ಮಲದ ಗುಂಡಿಯ ಸಾವುಗಳಿಗೆ ಕೊನೆ ಎಂದು?

Update: 2018-10-24 18:36 GMT

ಭಾರತವನ್ನು ಜಗತ್ತಿನ ಗುರುವನ್ನಾಗಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರ ಅಧಿಕಾರಾವಧಿ ಮುಗಿಯುತ್ತ ಬಂದಿದೆ. ಇನ್ನು ಏಳೆಂಟು ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಹಿಂದಿನ ಎಪ್ಪತ್ತು ವರ್ಷಗಳ ಕಾಲಾವಧಿಯಲ್ಲಿ ಹಿಂದೆ ಆಳಿದವರು ಹಾಳು ಮಾಡಿದ ದೇಶವನ್ನು ಉದ್ಧಾರ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವರು ಹೇಳಿದ ‘ಅಚ್ಛೇ ದಿನ್’ಗಳ ಫಲಾನುಭವಿಗಳು ಯಾರೆಂದು ಎಲ್ಲರಿಗೂ ತಿಳಿದಿದೆ. ಇವರ ಕಾಲದಲ್ಲಿ ಬಡವರ ಬದುಕು ನೆಮ್ಮದಿ ಕಾಣಲಿಲ್ಲ. ಇವರ ‘ಡಿಜಿಟಲ್ ಇಂಡಿಯಾ’ದಲ್ಲಿ ಮಲದ ಗುಂಡಿಗೆ ಇಳಿದು ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಸೋಮವಾರ ರಾಜಧಾನಿ ದಿಲ್ಲಿಯಲ್ಲಿ ಮಲದ ಗುಂಡಿಗೆ ಇಳಿದ ಮತ್ತೊಬ್ಬ ಕಾರ್ಮಿಕ ಉಸಿರುಗಟ್ಟಿ ಸತ್ತಿದ್ದಾನೆ. ಇಂತಹ ಪ್ರತಿ ಸಾವು ಸಂಭವಿಸಿದಾಗಲೂ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಸರಕಾರ ಭರವಸೆ ಕೊಡುತ್ತದೆ. ಆ ಭರವಸೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಮೊದಲೇ ಇನ್ನೊಂದು ಸಾವು ಸಂಭವಿಸಿರುತ್ತದೆ. ಈ ಸಾವಿಗೆ ಕೊನೆ ಎಂಬುದೇ ಇಲ್ಲವಾಗಿದೆ. ಈ ದೇಶದಲ್ಲಿ ಪ್ರತಿ ಐದು ದಿನಕ್ಕೆ ಒಬ್ಬ ಕಾರ್ಮಿಕ ಮಲದ ಗುಂಡಿಗೆ ಇಳಿದು ಉಸಿರುಗಟ್ಟಿ ಸಾಯುತ್ತಿದ್ದಾನೆ. ಇಂತಹ ಸಾವುಗಳ ಬಗ್ಗೆ ನಮ್ಮ ಪ್ರಧಾನಿಯಿಂದ ಸ್ಪಂದನೆ ನಿರೀಕ್ಷಿಸುವಂತಿಲ್ಲ. ಈ ಕೆಲಸವನ್ನು ಅವರೇ ಒಮ್ಮೆ ಶ್ಲಾಘಿಸಿ ಬರೆದಿದ್ದರು. ಕಳೆದ 2017ರ ಜನವರಿಯಿಂದ ಈ ವರೆಗೆ ಒಟ್ಟು 123 ಜನರು ಮಲದ ಗುಂಡಿಗೆ ಇಳಿದು ಉಸಿರುಗಟ್ಟಿ ಸತ್ತು ಹೋಗಿದ್ದಾರೆ. ಇಂತಹ ಸಾವುಗಳು ಭಾರತದ ಘನತೆಗೆ ಬಿದ್ದ ಏಟು ಎಂದು ನಮ್ಮ ಸರಕಾರ ಭಾವಿಸುವುದಿಲ್ಲ, ಪ್ರತಿ ಸಾವು ಸಂಭವಿಸಿದಾಗ ಸೋಗಲಾಡಿ ಮಾತುಗಳನ್ನಾಡಿ ಮೀಡಿಯಾ ಕ್ಯಾಮರಾ ಮುಂದೆ ಕಣ್ಣೀರು ಸುರಿಸುವ ನಮ್ಮ ನಿರ್ಲಜ್ಜ ಮಂತ್ರಿಗಳು ಒಂದಿಷ್ಟು ಪರಿಹಾರ ಧನ ಘೋಷಿಸಿ ಕೈ ತೊಳೆದುಕೊಳ್ಳುತ್ತಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ. ಆದರೆ ಈ ವರೆಗೆ ಇಂತಹ ಯಾವ ಭರವಸೆಯೂ ಈಡೇರಿಲ್ಲ,, ಕರ್ನಾಟಕದಲ್ಲಿ 2008ರಿಂದ ಈ ವರೆಗೆ ಮಲದ ಗುಂಡಿಗೆ ಇಳಿದು 60 ಮಂದಿ ಅಸು ನೀಗಿದ್ದಾರೆ. ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲೇ 28 ಮಂದಿ ಮಲದ ಗುಂಡಿಗೆ ಇಳಿದು ಸತ್ತಿದ್ದಾರೆ. ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಈ ಸಾವುಗಳ ಬಗ್ಗೆ ನಮ್ಮ ಸರಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತದೆ. ಕಾರ್ಮಿಕರು ಸತ್ತಾಗ ಅವರ ಕುಟುಂಬಕ್ಕೆ ಒಂದಿಷ್ಟು ಹಣ ನೀಡಿದರೆ ಸರಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಹಣ ನೀಡಿ ಹೊಣೆಗಾರಿಕೆ ಹಾರಿಸಿಕೊಳ್ಳುವುದು ಸರಕಾರಕ್ಕೆ ಶೋಭೆ ತರುವುದಿಲ್ಲ.

ಒಳಚರಂಡಿಯನ್ನು ಮನುಷ್ಯರಿಂದ ಸ್ವಚ್ಛಗೊಳಿಸುವುದೇ ಘೋರ ಅಪರಾಧವಾಗಿದೆ, ಈ ಬಗ್ಗೆ ಸರಕಾರಕ್ಕೆ ಉಗಿದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ತೀರ್ಪು ನೀಡಿವೆ. ಆದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸುವ ಕೆಲಸ ಅವ್ಯಾಹತವಾಗಿ ನಡೆದಿದೆ. ಮ್ಯಾನ್‌ಹೋಲ್ಗಳನ್ನು ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು, ಹಾಗೂ ಒಳಚರಂಡಿ ಕಾರ್ಮಿಕರಿಗೆ ಮುಖಗವಸು, ಗಮ್ ಬೂಟು ಒದಗಿಸಬೇಕು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕಾರ್ಮಿಕರನ್ನು ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಮಲದ ಗುಂಡಿಗೆ ಇಳಿಸಬೇಕು ಹಾಗೂ ಒಳಗೆ ಇಳಿದಾಗ ಅವರಿಗೆ ಆಮ್ಲಜನಕ ಪೂರೈಸಬೇಕೆಂಬ ನಿಯಮವಿದ್ದರೂ ಈ ಯಾವ ನಿಯಮಗಳೂ ಪಾಲನೆಯಾಗುವುದಿಲ್ಲ. ಮ್ಯಾನ್‌ಹೋಲ್ಗಳಲ್ಲಿ ಮೀಥೆನ್ ಹಾಗೂ ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳಿರುತ್ತವೆ.

ಹೀಗಾಗಿ ಮ್ಯಾನ್‌ಹೋಲ್ಗೆ ಇಳಿಯುವ ಕನಿಷ್ಠ ಒಂದು ತಾಸು ಮೊದಲು ಅದರ ಮುಚ್ಚಳ ತೆಗೆಯಬೇಕು. ಮೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಒಳಗೆ ಇಳಿಯಬೇಕೆಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ. ನಮ್ಮ ದೇಶದ ಗಡಿಗಳನ್ನು ರಕ್ಷಿಸುವ ಯೋಧರಂತೆ ನಮ್ಮ ನಮ್ಮ ನಗರಗಳ ಆರೋಗ್ಯ ಮತ್ತು ಸೌಂದರ್ಯ ಕಾಪಾಡುವ ಪೌರ ಕಾರ್ಮಿಕರು ನಮಗಾಗಿ ಮಲದ ಗುಂಡಿಗೆ ಇಳಿದು ಸಾವಿಗೀಡಾಗುತ್ತಾರೆ. ಇವರನ್ನು ಕೂಡ ರಾಷ್ಟ್ರಕ್ಕಾಗಿ ಮಡಿದ ಹುತಾತ್ಮರೆಂದು ಘೋಷಿಸಿ ಸೈನಿಕರಿಗೆ ನೀಡುವ ಪರಿಹಾರವನ್ನು ನೀಡಬೇಕು. ಮಲದ ಗುಂಡಿಗೆ ಇಳಿದು ಸತ್ತವರಿಗೆ ಕಾಟಾಚಾರದ ಪರಿಹಾರ ನೀಡಿದರೆ ಸಾಲದು. ಇವರನ್ನು ಒಳಗೆ ಇಳಿಸಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಜೆಗಳ ಜೀವದ ಜೊತೆ ಸರಕಾರ ಆಟ ಆಡಬಾರದು. ಈವರೆಗೆ ಮಲದ ಗುಂಡಿಗೆ ಬಿದ್ದು ಸತ್ತ ಪ್ರಕರಣಗಳಲ್ಲಿ ಯಾರೋ ಒಬ್ಬಿಬ್ಬರ ಮೇಲೆ ಪ್ರಕರಣ ದಾಖಲಿಸಿದ ನಾಟಕ ಮಾಡಿ ಆನಂತರ ಕೈ ಬಿಟ್ಟ ಉದಾಹರಣೆಗಳಿವೆ, ಆದರೆ ಇದಕ್ಕೆ ಕಾರಣರಾದ ಅಧಿಕಾರಿಗಳು, ಕಂಟ್ರಾಕ್ಟರುಗಳು ಏನೂ ಆಗಿಲ್ಲವೆಂಬಂತೆ ರಾಜಾರೋಷವಾಗಿ ಓಡಾಡುತ್ತಾರೆ. ಆದರೆ ಹೀಗಾಗಬಾರದು. ಮನುಷ್ಯರು ಮಲದ ಗುಂಡಿಗೆ ಇಳಿದು ಉಸಿರುಗಟ್ಟಿ ಸಾಯುವುದು ಯಾವುದೇ ಒಂದು ದೇಶಕ್ಕೆ ಶೋಭೆ ತರುವುದಿಲ್ಲ.

ದೇವರು ಧರ್ಮದ ಹೆಸರಿನಲ್ಲಿ ದೇಶವನ್ನೇ ನರಕ ಮಾಡುತ್ತ ಹೊರಟವರಿಗೂ ತಮ್ಮ ಸಹ ಬಾಂಧವರ ಈ ಸಾವುಗಳು ಆತ್ಮಸಾಕ್ಷಿಗೆ ಚುಚ್ಚುವುದಿಲ್ಲ. ಮಲದ ಗುಂಡಿಯ ಈ ಸಾವುಗಳಿಗೆ ಪರಿಹಾರ ನೀಡುವ ಬದಲು ಮಲದ ಗುಂಡಿಗೆ ಕಾರ್ಮಿಕರನ್ನು ಇಳಿಸುವುದನ್ನು ಸರಕಾರ ನಿರ್ಬಂಧಿಸಲಿ. ಇಲ್ಲವೇ ಚುನಾಯಿತ ಪ್ರತಿನಿಧಿಗಳೇ ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸಲಿ. ಮಲದ ಗುಂಡಿಗೆ ಇಳಿಯುವ ಸಫಾಯಿ ಕಾರ್ಮಿಕರೆಲ್ಲ, ಶ್ರೇಣೀಕೃತ ಜಾತಿವ್ಯವಸ್ಥೆಯ ತಳ ಸಮುದಾಯಕ್ಕೆ ಸೇರಿದವರು. ಇವರು ಮಾಡುವ ಕೆಲಸ ‘‘ಆಧ್ಯಾತ್ಮಿಕ ಅನುಭೂತಿ’’ ಎಂದು ಪ್ರಧಾನಿ ನರೇಂದ್ರಮೋದಿ ಅವರು 2008ರಲ್ಲಿ ಬರೆದ ‘ಕರ್ಮಯೋಗಿ’ ಪುಸ್ತಕದಲ್ಲಿ ಹೇಳಿದ್ದರು, ಈ ಆಧ್ಯಾತ್ಮಿಕ ಅನುಭೂತಿಯನ್ನು ತಳಸಮುದಾಯದವರು ಮಾತ್ರ ಪಡೆಯುವುದು ಸಾಮಾಜಿಕ ನ್ಯಾಯವೆನಿಸುವುದಿಲ್ಲ, ಮೇಲ್ವರ್ಗ, ಮೇಲ್ಜಾತಿಯ ಜನರೂ ಮಲದ ಗುಂಡಿಗೆ ಇಳಿದು ಆಧ್ಯಾತ್ಮಿಕ ಅನುಭೂತಿ ಪಡೆಯಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News