ಪಠ್ಯದಿಂದ ಕಾಂಚಾ ಐಲಯ್ಯರ 3 ಪುಸ್ತಕ ಹಿಂದೆಗೆಯಲು ದಿಲ್ಲಿ ವಿವಿ ಸಮಿತಿ ಸಲಹೆ
ಹೊಸದಿಲ್ಲಿ, ಅ. 25: ವಿವಾದಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ದಲಿತ ಲೇಖಕ ಹಾಗೂ ಹೋರಾಟಗಾರ ಕಾಂಚಾ ಐಲಯ್ಯ ಅವರ ಮೂರು ಪುಸ್ತಕಗಳನ್ನು ರಾಜಕೀಯ ಶಾಸ್ತ್ರದ ಪಠ್ಯಕ್ರಮದಿಂದ ಹೊರಗಿಡಲು ಶೈಕ್ಷಣಿಕ ವಿಷಯಗಳಿಗೆ ಇರುವ ದಿಲ್ಲಿ ವಿಶ್ವವಿದ್ಯಾನಿಲಯದ ಸ್ಥಾಯಿ ಸಮಿತಿ ಬುಧವಾರ ನಿರ್ಧರಿಸಿದೆ.
ಶೈಕ್ಷಣಿಕ ಸಂಕಥನದ ಸಂದರ್ಭದಲ್ಲಿ ದಲಿತ ಪದವನ್ನು ಮುಂದುವರಿಸದೇ ಇರುವಂತೆ ಕೂಡ ಸಮಿತಿ ಸಲಹೆ ನೀಡಿದೆ. ಈ ನಿರ್ಧಾರಗಳಿಗೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಇನ್ನಷ್ಟೆ ಅನುಮೋದನೆ ನೀಡಬೇಕಿದೆ. ಹಿಂದುತ್ವವಾದಕ್ಕೆ ಅವಮಾನ ಎಸಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕೋರ್ಸ್‌ನಿಂದ ‘ವೈ ಐಯಾಮ್ ನಾಟ್ ಹಿಂದೂ’, ‘ಬಫೆಲ್ಲೊ ನ್ಯಾಶನಲಿಸಂ’ ಹಾಗೂ ‘ಪೋಸ್ಟ್ ಹಿಂದೂ ಇಂಡಿಯಾ’ ಪುಸ್ತಕಗಳನ್ನು ತೆಗೆಯಲಾಗಿದೆ ಎಂದು ಸಮಿತಿ ಸದಸ್ಯ ಪ್ರೊ. ಹನ್ಸ್‌ರಾಜ್ ಸುಮನ್ ಹೇಳಿದ್ದಾರೆ. ಲೇಖಕರು ಶೈಕ್ಷಣಿಕ ಕೊಡುಗೆಗಿಂತ ವಿವಾದಕ್ಕೆ ಹೆಚ್ಚು ಪ್ರಸಿದ್ದರು ಎಂದು ಸಮಿತಿಯ ಇನ್ನೋರ್ವ ಸದಸ್ಯೆ ಗೀತಾ ಭಟ್ ಹೇಳಿದ್ದಾರೆ.
‘‘ಈ ಪುಸ್ತಕಗಳು ಯಾವುದೇ ಶೈಕ್ಷಣಿಕ ಮೌಲ್ಯಗಳನ್ನು ಹೊಂದಿಲ್ಲ್ಲ. ಆದಾಗ್ಯೂ, ಇದನ್ನು ಓದಬಾರದು ಎಂದು ನಾವು ಯಾರನ್ನೂ ನಿರ್ಬಂಧಿಸುವುದಿಲ್ಲ. ಈ ಪುಸ್ತಕಗಳು ಮಾರುಕಟ್ಟೆ ಹಾಗೂ ಆನ್‌ಲೈನ್‌ನಲ್ಲಿ ಸುಲಭವಾಗಿ ದೊರೆಯುತ್ತದೆ’’ ಎಂದು ಅವರು ಹೇಳಿದ್ದಾರೆ. ಶೈಕ್ಷಣಿಕ ಸಂಕಥನದಲ್ಲಿ ಬಹುತ್ವದ ಚಿಂತನೆಗಳನ್ನು ಬಲಪಂಥೀಯರು ಬಯಸುವುದಿಲ್ಲ. ಈ ಪುಸ್ತಕಗಳು ಕೇಂಬ್ರಿಜ್‌ನಂತಹ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಭಾರತದಾದ್ಯಂತದ ಹಲವು ವಿಶ್ವವಿದ್ಯಾನಿಲಯಗಳ ಪಠ್ಯ ಕ್ರಮಗಳ ಒಂದು ಭಾಗವಾಗಿದೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಈ ಪುಸ್ತಕಗಳನ್ನು ಪರಾಮರ್ಶನ ಗ್ರಂಥ ಹಾಗೂ ಕೋರ್ಸ್ ಮೆಟೀರಿಯಲ್ ಆಗಿ ಬಳಸಲಾಗುತ್ತಿತ್ತು. ಇದು ದುರಾದೃಷ್ಟಕರ ನಡೆ. ಬಿಜೆಪಿ ಸರಕಾರದ ಅಡಿಯಲ್ಲಿ ಶೈಕ್ಷಣಿಕ ಸ್ವಾಯತ್ತೆ ನಾಶವಾಗುತ್ತಿದೆ ಎಂದು ಕಾಂಚಾ ಐಲಯ್ಯ ಪ್ರತಿಕ್ರಿಯಿಸಿದ್ದಾರೆ.