ಸಿಂಧು, ಸೈನಾ, ಶ್ರೀಕಾಂತ್ ಸವಾಲು ಅಂತ್ಯ

Update: 2018-10-27 18:24 GMT

ಪ್ಯಾರಿಸ್, ಅ.27: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ಸವಾಲು ಅಂತ್ಯವಾಗಿದೆ. ಸ್ಪರ್ಧಾ ಕಣದಲ್ಲಿದ್ದ ಎಲ್ಲ ಮೂವರು ಶಟ್ಲರ್‌ಗಳು ಸಿಂಗಲ್ಸ್ ವಿಭಾಗದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

 ಶುಕ್ರವಾರ ಭಾರತದ ಪಾಲಿಗೆ ಕಹಿ ದಿನವಾಗಿತ್ತು. ಸೈನಾ ನೆಹ್ವಾಲ್, ಕೆ.ಶ್ರೀಕಾಂತ್ ಹಾಗೂ ಪಿ.ವಿ.ಸಿಂಧು ನೇರ ಗೇಮ್‌ಗಳಿಂದ ಸೋತಿದ್ದಾರೆ. ಸೈನಾ ಹಾಗೂ ಶ್ರೀಕಾಂತ್ ವಿಶ್ವದ ನಂ.1 ಎದುರಾಳಿಗೆ ಶರಣಾದರು.

ಹಾಲಿ ಚಾಂಪಿಯನ್ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 16-21, 19-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಶ್ರೀಕಾಂತ್ ಈ ವರ್ಷ ವಿಶ್ವದ ನಂ.1 ಆಟಗಾರ ಮೊಮೊಟಾ ವಿರುದ್ಧ ಸತತ ಐದನೇ ಪಂದ್ಯವನ್ನು ಸೋತಿದ್ದಾರೆ. ಕಳೆದ ವಾರ ಡೆನ್ಮಾರ್ಕ್ ಓಪನ್‌ನ ಸೆಮಿ ಫೈನಲ್‌ನಲ್ಲಿ ಶ್ರೀಕಾಂತ್ ಅವರು ಮೊಮೊಟಾಗೆ ಕೊನೆಯ ಬಾರಿ ಸೋತಿದ್ದರು.

ಜಕಾರ್ತ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಬಳಿಕ ಗೆಲುವಿಗಾಗಿ ಪರದಾಟ ನಡೆಸುತ್ತಿರುವ ಪಿ.ವಿ.ಸಿಂಧು ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ ಅಂತಿಮ-8ರ ಪಂದ್ಯದಲ್ಲಿ 13-21, 16-21 ಅಂತರದಿಂದ ಸೋತಿದ್ದಾರೆ.

 ಸಿಂಧು ಚೀನಾ ಆಟಗಾರ್ತಿ ವಿರುದ್ಧ ಈ ವರ್ಷ ಸತತ ಎರಡನೇ ಸೋಲು ಕಂಡಿದ್ದಾರೆ. ಜುಲೈನಲ್ಲಿ ಇಂಡೋನೇಶ್ಯಾ ಓಪನ್‌ನಲ್ಲಿ ನೇರ ಗೇಮ್‌ಗಳಿಂದ ಸೋತಿದ್ದರು. ಈ ಗೆಲುವಿನೊಂದಿಗೆ ಬಿಂಗ್‌ಜಿಯಾವೊ ಭಾರತ ಆಟಗಾರ್ತಿ ವಿರುದ್ಧ ಹೆಡ್-ಟು-ಹೆಡ್ ದಾಖಲೆಯನ್ನು 7-5 ಕ್ಕೆ ವಿಸ್ತರಿಸಿದರು. ವಿಶ್ವದ ನಂ.2ನೇ ಆಟಗಾರ್ತಿ ಸಿಂಧು ಕಳೆದ ವಾರ ಡೆನ್ಮಾರ್ಕ್ಓಪನ್ಲ್ಲಿಮೊದಲ ಸುತ್ತಿ

ಲ್ಲಿ ಸೋತು ಹೊರ ನಡೆದಿದ್ದರು.

 ಜಪಾನ್ ಓಪನ್‌ನ ಎರಡನೇ ಸುತ್ತಿನಲ್ಲಿ ಫಾಂಗ್‌ಜೀ ವಿರುದ್ಧ ನೇರ ಗೇಮ್‌ಗಳಿಂದ ಸೋತಿದ್ದರು. ಮಹಿಳೆಯರ ಸಿಂಗಲ್ಸ್‌ನ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ನೆಹ್ವಾಲ್ ಅವರು ತೈ ಝು ಯಿಂಗ್ ವಿರುದ್ಧ 20-22, 11-21 ಅಂತರದಿಂದ ಸೋತಿದ್ದಾರೆ. ಸೈನಾ ಮೊದಲ ಗೇಮ್‌ನಲ್ಲಿ ಒಂದಷ್ಟು ಹೋರಾಟ ನೀಡಿದರೆ, ಎರಡನೇ ಗೇಮ್‌ನಲ್ಲಿ ಸರಿಸಾಟಿಯಾಗಲೇ ಇಲ್ಲ.

 ಸೈನಾ ಚೈನೀಸ್ ತೈಪೆ ಆಟಗಾರ್ತಿ ವಿರುದ್ಧ ಸತತ 12ನೇ ಸೋಲು ಅನುಭವಿಸಿದರು. ಈ ವರ್ಷದಲ್ಲಿ ಸೈನಾ ಅನುಭವಿಸಿರುವ 15 ಸೋಲುಗಳ ಪೈಕಿ ಯಿಂಗ್ ವಿರುದ್ಧ ಆರು ಪಂದ್ಯಗಳಲ್ಲಿ ಸೋತಿದ್ದಾರೆ.

►ಸಾತ್ವಿಕ್‌ಸಾಯಿರಾಜ್-ಚಿರಾಗ್ ಸೆಮಿಫೈನಲ್‌ಗೆ : ಇದೇ ವೇಳೆ, ಯುವ ಶಟ್ಲರ್‌ಗಳಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪುವುದರೊಂದಿಗೆ ಟೂರ್ನಿಯಲ್ಲಿ ಭಾರತದ ಸ್ಪರ್ಧೆಯನ್ನು ಚಾಲ್ತಿಯಲ್ಲಿರಿಸಿದ್ದಾರೆ.

ಭಾರತದ ಆಟಗಾರರ ಹಣಾಹಣಿಗೆ ಸಾಕ್ಷಿಯಾದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಅವರನ್ನು ಎದುರಿಸಿದ ಸಾತ್ವಿಕ್‌ಸಾಯಿರಾಜ್-ಚಿರಾಗ್ 21-17,21-11 ಅಂತರದಿಂದ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News