ಪೈನ್‌ಬೆರಿಗಳ ಆರೋಗ್ಯಲಾಭಗಳು ಗೊತ್ತೇ.....?

Update: 2018-10-22 10:46 GMT

ಕೆಂಪು ಬಣ್ಣದ ಸ್ಟ್ರಾಬೆರಿ ಹಣ್ಣುಗಳು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಬಿಳಿಯ ಬಣ್ಣದ ಸ್ಟ್ರಾಬೆರಿ ಹಣ್ಣುಗಳೂ ಇವೆ ಮತ್ತು ಇವುಗಳನ್ನು ಪೈನ್‌ಬೆರಿಗಳು ಎಂದು ಕರೆಯಲಾಗುತ್ತದೆ. ಈ ಪೈನ್‌ಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು,ಜೊತೆಗೆ ಇತರ ಆರೋಗ್ಯಲಾಭಗಳನ್ನೂ ನೀಡುತ್ತವೆ.

ಎರಡು ವಿಧಗಳ ಸ್ಟ್ರಾಬೆರಿ ತಳಿಗಳನ್ನು ಸಂಕರಗೊಳಿಸಿ ಪೈನ್‌ಬೆರಿಗಳನ್ನು ಸೃಷ್ಟಿಸಲಾಗಿದೆ. ಇವು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ.....

►ಉತ್ಕರ್ಷಣಶೀಲ ಒತ್ತಡಗಳನ್ನು ತಗ್ಗಿಸುತ್ತವೆ

ಪೈನ್‌ಬೆರಿಗಳಲ್ಲಿ ಸಮೃದ್ಧವಾಗಿರುವ ಉತ್ಕರ್ಷಣ ನಿರೋಧಕಗಳು ಶರೀರದಲ್ಲಿ ಆಕ್ಸಿಡೇಟಿವ್ ಸ್ಟ್ರೆಸ್ ಅಥವಾ ಉತ್ಕರ್ಷಣಶೀಲ ಒತ್ತಡವನ್ನು ತಗ್ಗಿಸುತ್ತವೆ ಮತ್ತು ಕ್ಯಾನ್ಸರ್ ಹಾಗೂ ಹೃದಯರಕ್ತನಾಳ ಕಾಯಿಲೆಗಳಂತಹ ಹೃದಯ ಅಪಾಯಗಳನ್ನು ದೂರವಿರಿಸುತ್ತವೆ. ಅಲ್ಲದೆ ಇತರ ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗ ಪೈನ್‌ಬೆರಿಗಳನ್ನು ಸೇವಿಸುತ್ತಿದ್ದರೆ ಶರೀರದ ಒಟ್ಟಾರೆ ಆರೋಗ್ಯವು ಉತ್ತಮಗೊಳ್ಳುತ್ತದೆ.

►ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ

ಪೈನ್‌ಬೆರಿಗಳು ಸಿ ವಿಟಾಮಿನ್‌ನ ಪ್ರಮುಖ ಮೂಲಗಳಲ್ಲೊಂದಾಗಿರುವುದರಿಂದ ಮತ್ತು ಸಾಕಷ್ಟು ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಟದಲ್ಲಿ ನೆರವಾಗುತ್ತದೆ ಮತ್ತು ಸಾಮಾನ್ಯ ಶೀತ,ಅಲರ್ಜಿಗಳು,ಫ್ಲೂ ಇತ್ಯಾದಿಗಳಿಗೆ ಗುರಿಯಾಗುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಪೈನ್‌ಬೆರಿಗಳನ್ನು ಸೇವಿಸುವುದರಿಂದ ವೈದ್ಯರನ್ನು ದೂರವಿರಿಸಬಹುದು.

►ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ

ಪೈನ್‌ಬೆರಿಗಳು ಹೃದಯದ ಆರೋಗ್ಯಕ್ಕೆ ಪ್ರಮುಖ ಪೌಷ್ಟಿಕಾಂಶವಾಗಿರುವ ಪೊಟ್ಯಾಷಿಯಂ ಅನ್ನು ಸಮೃದ್ಧವಾಗಿ ಒಳಗೊಂಡಿವೆ. ಹೀಗಾಗಿ ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಪೊಟ್ಯಾಷಿಯಂ ನೆರವಿನಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಬಹುದು ಮತ್ತು ರಕ್ತದೊತ್ತಡವು ಸಹಜವಾಗಿದ್ದರೆ ಆರೋಗ್ಯಕರ ಜೀವನವನ್ನು ನಡೆಸಬಹುದು. ಪೈನ್‌ಬೆರಿಗಳು ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುವ ಮೂಲಕ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ.

►ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತವೆ

 ನಮ್ಮ ಜೀರ್ಣಾಂಗವು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅಜೀರ್ಣ,ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಗಳು ತಲೆದೋರುತ್ತವೆ. ಹೀಗಾಗಿ ನಮ್ಮ ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಪ್ರತಿದಿನದ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರು ಇರುವುದು ಅಗತ್ಯವಾಗುತ್ತದೆ. ನಾರು ಹೃದೋಗಗಳ ಅಪಾಯ ಮತ್ತು ಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ನೆರವಾಗುವ ಜೊತೆಗೆ,ಹೊಟ್ಟೆ ತುಂಬಿದ ಅನುಭವವನ್ನು ನೀಡಿ ಹಸಿವನ್ನು ನಿಯಂತ್ರಿಸುತ್ತದೆ. ಪೈನ್‌ಬೆರಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರು ಇರುವುದರಿಂದ ಮಧ್ಯಾಹ್ನ ಅಥವಾ ಸಂಜೆಯ ವೇಳೆಗಳಲ್ಲಿ ಅವುಗಳನ್ನು ಸೇವಿಸುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ. ಪೈನ್‌ಬೆರಿಗಳು ಗಾತ್ರದಲ್ಲಿ ಪುಟ್ಟದಾಗಿ ಕಂಡರೂ ಅವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ನಾರು ಅತಿಸಾರ ಮತ್ತು ಮಲಬದ್ಧತೆಯ ವಿರುದ್ಧ ಹೋರಾಡುವ ಮೂಲಕ ಹೊಟ್ಟೆನೋವು ಅಥವಾ ಇತರ ಜೀರ್ಣಸಂಬಂಧಿ ಸಮಸ್ಯೆಗಳಿಂದ ಉಪಶಮನ ನೀಡುತ್ತದೆ. ಶರೀರದಿಂದ ತ್ಯಾಜ್ಯವನ್ನು ತ್ವರಿತವಾಗಿ ಹೊರಹಾಕಲೂ ಅದು ನೆರವಾಗುತ್ತದೆ.

►ಚೈತನ್ಯಯುತರನ್ನಾಗಿ ಇರಿಸುತ್ತವೆ

 ಪೈನ್‌ಬೆರಿಗಳ ಸೇವನೆಯು ದಿನವಿಡೀ ನಮ್ಮನ್ನು ಚೈತನ್ಯಯುತರನ್ನಾಗಿ ಇರಿಸುತ್ತದೆ. ಇವುಗಳಲ್ಲಿ ಸಮೃದ್ಧವಾಗಿರುವ ಕಾರ್ಬೊಹೈಡ್ರೇಟ್‌ಗಳು ಶರೀರದಲ್ಲಿಯ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತವೆ. ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿರುವವರು ಪ್ರತಿದಿನ ಕಾರ್ಬೊಹೈಡ್ರೇಟ್‌ಗಳ ಸೇವನೆ ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂದು ಭಾವಿಸಿರಬಹುದು,ಆದರೆ ಚೀಸ್‌ನಿಂದ ತುಂಬಿದ ಬರ್ಗರ್‌ಗಳನ್ನು ತಿನ್ನುವುದಕ್ಕಿಂತ ಪೈನ್‌ಬೆರಿಗಳ ಸೇವನೆ ಎಷ್ಟೋ ಉತ್ತಮವಾಗಿದೆ. ಅಲ್ಲದೆ ಬೆಳಗ್ಗಿನ ಸಮಯದಲ್ಲಿ ಪೈನ್‌ಬೆರಿಗಳನ್ನು ಸೇವಿಸುವುದರಿಂದ ಇಡೀ ದಿನ ಕುರುಕುಲು ತಿಂಡಿಗಳನ್ನು ತಿನ್ನುತ್ತಿರಬೇಕೆಂಬ ತುಡಿತ ಕಡಿಮೆಯಾಗುತ್ತದೆ ಮತ್ತು ಇದು ಆರೋಗ್ಯ ಮತ್ತು ದೇಹತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

►ಜನ್ಮಜಾತ ದೋಷಗಳನ್ನು ತಡೆಯುತ್ತವೆ

ಹುಟ್ಟಲಿರುವ ಮಗುವಿಗೆ ಜನ್ಮಜಾತ ದೋಷಗಳು ಕಾಡಬಹುದೇ ಎಂಬ ಆತಂಕ ಗರ್ಭಿಣಿಯರಲ್ಲಿ ಮನೆಮಾಡಿರುತ್ತದೆ. ಹೀಗಾಗಿ ಜನ್ಮಜಾತ ದೋಷಗಳ ಅಪಾಯವನ್ನು ತಗ್ಗಿಸಲು ಗರ್ಭಿಣಿಯರು ಪ್ರತಿದಿನ ತಮ್ಮ ಆಹಾರದಲ್ಲಿ ಪೈನ್‌ಬೆರಿಗಳನ್ನು ಸೇರಿಸಿಕೊಳ್ಳಬಹುದು. ಇವುಗಳಲ್ಲಿ ಸಮೃದ್ಧವಾಗಿರುವ ಫಾಲೇಟ್ ಗರ್ಭದಲ್ಲಿರುವ ಭ್ರೂಣವನ್ನು ರಕ್ಷಿಸುತ್ತದೆ ಮತ್ತು ಅದು ಯಾವುದೇ ತೊಂದರೆಯಿಲ್ಲದೆ ಬೆಳೆಯಲು ನೆರವಾಗುತ್ತದೆ.

►ಮೂಳೆ ಮತ್ತು ಹಲ್ಲುಗಳನ್ನು ಸದೃಢಗೊಳಿಸುತ್ತವೆ

ಹಲವಾರು ಜನರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ಬಳಿಕ ದುರ್ಬಲ ಹಲ್ಲುಗಳು ಮತ್ತು ಮೂಳೆಗಳ ಬಗ್ಗೆ ದೂರಿಕೊಳ್ಳುತ್ತಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್ ಎ ಮತ್ತು ಡಿ ಅಗತ್ಯವಾಗುತ್ತವೆ. ವಿಟಾಮಿನ್ ಎ ನಿರೋಧಕ ವ್ಯವಸ್ಥೆ,ಕಣ್ಣಿನ ದೃಷ್ಟಿ ಮತ್ತು ವ್ಯಕ್ತಿಯ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರತಿದಿನ ಪೈನ್‌ಬೆರಿಗಳನ್ನು ಸೇವಿಸುವುದರಿಂದ ಹಲ್ಲುಗಳ ಮತ್ತು ಮೂಳೆಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News