ಉಸಿರಿನ ದುರ್ವಾಸನೆ ನಮ್ಮ ಅನಾರೋಗ್ಯವನ್ನು ಹೇಳುತ್ತದೆ,ಗೊತ್ತೇ?

Update: 2018-10-28 11:39 GMT

ದುರ್ವಾಸನೆಯಿಂದ ಕೂಡಿದ ಉಸಿರು ಸಾಮಾನ್ಯ ಸಮಸ್ಯೆಯಾಗಿದ್ದು,ಶೇ.50ಕ್ಕೂ ಅಧಿಕ ಜನರನ್ನು ಈ ಸಮಸ್ಯೆ ಕಾಡುತ್ತಿರುತ್ತದೆ.

ಹೆಚ್ಚಿನ ಜನರು ಒಂದಲ್ಲ ಒಂದು ಸಮಯದಲ್ಲಿ ಕೆಟ್ಟ ಉಸಿರಿನ ಸಮಸ್ಯೆಯನ್ನು ಎದುರಿಸಿರುತ್ತಾರೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾವು ಮುಜುಗರ ಪಟ್ಟುಕೊಳ್ಳುತ್ತೇವೆ ಮತ್ತು ವೈದ್ಯಕೀಯ ನೆರವು ಪಡೆಯಲು ಮುಂದಾಗುವುದಿಲ್ಲ. ಇದು ಒಳ್ಳೆಯ ಲಕ್ಷಣವಲ್ಲ,ಏಕೆಂದರೆ ಕೆಟ್ಟ ಉಸಿರು ಬಾಯಿಯ ನೈರ್ಮಲ್ಯ ಅಥವಾ ಬಾಯಿಯ ಸಮಸ್ಯೆಗಳನ್ನು ಮಾತ್ರ ಸೂಚಿಸುವುದಿಲ್ಲ,ಅದು ನಮ್ಮ ಶರೀರದಲ್ಲಿಯ ಗಂಭೀರ ಅನಾರೋಗ್ಯದ ಸಂಕೇತವೂ ಆಗಿರಬಹುದು.

ಕೆಟ್ಟ ಉಸಿರಿನಲ್ಲಿ ವಿಧಗಳು

   ಶೇ.90ರಷ್ಟು ಕೆಟ್ಟ ಉಸಿರಿನ ಪ್ರಕರಣಗಳಿಗೆ ಬಾಯಿಯ ಕಾಯಿಲೆಗಳು ಕಾರಣವಾಗಿರುತ್ತವೆ. ಶೇ.9ರಷ್ಟು ಪ್ರಕರಣಗಳು ಉಸಿರಾಟ ವ್ಯವಸ್ಥೆ,ಜಠರಗರುಳು ವ್ಯವಸ್ಥೆ ಅಥವಾ ಮೂತ್ರವ್ಯವಸ್ಥೆಗಳಿಗೆ ಸಂಬಂಧಿಸಿದ್ದರೆ,ಶೇ.1ರಷ್ಟು ಪ್ರಕರಣಗಳಿಗೆ ಆಹಾರ ಅಥವಾ ಔಷಧಿಗಳು ಕಾರಣವಾಗಿರುತ್ತವೆ. ಅಂದರೆ ನಿಮ್ಮ ಉಸಿರು ನಿಮ್ಮ ಒಟ್ಟಾರೆ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ ಮತ್ತು ಯಾವುದೇ ಗಂಭೀರ ಅನಾರೋಗ್ಯದ ಬಗ್ಗೆ ನಿಮಗೆ ಎಚ್ಚರಿಕೆಯ ಸಂಕೇತವನ್ನು ನೀಡುತ್ತದೆ. ಕೆಟ್ಟ ಉಸಿರಿನಲ್ಲಿ ಹಲವಾರು ವಿಧಗಳಿವೆ. ಅವು ಏನನ್ನು ಸೂಚಿಸುತ್ತವೆ ಎನ್ನುವ ಬಗ್ಗೆ ಮಾಹಿತಿಯಿಲ್ಲಿದೆ.

ಉಸಿರಿಗೆ ಹಣ್ಣಿನ ವಾಸನೆ

ಮಧುಮೇಹವು ಬಾಯಿ ಒಣಗುವಿಕೆ ಮತ್ತು ದುರ್ವಾಸನೆಯಂತಹ ಬಾಯಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ತಿಳಿದಿರುವ ವಿಷಯವಾಗಿದೆ. ಆದರೆ ಅನಿಯಂತ್ರಿತ ಮಧುಮೇಹವು ಉಸಿರು ಹಣ್ಣಿನ ಅಥವಾ ನೇಲ್ ಪಾಲಿಷ್‌ನ್ನು ತೆಗೆಯಲು ಬಳಸುವ ಎಸಿಟೋನ್ ವಾಸನೆಯಿಂದ ಕೂಡಿರುವಂತೆ ಮಾಡುತ್ತದೆ. ಇದು ಕೀಟೊಆ್ಯಸಿಡೋಸಿಸ್ ಎಂಬ ಮಧುಮೇಹ ಸಮಸ್ಯೆಯನ್ನು ಸೂಚಿಸುತ್ತದೆ. ಮಧುಮೇಹಿಗಳಲ್ಲಿ ಇನ್ಸುಲಿನ್ ಕೊರತೆಯಿರುವುದರಿಂದ ಶರೀರವು ಅಗತ್ಯ ಶಕ್ತಿಗಾಗಿ ಕೊಬ್ಬನ್ನು ಬಳಸಿಕೊಳ್ಳುತ್ತದೆ ಮತ್ತು ಕೊಬ್ಬಿನ ವಿಭಜನೆ ಪ್ರಕ್ರಿಯೆಯಲ್ಲಿ ಉಪಉತ್ಪನ್ನವಾಗಿ ಕೀಟೋನ್‌ಗಳು ಉತ್ಪತ್ತಿಯಾಗುತ್ತವೆ. ಇವು ಉಸಿರು ಹಣ್ಣಿನ ವಾಸನೆಯನ್ನು ಹೊಂದಲು ಕಾರಣವಾಗುತ್ತವೆ.

► ಆಮ್ಲೀಯ ವಾಸನೆ

ಶ್ವಾಸಕೋಶದ ಮತ್ತು ಉಸಿರಾಟದ ಕಾಯಿಲೆಗಳಿಂದ ನರಳುತ್ತಿರುವವರ ಉಸಿರು ಹೆಚ್ಚಿನ ಸಂದರ್ಭಗಳಲ್ಲಿ ಆಮ್ಲೀಯ ವಾಸನೆಯಿಂದ ಕೂಡಿರುತ್ತದೆ. ಉಸಿರಾಟದ ಸೋಂಕು ಲೋಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಸೈನಸ್ ತಡೆಯನ್ನುಂಟು ಮಾಡುವುದು ಇದಕ್ಕೆ ಕಾರಣವಾಗಿದೆ. ಅಸ್ತಮಾ ಮತ್ತು ಸಿಸ್ಟಿಕ್ ಫೈಬ್ರೋಸಿಸ್‌ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಬಾಯಿಯ ಮೂಲಕ ಉಸಿರಾಡುವುದು ಹೆಚ್ಚು ಮತ್ತು ಇದರಿಂದಾಗಿ ಬಾಯಿ ಒಣಗುತ್ತದೆ ಹಾಗೂ ದುರ್ವಾಸನೆ ಬೀರುತ್ತದೆ.

ಅಮೋನಿಯಾ ವಾಸನೆ

ಸಾರ್ವಜನಿಕ ಮೂತ್ರಾಲಯಗಳ ಸುತ್ತ ಹಬ್ಬಿಕೊಂಡಿರುವ ತೀಕ್ಷವಾದ ಘಾಟು ವಾಸನೆಗೆ ಮೂತ್ರದಲ್ಲಿರುವ ಅಮೋನಿಯಾ ಕಾರಣವಾಗಿರುತ್ತದೆ. ಅಮೋನಿಯಾ ಮೂತ್ರ ಚಯಾಪಚಯದ ಅಂತಿಮ ಉತ್ಪನ್ನವಾಗಿದೆ. ಹೀಗಾಗಿ ವ್ಯಕ್ತಿಯೋರ್ವನ ಉಸಿರು ಅಮೋನಿಯಾದ ವಾಸನೆಯಿಂದ ಕೂಡಿದ್ದರೆ ಅದು ಆತನ ಮೂತ್ರಪಿಂಡಗಳಲ್ಲಿ ಏನೋ ಸಮಸ್ಯೆಯಿದೆ ಎನ್ನುವುದನ್ನು ಸೂಚಿಸುತ್ತದೆ.

ಹಳಸಿದ ವಾಸನೆ

ಬಾಯಿಯ ಉಸಿರು ಆಹಾರ ಹಳಸಿದ ವಾಸನೆಯಿಂದ ಕೂಡಿದ್ದರೆ ಅದು ಯಕೃತ್ತಿನ ಸಮಸ್ಯೆಯ ಸಂಕೇತವಾಗಬಹುದು. ಅಂದರೆ ಯಕೃತ್ತು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರಬಹುದು ಅಥವಾ ಯಕೃತ್ತಿಗೆ ಹಾನಿಯುಂಟಾಗಿರಬಹುದು. ಅಮಿನೊ ಆ್ಯಸಿಡ್‌ನ ವಿಭಜನೆ ವೇಳೆ ಉತ್ಪತ್ತಿಯಾಗುವ,ಗಂಧಕವನ್ನು ಅಧಿಕವಾಗಿ ಒಳಗೊಂಡಿರುವ ಸಹಉತ್ಪನ್ನಗಳನ್ನು ಹೊರಹಾಕಲು ಶರೀರದ ಪ್ರಯತ್ನ ಇದಕ್ಕೆ ಕಾರಣವಾಗುತ್ತದೆ. ಹೀಗಾಗಿ ಯಕೃತ್ತಿನ ಅಸಮರ್ಪಕ ಚಯಾಪಚಯ ಕ್ರಿಯೆಯು ಈ ಸಂಯುಕ್ತಗಳು ಉಸಿರಿನ ಮೂಲಕ ವಿಸರ್ಜನೆಗೊಳ್ಳಲು ಕಾರಣವಾಗುತ್ತದೆ ಮತ್ತು ಉಸಿರಿಗೆ ಹಳಸಿದ ವಾಸನೆಯನ್ನು ನೀಡುತ್ತವೆ.

ಕೊಳೆತ ಮೀನಿನ ವಾಸನೆ

ಮೀನಿನ ವಾಸನೆಯ ಉಸಿರಿಗೆ ಮೀನಿನ ಸೇವನೆಯೇ ಯಾವಾಗಲೂ ಕಾರಣವಾಗಿರುವುದಿಲ್ಲ. ಅದು ಟ್ರೈಮಿಥೈಲಮಿನೂರಿಯಾ ಎಂಬ ಚಯಾಪಚಯ ಸ್ಥಿತಿಯಿಂದಲೂ ಉಂಟಾಗುತ್ತದೆ. ಶರೀರಕ್ಕೆ ಟ್ರೈಮಿಥೈಲಮಿನೂರಿಯಾ ಸಂಯುಕ್ತವನ್ನು ವಿಭಜಿಸಲು ಅಸಾಧ್ಯವಾದಾಗ ಈ ಸ್ಥಿತಿಯುಂಟಾಗುತ್ತದೆ. ಇದರ ಪರಿಣಾಮವಾಗಿ ಈ ಸಂಯುಕ್ತವು ಶರೀರದಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಉಸಿರಿನ ಮೂಲಕ ಹೊರಗೆ ಹೋಗುತ್ತದೆ. ಕೊಳೆತ ಮೀನು ಅಥವಾ ಮೊಟ್ಟೆಯ ವಾಸನೆಯನ್ನು ಉಸಿರಿಗೆ ನೀಡುವ ಇದು ಅಪರೂಪಕ್ಕೆ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ.

ಚೀಸ್‌ನ ವಾಸನೆ

ತೀಕ್ಷ್ಣವಾದ ಚೀಸ್ ಅಥವಾ ಗಿಣ್ಣಿನಂತಹ ವಾಸನೆಯು ಮೂಗಿನ ಸಮಸ್ಯೆಯನ್ನು ಸೂಚಿಸಬಹುದು. ಸೈನುಸಿಟಿಸ್‌ನಂತಹ ಶ್ವಾಸನಾಳ ಸೋಂಕುಗಳೂ ಇದಕ್ಕೆ ಕಾರಣವಾಗುತ್ತವೆ. ಉಸಿರಾಟದ ಸೋಂಕು ಉಂಟಾದಾಗ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಯಿಂದಾಗಿ ದ್ರವ ಮತ್ತು ಲೋಳೆ ಸಂಗ್ರಹಗೊಳ್ಳುತ್ತವೆ ಮತ್ತು ಇದು ಕೆಟ್ಟ ಉಸಿರಿಗೆ ಕಾರಣವಾಗುತ್ತದೆ. ಅಲ್ಲದೆ ಮೂಗು ಕಟ್ಟಿಕೊಂಡಾಗ ಬಾಯಿಯಿಂದ ಉಸಿರಾಡುವುದು ಬಾಯಿ ಇನ್ನಷ್ಟು ಒಣಗಲು ಕಾರಣವಾಗುತ್ತದೆ ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಿ ದುರ್ವಾಸನೆಯನ್ನುಂಟು ಮಾಡುತ್ತದೆ.

ಮಲದ ವಾಸನೆ

ಜೀರ್ಣಾಂಗ ವ್ಯವಸ್ಥೆಯಲ್ಲಿನ ಅಸಮತೋಲನವು ಕೆಟ್ಟ ಉಸಿರಿಗೆ ಕಾರಣವಾಗುತ್ತದೆ. ಅನ್ನನಾಳದಲ್ಲಿ ಆಮ್ಲದ ಹಿಮ್ಮುಖ ಹರಿವು,ಹೊಟ್ಟೆಯುಬ್ಬರ,ವಾಯು,ಮಲಬದ್ಧತೆ ಮತ್ತು ಕರುಳಿನಲ್ಲಿ ವ್ಯತ್ಯಯದಂತಹ ಜೀರ್ಣ ಸಮಸ್ಯೆಗಳು ಈ ಅಸಮತೋಲನದಲ್ಲಿ ಸೇರಿವೆ. ಇಂತಹ ಸ್ಥಿತಿಗಳು ಜಠರದಲ್ಲಿ ಆಹಾರದ ಸಂಸ್ಕರಣೆಯನ್ನು ತಡೆಯುತ್ತವೆ ಅಥವಾ ವಿಳಂಬಿಸುತ್ತವೆ. ಹೀಗೆ ನಾವು ಸೇವಿಸಿದ ಆಹಾರ ಜಠರದಲ್ಲಿ ಜೀರ್ಣಗೊಳ್ಳದಿದ್ದಾಗ ಅದು ಕೊಳೆಯತೊಡಗುತ್ತದೆ ಮತ್ತು ಸಣ್ಣ ಪ್ರಮಾಣದಲ್ಲಿ ಅಜೀರ್ಣ ಆಹಾರ ಮತ್ತು ವಾಯು ಅನ್ನನಾಳದಲ್ಲಿ ಹಿಮ್ಮುಖವಾಗಿ ಹರಿಯುತ್ತವೆ ಮತ್ತು ಮಲದಂತಹ ವಾಸನೆಯ ಉಸಿರಿಗೆ ಕಾರಣವಾಗುತ್ತವೆ.

ಕೆಟ್ಟ ಉಸಿರು ಎಂದರೇನು?

ಮೊದಲನೆಯದಾಗಿ ಕೆಟ್ಟ ಉಸಿರು ಬಾಯಿಯ ಅನಾರೋಗ್ಯ ಮತ್ತು ಅನೈರ್ಮಲ್ಯದ ಸ್ಪಷ್ಟ ಸುಳಿವಾಗಿದೆ. ಆದ್ದರಿಂದ ಕೆಟ್ಟ ಉಸಿರಿನ ಮೂಲಕಾರಣವನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ.

ಉದಾಹರಣೆಗೆ ದುರ್ವಾಸನೆಗೆ ಔಷಧಿಗಳು ಕಾರಣವಾಗಿದ್ದರೆ ಈ ಬಗ್ಗೆ ವೈದ್ಯರ ಸಲಹೆ ಪಡೆಯಬೇಕು. ಕೆಟ್ಟ ಉಸಿರಿನಿಂದ ಪಾರಾಗಲು ನೈಸರ್ಗಿಕ ಪರಿಹಾರ ಅಥವಾ ಸ್ವಯಂಔಷಧಿಗಳನ್ನು ಬಳಸಕೂಡದು. ಇದು ತಾತ್ಕಾಲಿಕ ಉಪಶಮನ ನೀಡಬಹುದೇ ಹೊರತು ಮೂಲಕಾರಣವನ್ನು ನಿವಾರಿಸುವುದಿಲ್ಲ.

ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಸೋಂಕುಗಳ ಅಪಾಯವನ್ನು ಸಮರ್ಥವಾಗಿ ಎದುರಿಸಬಹುದು ಮತ್ತು ಕೆಟ್ಟ ಉಸಿರನ್ನು ತಡೆಗಟ್ಟಬಹುದು. ಅಜೀರ್ಣ ಸಮಸ್ಯೆಯು ಕೆಟ್ಟ ಉಸಿರಿಗೆ ಕಾರಣವಾಗಿದ್ದರೆ ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆದರೆ ಹಣ್ಣಿನ ಅಥವಾ ಮಲದ ವಾಸನೆಯಂತಹ ಉಸಿರಿನ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಕಾರಣವನ್ನು ತಿಳಿದುಕೊಳ್ಳಲು ವೈದ್ಯರ ಭೇಟಿ ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News