ಗಾಳಿಯಿಂದ ನೀರನ್ನು ತಯಾರಿಸಿ 11 ಕೋಟಿ ರೂ. ಗೆದ್ದ ದಂಪತಿ!
ವಾಶಿಂಗ್ಟನ್, ಅ. 25: ಗಾಳಿಯಿಂದ ನೀರನ್ನು ತಯಾರಿಸುತ್ತಿರುವ ದಂಪತಿಯೊಂದು 1.5 ಮಿಲಿಯ ಡಾಲರ್ (ಸುಮಾರು 11 ಕೋಟಿ ರೂಪಾಯಿ) ನಗದು ಪುರಸ್ಕಾರವನ್ನೊಳಗೊಂಡ ಪ್ರತಿಷ್ಠಿತ ‘ಎಕ್ಸ್‌ಪ್ರೈಝ್’ ಪ್ರಶಸ್ತಿಯನ್ನು ಗೆದ್ದಿದೆ.
ಆರಂಭದಲ್ಲಿ ಡೀವಿಡ್ ಹರ್ಟ್ಝ್ ತನ್ನ ಕಚೇರಿಯ ಮೇಲ್ಛಾವಣಿಯ ಮೇಲೆ ಸಣ್ಣ ಉಪಕರಣವೊಂದನ್ನು ಇಟ್ಟು ಅಲ್ಪ ಪ್ರಮಾಣದಲ್ಲಿ ನೀರನ್ನು ತಯಾರಿಸಲು ಆರಂಭಿಸಿದರು.
ಬಳಿಕ ಅವರು ತನ್ನ ಪತ್ನಿ ಲಾರಾ ಡಾಸ್-ಹರ್ಟ್ಝ್ ಜೊತೆ ಸೇರಿ ಈ ಉದ್ಯಮವನ್ನು ವಿಸ್ತರಿಸಿದರು.
ಶಿಪ್ಪಿಂಗ್ ಕಂಟೇನರ್‌ಗಳು, ಮರದ ಚೆಕ್ಕೆಗಳು ಮತ್ತು ಕಲ್ಲು ತುಂಡುಗಳನ್ನು ಒಳಗೊಂಡ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದ ದಂಪತಿ ದಿನಕ್ಕೆ 2000 ಲೀಟರ್ ನೀರನ್ನು ಉತ್ಪಾದಿಸಿದರು. ಹೀಗೆ ತಯಾರಾದ ನೀರಿಗೆ ತಗಲುವ ಖರ್ಚು ಲೀಟರ್‌ಗೆ 2 ಸೆಂಟ್ (ಸುಮಾರು 1.50 ರೂಪಾಯಿ).
ದಾನಿಗಳು, ಉದ್ಯಮಿಗಳು ಹಾಗೂ ಇತರರನ್ನೊಳಗೊಂಡ ಗುಂಪೊಂದು ‘ಎಕ್ಸ್‌ಪ್ರೈಝ್’ ಪ್ರಶಸ್ತಿಯನ್ನು ಸ್ಥಾಪಿಸಿದೆ.
ಗ್ರಹವನ್ನು ರಕ್ಷಿಸುವ ಹಾಗೂ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ ಕ್ರಾಂತಿಕಾರಕ ಭವಿಷ್ಯದ ಕಲ್ಪನೆಗಳಿಗೆ ಅದು ಈವರೆಗೆ 14 ಕೋಟಿ ಡಾಲರ್‌ಗೂ ಅಧಿಕ ಮೊತ್ತದ ಪ್ರಶಸ್ತಿಗಳನ್ನು ನೀಡಿದೆ.