ಕಲ್ಲೆಸೆಯುವವರೂ ಭಯೋತ್ಪಾದಕರು: ಬಿಪಿನ್ ರಾವತ್

Update: 2018-10-27 16:40 GMT

ಹೊಸದಿಲ್ಲಿ, ಅ.27: ಭದ್ರತಾ ಪಡೆಗಳತ್ತ ಕಲ್ಲೆಸೆಯುವವರನ್ನು ಭಯೋತ್ಪಾದಕರ ಕಾರ್ಯಕರ್ತರು ಎಂದು ಪರಿಗಣಿಸಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಕಲ್ಲೆಸೆಯುವವರನ್ನು ಭಯೋತ್ಪಾದಕರು ಎಂದು ಪರಿಗಣಿಸಬಾರದೇಕೆ ಎಂದು ಸೇನಾಪಡೆಯ ಮುಖ್ಯಸ್ಥ ಜ ಬಿಪಿನ್ ರಾವತ್ ಪ್ರಶ್ನಿಸಿದ್ದಾರೆ.

 ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಕಲ್ಲೆಸೆತದಿಂದ ಗಾಯಗೊಂಡು ಯೋಧ ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿದ ಅವರು, ಯೋಧರ ಮೇಲೆ ಕಲ್ಲೆಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. 72ನೇ ಪದಾತಿ ಪಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮೃತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ಕಲ್ಲೆಸೆಯುವವರಿಗೆ ಪಾಕಿಸ್ತಾನದ ಬೆಂಬಲವಿದೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಜೀವಂತವಾಗಿರಬೇಕು ಮತ್ತು ಆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳಬೇಕೆಂದು ಪಾಕ್ ಬಯಸುತ್ತಿದೆ. ಆದರೆ ಭಾರತವು ಯಾವುದೇ ಬೆದರಿಕೆಯನ್ನು ಎದುರಿಸಲು ಶಕ್ತವಾಗಿದೆ ಮತ್ತು ವಿವಿಧ ರೀತಿಯ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಭಾರತದ ಸೇನಾಪಡೆಗಿದೆ ಎಂದವರು ಹೇಳಿದರು. ಜಮ್ಮು-ಕಾಶ್ಮೀರದಲ್ಲಿ ಛಾಯಾ ಸಮರದಲ್ಲಿ ನಿರತವಾಗಿರುವ ಪಾಕಿಸ್ತಾನ ಒಳನುಸುಳುವಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಪಾಕ್ ಸೇನೆಯ ಸಹಕಾರದಿಂದ ಉಗ್ರರ ಶಿಬಿರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಜ ರಾವತ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News