ಸಯೀದ್‌ನ ಜೆಯುಡಿ ಈಗ ನಿಷೇಧಿತ ಸಂಘಟನೆಯಲ್ಲ

Update: 2018-10-26 16:06 GMT

ಇಸ್ಲಾಮಾಬಾದ್, ಅ. 26: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಝ್ ಸಯೀದ್‌ಗೆ ಸೇರಿದ ಜಮಾಅತುದಅವಾ (ಜೆಯುಡಿ) ಮತ್ತು ಫಲಾಹಿ ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್)ಗಳು ಈಗ ಪಾಕಿಸ್ತಾನದ ನಿಷೇಧಿತ ಸಂಘಟನೆಗಳ ಪಟ್ಟಿಯಲ್ಲಿಲ್ಲ. ವಿಶ್ವಸಂಸ್ಥೆಯ ನಿರ್ಣಯದ ಹಿನ್ನೆಲೆಯಲ್ಲಿ, ಈ ಸಂಘಟನೆಗಳನ್ನು ನಿಷೇಧಿಸುವ ಅಧ್ಯಕ್ಷೀಯ ಅಧ್ಯಾದೇಶದ ಅವಧಿ ಮುಕ್ತಾಯಗೊಂಡಿದೆ ಎಂದು ಶುಕ್ರವಾರ ಮಾಧ್ಯಮ ವರದಿಯೊಂದು ತಿಳಿಸಿದೆ.

ಈ ವರ್ಷದ ಫೆಬ್ರವರಿಯಲ್ಲಿ ಅಂದಿನ ಅಧ್ಯಕ್ಷ ಮಮ್ನೂನ್ ಹುಸೈನ್ ಈ ಅಧ್ಯಾದೇಶವನ್ನು ಹೊರಡಿಸಿದ್ದರು. 1997ರ ಭಯೋತ್ಪಾದನೆ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದ ಅಧ್ಯಾದೇಶವು ಜೆಯುಡಿ ಮತ್ತು ಎಫ್‌ಐಎಫ್‌ಗಳನ್ನು ನಿಷೇಧಿತ ಗುಂಪುಗಳೆಂದು ಘೋಷಿಸಿತ್ತು.

ಗುರುವಾರ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ನಡೆದ ಸಯೀದ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ, ಅಧ್ಯಾದೇಶದ ವಾಯಿದೆ ಮುಗಿದಿದೆ ಹಾಗೂ ಅದನ್ನು ವಿಸ್ತರಿಸಲಾಗಿಲ್ಲ ಎಂಬುದಾಗಿ ಅವನ ವಕೀಲ ನ್ಯಾಯಾಲಯಕ್ಕೆ ತಿಳಿಸಿದರು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಅಧ್ಯಕ್ಷರು ಹೊರಡಿಸಿದ ಅಧ್ಯಾದೇಶವನ್ನು ಹಫೀಝ್ ಸಯೀದ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದನು.

‘‘ನಾನು ಜೆಯುಡಿಯನ್ನು 2002ರಲ್ಲಿ ಸ್ಥಾಪಿಸಿದೆ ಹಾಗೂ ನಿಷೇಧಿತ ಲಷ್ಕರೆ ತಯ್ಯಿಬ ಜೊತೆಗಿನ ಎಲ್ಲ ಸಂಪರ್ಕಗಳನ್ನು ಕಡಿದುಕೊಂಡೆ. ಆದರೆ, ಲಷ್ಕರೆ ತಯ್ಯಿಬ ಜೊತೆ ಜೆಯುಡಿ ಹಿಂದೆ ಹೊಂದಿದ್ದ ಸಂಪರ್ಕವನ್ನು ಮುಂದಿಟ್ಟುಕೊಂಡು ಜೆಯುಡಿ ಮೇಲೆ ಕಳಂಕ ಹೊರಿಸುವುದನ್ನು ಭಾರತ ಮುಂದುವರಿಸಿದೆ’’ ಎಂಬುದಾಗಿ ಸಯೀದ್ ತನ್ನ ಅರ್ಜಿಯಲ್ಲಿ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News