ಶಬರಿಮಲೆ ವಿವಾದ : ತಂತ್ರಿ ಕುಟುಂಬದ ರಾಹುಲ್ ಈಶ್ವರ್ ಸೇರಿದಂತೆ 3,000 ಮಂದಿ ಸೆರೆ

Update: 2018-10-28 13:39 GMT

ತಿರುವನಂತಪುರಂ, ಅ.28: ಕೊಚ್ಚಿಯಲ್ಲಿ ಕಳೆದ ವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಬರಿಮಲೆ ಪ್ರಕರಣದ ಬಗ್ಗೆ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಬರಿಮಲೆ ತಂತ್ರಿ ಕುಟುಂಬದ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್‌ರನ್ನು ರವಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಇದರೊಂದಿಗೆ , ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 26ರ ಬಳಿಕ ಬಂಧನಕ್ಕೆ ಒಳಗಾದವರ ಸಂಖ್ಯೆ 3,346ಕ್ಕೇರಿದೆ. ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50ರ ವಯೋಮಾನದ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸಿದ್ದ 3,345 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು 517 ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ 122 ಮಂದಿ ಸೆರೆಯಲ್ಲಿದ್ದರೆ ಉಳಿದವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಭಜನೆ, ಸ್ತೋತ್ರ ಪಠಿಸುತ್ತಿದ್ದವರನ್ನು ಬಂಧಿಸದಂತೆ ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಆದೇಶಿಸಿದ್ದರು. ಸುಪ್ರೀಂಕೋರ್ಟ್‌ನ ಆದೇಶ ಜಾರಿಗೆ ತಡೆಯೊಡ್ಡಿ ಪ್ರತಿಭಟಿಸುತ್ತಿದ್ದವರನ್ನು ಮಾತ್ರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧನ ಕ್ರಮವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸಿಪಿಐ(ಎಂ) ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ , ಕಾನೂನನ್ನು ಉಲ್ಲಂಘಿಸಿದವರನ್ನು ಬಂಧಿಸುವುದು ಸಹಜ ಪ್ರಕ್ರಿಯೆಯಾಗಿದೆ. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಾವಧಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ 4 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News