ಶಬರಿಮಲೆ ಭೇಟಿಗೆ ಮುಂದಾದ ಅಮಿತ್ ಶಾ

Update: 2018-10-30 03:30 GMT

ತಿರುವನಂತಪುರ, ಅ. 30: ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಅನುವು ಮಾಡಿಕೊಟ್ಟಿರುವ ಸುಪ್ರೀಂಕೋರ್ಟ್ ತೀರ್ಪಿನ ಪರ ಹಾಗೂ ವಿರುದ್ಧವಾಗಿ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ, ಮುಂದಿನ ತಿಂಗಳು ಮಂದಿರ ತೆರೆಯುವ ವೇಳೆ ಶಬರಿಮಲೆಗೆ ಭೇಟಿ ನೀಡುವ ಅಪೇಕ್ಷೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವ್ಯಕ್ತಪಡಿಸಿರುವುದು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಮುಂದಿನ ತಿಂಗಳು ದೇಗುಲಕ್ಕೆ ಭೇಟಿ ನೀಡಲು ಅಮಿತ್ ಶಾ ನಿರ್ಧರಿಸಿದ್ದಾರೆ ಎಂದು ಪಕ್ಷದ ರಾಜ್ಯ ಮುಖಂಡರೊಬ್ಬರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಈಗಾಗಲೇ ನ. 8ರಿಂದ ರಥಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಎಲ್ಲ ವಯೋಮಾನದ ಮಹಿಳೆಯರ ಭೇಟಿಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕಾಸರಗೋಡಿನಿಂದ ಶಬರಿಮಲೆಗೆ ಈ ಯಾತ್ರೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರ ಇದುವರೆಗೆ 3500ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರನ್ನು ಬಂಧಿಸಿದೆ.

ವಿವಾದದ ವಿಚಾರದಲ್ಲಿ ಯಾವುದೇ ನೇರ ಕಾರ್ಯಾಚರಣೆಗೆ ಇಳಿಯದಂತೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಸೂಚಿಸಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಎನ್‌ಡಿಎ ಪಾಲುದಾರ ಪಕ್ಷಗಳ ಜತೆ ಸೇರಿ ಚಳವಳಿಯನ್ನು ಮತ್ತಷ್ಟು ಬಲಗೊಳಿಸುವಂತೆ ಶಾ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಪ್ರಬಲವಾಗಿರುವ ನಾಯರ್ ಸರ್ವೀಸ್ ಸೊಸೈಟಿ (ಎನ್‌ಎಸ್‌ಎಸ್) ಮತ್ತು ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್‌ಎನ್‌ಡಿಪಿ) ಎಂಬ ಎಳವ ಸಮುದಾಯದ ಸಾಮಾಜಿಕ- ಸಾಂಸ್ಕೃತಿಕ ಸಂಘಟನೆ ಒಗ್ಗಟ್ಟಿನಲ್ಲಿ ಇರುವಂತೆ ಮಾಡುವ ಪ್ರಯತ್ನದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲಿ ಹಿಂದೂ ಜನಸಂಖ್ಯೆ ಶೇಕಡ 54ರಷ್ಟಿದ್ದು, ಈ ಪೈಕಿ ಸುಮಾರು ಮೂರನೇ ಎರಡರಷ್ಟು ಮಂದಿ ಎಳವ ಮತ್ತು ನಾಯರ್ ಸಮುದಾಯಕ್ಕೆ ಸೇರಿದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News