ಧೋನಿ, ಗಂಭೀರ್ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧೆ ?

Update: 2018-10-23 08:52 GMT

 ಹೊಸದಿಲ್ಲಿ, ಅ.23: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ದಿಲ್ಲಿಯ ಮಾಜಿ ಆರಂಭಿಕ ದಾಂಡಿಗ ಗೌತಮ್ ಗಂಭೀರ್ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ತಾರಾ ಪ್ರಚಾರಕರಾಗಲಿದ್ದಾರೆ. ಅಷ್ಟೇ ಅಲ್ಲ. ಧೋನಿ ಮತ್ತು ಗಂಭೀರ್ ತಮ್ಮ ತವರಿನಲ್ಲಿ ಬಿಜೆಪಿ ಟಿಕೆಟ್‌ನಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು  ತಿಳಿದು ಬಂದಿದೆ.

    ಗೌತಮ್ ಗಂಭೀರ್ ಅವರು ದಿಲ್ಲಿಯಿಂದ ಕಣಕ್ಕಿಳಿಯಲಿದ್ದಾರೆ. ದಿಲ್ಲಿಯ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಬಗ್ಗೆ ಅಲ್ಲಿನ ಜನತೆ ಅಸಮಾಧಾನ ಹೊಂದಿದ್ದಾರೆ. ಈ ಕಾರಣದಿಂದಾಗಿ ಗಂಭೀರ್ ಅವರನ್ನು ಆ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಯೋಚಿಸುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಗಂಭೀರ್ ಇನ್ನೂ ಬಿಜೆಪಿಗೆ ಸೇರಿಲ್ಲ. ಅವರನ್ನು ಬಿಜೆಪಿಗೆ ಸೇರಲು ಆಹ್ವಾನ ನೀಡಿ. ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ  ಎಂದು  ದಿ ಸಂಡೇ ಗಾರ್ಡಿಯನ್‌ ವರದಿ ಮಾಡಿದೆ

   ಗೌತಮ್ ಗಂಭೀರ್ 2016 ನವೆಂಬರ್‌ನಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಆಡಿದ್ದರು. ದಿಲ್ಲಿ ತಂಡದ ನಾಯಕರಾಗಿರುವ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಕೊನೆಗೊಂಡ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗಂಭೀರ್ ಅವರ ದಿಲ್ಲಿ ತಂಡ ಫೈನಲ್ ತಲುಪಿತ್ತು. ಅವರ ತಂಡ ಮುಂಬೈ ವಿರುದ್ಧ ಸೋತು ಎರಡನೇ ಸ್ಥಾನ ಪಡೆದಿತ್ತು. ಆದರೆ ಗಂಭೀರ್ ಇನ್ನೂ ಅಂತರ್ ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿಲ್ಲ.

 ಇದೇ ವೇಳೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಜೆಪಿ ನಾಯಕರು ತಮ್ಮ ತೆಕ್ಕೆಗೆ ಸೆಳೆಯಲು ಗಾಳ ಹಾಕಿದ್ದಾರೆ. ಧೋನಿ ಅವರನ್ನು ಝಾರ್ಖಂಡ್‌ನಿಂದ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ಇದೀಗ ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿ ಅವರು  ಟ್ವೆಂಟಿ-20 ಮತ್ತು 50 ಓವರ್‌ಗಳ ವಿಶ್ವಕಪ್‌ನಲ್ಲಿ  ಭಾರತಕ್ಕೆ ಚಾಂಪಿಯನ್ ಪಟ್ಟ ತಂದು ಕೊಟ್ಟ ತಂಡದ ನಾಯಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News