆಲೆ ಕಡಿಮೆಯಾಗಿತ್ತು. ಸಾಮಾನ್ಯವಾಗಿ ದೇಶಾದ್ಯಂತ ಡೀಸೆಲ್ ಚಿಲ್ಲರೆ ಮಾರಾಟ ದರ ಪೆಟ್ರೋಲ್‌ಗಿಂತ ಕಡಿಮೆ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕಡಿಮೆ ತೆರಿಗೆ, ಕಡಿಮೆ ಡೀಲರ್ ಕಮಿಷನ್ ಹಾಗೂ ಕಡಿಮೆ ಮೂಲ ದರ.

ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಬೇಡಿಕೆಯ ಹಿನ್ನೆಲೆಯಲ್ಲಿ ಡೀಸೆಲ್‌ನ ಮೂಲದರ 5 ರೂಪಾಯಿಯಷ್ಟು ಹೆಚ್ಚಿದೆ. ಮೂಲದರ ಎಂದರೆ ತೈಲ ಕಂಪೆನಿಗಳು ತೆರಿಗೆ ರಹಿತವಾಗಿ ಡೀಲರ್‌ಗಳಿಗೆ ವಿಧಿಸುವ ದರ. ಈ ದರ ಹೆಚ್ಚಳ ಪ್ರಮಾಣ, ಡೀಸೆಲ್‌ಗೆ ಇರುವ ಕಡಿಮೆ ಸೆಂಟ್ರಲ್ ಎಕ್ಸೈಸ್ ಮತ್ತು ಕಡಿಮೆ ಡೀಲರ್ ಕಮಿಷನ್ ಅನುಕೂಲತೆಯನ್ನು ತಿಂದುಹಾಕಿದೆ ಎನ್ನುವುದು ಉತ್ಕಲ್ ಪಟ್ರೋಲಿಯಂ ಡೀಲರ್ಸ್‌ ಅಸೋಸಿಯೇಶನ್ ಕಾರ್ಯದರ್ಶಿ ಸಂಜಯ್ ಲಾಥ್ ಅವರ ಅಭಿಪ್ರಾಯ.

"ಒಡಿಶಾದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ದರ ಶೇಕಡ 26 ಇರುವುದರಿಂದ ಡೀಸೆಲ್ ಈಗ ದುಬಾರಿಯಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಡೀಸೆಲ್ ಮೇಲಿನ ವ್ಯಾಟ್ ದರ ಪೆಟ್ರೋಲ್‌ಗಿಂತ ಕಡಿಮೆ ಇದೆ" ಎಂದು ಅವರು ವಿವರಿಸುತ್ತಾರೆ. ತೈಲ ಕಂಪೆನಿಗಳ ಅಂಕಿ ಅಂಶದ ಪ್ರಕಾರ, ಡೀಲರ್‌ಗಳು ಇದೀಗ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆರಹಿತವಾಗಿ 43.49 ರೂಪಾಯಿ ಬೆಲೆ ನೀಡುತ್ತಿದ್ದಾರೆ. ಆದರೆ ಪ್ರತಿ ಲೀಟರ್‌ಗೆ 48.02 ರೂಪಾಯಿ ದರ ನೀಡಬೇಕಾಗಿದೆ. ಎಕ್ಸೈಸ್ ಸುಂಕ ಪೆಟ್ರೋಲ್‌ಗೆ 17.80 ರೂಪಾಯಿ ಮತ್ತು ಡೀಸೆಲ್‌ಗೆ 13.83 ರೂಪಾಯಿ ಇದೆ. ಡೀಲರ್ ಕಮಿಷನ್ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 3.5 ರೂಪಾಯಿ ಇದ್ದರೆ, ಡೀಸೆಲ್‌ಗೆ 2.5 ರೂಪಾಯಿ.

ಈ ಪರಿಸ್ಥಿತಿ ಆಡಳಿತಾರೂಢ ಬಿಜೆಡಿ ಮತ್ತು ವಿರೋಧ ಪಕ್ಷವಾದ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News