ಲೈಂಗಿಕ ಶೋಷಣೆಗಳ ವಿವರಗಳು ಅತ್ಯಂತ ಭಯಾನಕ ಎಂದ ಸುಪ್ರೀಂ ಕೋರ್ಟ್

Update: 2018-10-25 17:17 GMT

ಹೊಸದಿಲ್ಲಿ,ಅ.25: ಹಲವು ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ನಡೆಸಲಾಗಿದೆ ಎಂದು ಆರೋಪಿಸಲಾಗಿರುವ ಬಿಹಾರದ ಮುಝಫ್ಫರ್‌ಪುರ ಆಶ್ರಯಧಾಮದಿಂದ ಕಲೆ ಹಾಕಿರುವ ವಿವರಗಳನ್ನು ಗುರುವಾರ ಸಿಬಿಐ ಸರ್ವೋಚ್ಚ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಈ ವಿವರಗಳು ಅತ್ಯಂತ ಭಯಾನಕವಾಗಿವೆ ಎಂದು ಶ್ರೇಷ್ಟ ನ್ಯಾಯಾಲಯ ತಿಳಿಸಿದೆ.

ಸಿಬಿಐ ಒಪ್ಪಿಸಿರುವ ವಿವರಗಳಲ್ಲಿ ಮಕ್ಕಳಿಗೆ ಅಮಲು ಪದಾರ್ಥ ನೀಡಿರುವ ಹಾಗೂ ಇತರ ಭಯಬೀಳಿಸುವ, ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದೆ ಎಂದು ನ್ಯಾಯಾಲಯ ತಿಳಿಸಿದೆ. ಮಕ್ಕಳಿಗೆ ಅಮಲು ಬರಿಸುವುದೆಂದರೆ ಏನು?, ಇಲ್ಲಿ ಏನು ನಡೆಯುತ್ತಿದೆ?, ಇದು ಅತ್ಯಂತ ಭಯಾನಕ ಎಂದು ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ, ಪ್ರಕರಣದ ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ವಿರುದ್ಧ ಸಿಬಿಐ ಮಾಡಿರುವ ಆರೋಪ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ ಎಂದು ತಿಳಿಸಿದೆ.

ಮಾಜಿ ರಾಜ್ಯ ಸಚಿವೆ ಮಂಜಿ ವರ್ಮಾರ ಪತಿ ಚಂದ್ರಶೇಖರ ವರ್ಮಾರನ್ನು ಪತ್ತೆಹಚ್ಚುವಲ್ಲಿ ಆಗುತ್ತಿರುವ ವಿಳಂಬವನ್ನು ವಿವರಿಸಲು ಸ್ಥಿತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಧೀಶ ಮದನ್ ಬಿ.ಲೋಕುರ್ ನೇತೃತ್ವದ ಪೀಠ ಸಿಬಿಐ ಮತ್ತು ಬಿಹಾರ ಸರಕಾರಕ್ಕೆ ಸೂಚಿಸಿದೆ. ಮಾಜಿ ಸಚಿವೆ ಮತ್ತು ಆಕೆಯ ಪತಿಯಿಂದ ವಶಪಡಿಸಿಕೊಳ್ಳಲಾದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳ ಬಗ್ಗೆ ತನಿಖೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ಬಿಹಾರ ಪೊಲೀಸರಿಗೆ ಕಳೆದ ತಿಂಗಳು ಆದೇಶಿಸಿತ್ತು. ಪ್ರಕರಣದ ಒಂಬತ್ತು ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಆದರೆ ಎಲ್ಲರೂ ಬ್ರಿಜೇಶ್ ಠಾಕೂರ್ ಈ ಕೆಲಸ ಮಾಡಲು ನಮಗೆ ತಿಳಿಸಿದ್ದ ಎಂದೇ ಹೇಳಿಕೆ ನೀಡಿದ್ದಾರೆ ಎಂದು ಸಿಬಿಐ ತಿಳಿಸಿದೆ. ನಾಲ್ಕು ಮಹಡಿಗಳ ಕಟ್ಟಡದಲ್ಲಿ ನಡೆಸಲಾಗುತ್ತಿದ್ದ, ಯಾವುದೇ ಕಿಟಕಿಗಳಿರದ 50 ಅಡಿ ಎತ್ತರದ ಆವರಣ ಗೋಡೆಯನ್ನು ಹೊಂದಿದ್ದ ಆಶ್ರಯಧಾಮವು ಜೈಲಿಗಿಂತ ಕಡೆಯಾಗಿತ್ತು ಎಂದು ಸಿಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News