ಅಧಿಕ ರಕ್ತದೊತ್ತಡದ ಬಗ್ಗೆ ತಿಳಿದಿರಲೇಬೇಕಾದ ಪ್ರಮುಖ ವಿಷಯಗಳು…

Update: 2018-10-29 13:57 GMT

ಹೈಪರ್‌ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ ಹೆಚ್ಚಿನ ಜನರ ಸಾಮಾನ್ಯ ದೂರಾಗಿದೆ. ಆನ್‌ಲೈನ್ ಸಮೀಕ್ಷೆಯೊಂದರಂತೆ ಶೇ.93ಕ್ಕೂ ಅಧಿಕ ಜನರು ಒಂದಲ್ಲ ಒಂದು ರೂಪದ ಹೈಪರ್‌ಟೆನ್ಷನ್‌ನಿಂದ ಬಳಲುತ್ತಿದ್ದಾರೆ. ಆದರೆ ಹೈಪರ್‌ಟೆನ್ಷನ್ ಬಗ್ಗೆ ಮತ್ತು ಅದರಲ್ಲಿ ಹಲವಾರು ವಿಧಗಳಿವೆ ಎನ್ನುವುದು ನಮ್ಮಲ್ಲಿ ನಿಜವಾಗಿಯೂ ಎಷ್ಟು ಜನರಿಗೆ ಗೊತ್ತಿದೆ?, ಈ ಬಗ್ಗೆ ಗೊತ್ತಿಲ್ಲದವರಿಗಾಗಿ ಆರಂಭಿಕ ಮಾಹಿತಿ: ‘ಎಸೆನ್ಶಿಯಲ್ ಹೈಪರ್‌ಟೆನ್ಷನ್ ಮತ್ತು ಸೆಕಂಡರಿ ಹೈಪರ್‌ಟೆನ್ಷನ್’ ಇವು ಈ ಪಿಡುಗಿನ ಎರಡು ಮುಖ್ಯ ವಿಧಗಳಾಗಿವೆ.

ಎಸೆನ್ಶಿಯಲ್ ಹೈಪರ್‌ಟೆನ್ಷನ್ ಅಧಿಕ ರಕ್ತದೊತ್ತಡಕ್ಕೆ ನಮಗೆ ಗೊತ್ತಿರುವ ಯಾವುದೇ ಕಾರಣವು ಎಸೆನ್ಶಿಯಲ್ ಹೈಪರ್‌ಟೆನ್ಷನ್ ಅನ್ನು ಉಂಟುಮಾಡುವುದಿಲ್ಲ. ಅಂದರೆ ಅಧಿಕ ರಕ್ತದೊತ್ತಡವೆಂಬಂತೆ ತೋರಿಬರುವ ಇತರ ಯಾವುದೇ ಸಮಸ್ಯೆಯನ್ನು ನಿಮ್ಮ ವೈದ್ಯರು ತಳ್ಳಿಹಾಕಿದ್ದರೆ ನಿಮ್ಮ ಸಮಸ್ಯೆಯು ಎಸೆನ್ಶಿಯಲ್ ಹೈಪರ್‌ಟೆನ್ಷನ್ ಆಗಿರುತ್ತದೆ. ಈ ವಿಧದ ಅಧಿಕ ರಕ್ತದೊತ್ತಡ ಯಾವುದೇ ಲಕ್ಷಣಗಳನ್ನು ಹೊಂದಿರದಿರಬಹುದು,ಆದರೆ ಆಗಾಗ್ಗೆ ತಲೆನೋವು,ದಣಿವು,ಜೊತೆಗೆ ಮೂಗಿನಲ್ಲಿ ರಕ್ತಸ್ರಾವವನ್ನೂ ನೀವು ಅನುಭವಿಸಬಹುದು. ವೈದ್ಯರು ಹೇಳುವಂತೆ ಧೂಮ್ರಪಾನ,ಬೊಜ್ಜು ಅಥವಾ ಸೇವಿಸುವ ಆಹಾರದಂತಹ ಜೀವನಶೈಲಿ ಸಂಗತಿಗಳು ಎಸೆನ್ಶಿಯಲ್ ಹೈಪರ್‌ಟೆನ್ಷನ್ ಅನ್ನು ತರಬಹುದು. ಪರ್ಯಾಯವಾಗಿ ಅದು ಆನುವಂಶಿಕವಾಗಿಯೂ ಬರಬಹುದು.

ಸೆಕಂಡರಿ ಹೈಪರ್‌ಟೆನ್ಷನ್

ಹಾರ್ಮೋನ್ ಅಸಂಗತತೆ(ಉದಾ:ಥೈರಾಯ್ಡ್ ಸಮಸ್ಯೆ)ಯಂತಹ ಶರೀರದಲ್ಲಿಯ ಸಮಸ್ಯೆಗಳು ಸೆಕಂಡರಿ ಹೈಪರ್‌ಟೆನ್ಷನ್‌ಗೆ ಕಾರಣವಾಗುತ್ತವೆ. ಮೂತ್ರಪಿಂಡಗಳಿಗೆ ರಕ್ತದ ಪೂರೈಕೆಯಲ್ಲಿನ ಅಥವಾ ನಿದ್ರಿಸಿದಾಗ ಶ್ವಾಸನಾಳಗಳಲ್ಲಿ ಏನಾದರೊಂದು ಬಗೆಯ ವ್ಯತ್ಯಯಗಳಿಂದಲೂ ಸೆಕಂಡರಿ ಹೈಪರ್‌ಟೆನ್ಷನ್ ಉಂಟಾಗಬಹುದು. ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಕೆಲವು ಔಷಧಿಗಳೂ ಕಾರಣವಾಗಬಹುದು. ಆದರೆ ಈ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಕಾರಣವು ಗೊತ್ತಾದರೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು ಎನುತ್ತಾರೆ ವೈದ್ಯರು.

ವೈಟ್‌ಕೋಟ್ ಹೈಪರ್‌ಟೆನ್ಷನ್

ವೈಟ್‌ಕೋಟ್ ಹೈಪರ್‌ಟೆನ್ಷನ್ ಪ್ರಕರಣದಲ್ಲಿ ರೋಗಿಗಳು ಆಸ್ಪತ್ರೆಗಳಲ್ಲಿದ್ದಾಗ ಅವರಲ್ಲಿ ಅತಿಯಾದ ರಕ್ತದೊತ್ತಡವಿರುತ್ತದೆ ಮತ್ತು ಮನೆಯಲ್ಲಿ ಪರೀಕ್ಷಿಸಿದಾಗ ಅದಕ್ಕಿಂತ ಕಡಿಮೆ ರಕ್ತದೊತ್ತಡ ಕಂಡುಬರುತ್ತದೆ. ಇದೇ ಕಾರಣಕ್ಕಾಗಿ ನಿಖರವಾದ ನಿರ್ಧಾರಕ್ಕಾಗಿ ಮೂರು ಬೇರೆ ಬೇರೆ ಸಮಯಗಳಲ್ಲಿ ರಕ್ತದೊತ್ತಡವನ್ನು ಅಳೆಯಬೇಕು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಶಿಫಾರಸು ಮಾಡಿದೆ. 65 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರಲ್ಲಿ ರಕ್ತದೊತ್ತಡವನ್ನು ಅಳೆದಾಗ ಸಿಸ್ಟೋಲಿಕ್(ಮೇಲಿ ಮಿತಿ) ನಿಗದಿತ 120ಕ್ಕಿಂತ ಹೆಚ್ಚಿದ್ದರೂ ಡಯಾಸ್ಟೋಲಿಕ್ (ಕೆಳಗಿನ ಮಿತಿ) ನಂಬರ್ ನಿಗದಿತ ಮಿತಿಯಲ್ಲಿಯೇ ಇರುವುದು ಸಾಮಾನ್ಯವಾಗಿದೆ. ವಯಸ್ಸಾದಂತೆ ರಕ್ತನಾಳಗಳ ಸ್ಥಿತಿಸ್ಥಾಪಕತ್ವ ಗುಣ ಕಡಿಮೆಯಾಗುವುದು ಇದಕ್ಕೆ ಕಾರಣವಾಗಿದೆ.

ಹೀಗಾಗಿ ನೀವು ಯಾವ ವಿಧದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಿ ಮತ್ತು ಏನು ಮಾಡಬೇಕು,ಏನು ಮಾಡಬಾರದು ಎನ್ನುವುದು ನಿಮಗೆ ಗೊತ್ತಿರದಿದ್ದರೆ ನಿಮ್ಮ ವೈದ್ಯರನ್ನು ಕೇಳಲು ಇದು ಸಕಾಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News