ಅಯೋಧ್ಯೆ ವಿವಾದ: ತೀರ್ಪು ನೀಡದೇ ಇರುವುದೇ ಅತ್ಯುತ್ತಮ ತೀರ್ಪು

Update: 2018-10-30 18:36 GMT

ಈ ದೇಶದ ಜನರಿಗೆ ಅಯೋಧ್ಯೆ ವಿವಾದ ಎಂದರೆ ‘ಹೋಗುತ್ತಲೂ ಕುಯ್ಯುವ, ಬರುತ್ತಲೂ ಕುಯ್ಯುವ’ ಗರಗಸದಂತೆ. ಸುಪ್ರೀಂಕೋರ್ಟ್ ಯಾವ ರೀತಿಯ ತೀರ್ಪನ್ನು ನೀಡಿದರೂ ಈ ದೇಶಕ್ಕೆ ಅದರಿಂದ ಒಳ್ಳೆಯದಾಗುವುದಿಲ್ಲ ಎನ್ನುವುದು ಜನರಿಗೆ ಸ್ಪಷ್ಟವಾಗಿ ಬಿಟ್ಟಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಅಯೋಧ್ಯೆ ಭೂ ವಿವಾದದ ತೀರ್ಪಿನ ಕುರಿತಂತೆ ಬಿಜೆಪಿ ಮತ್ತು ಸಂಘಪರಿವಾರ ಯಾಕೆ ಉತ್ಸುಕವಾಗಿದೆ ಎನ್ನುವುದು ಕೂಡ ದೇಶಕ್ಕೆ ಗೊತ್ತಿದೆ. ಆದುದರಿಂದಲೇ, ಸದ್ಯಕ್ಕೆ ಸುಪ್ರೀಂಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತೀರ್ಪನ್ನು ನೀಡದೇ ಇರುವುದೇ ಅತ್ಯುತ್ತಮ ತೀರ್ಪು ಎಂದು ಭಾವಿಸುವಂತಾಗಿದೆ. ಸೋಮವಾರದಂದು ದೇಶದ ದೃಷ್ಟಿ ಸುಪ್ರೀಂಕೋರ್ಟ್ ಕಡೆಗಿತ್ತು. ಈ ತೀರ್ಪು ಮುಂದಿನ ಚುನಾವಣೆಯ ಸಂದರ್ಭದಲ್ಲಿ ಮಹತ್ವದ ಪಾತ್ರವಹಿಸುವುದರಿಂದ ರಾಜಕೀಯ ಪಕ್ಷಗಳ ನೇತಾರರೂ ಆತಂಕದಿಂದ ಕಾಯುತ್ತಿದ್ದರು. ಸೋಮವಾರ ಸುಪ್ರೀಂಕೋರ್ಟ್ ತಳೆದ ನಿರ್ಧಾರ ಒಂದಿಷ್ಟು ನೆಮ್ಮದಿಯ ಉಸಿರು ಬಿಡುವಂತೆ ಮಾಡಿದೆ. ವಿಚಾರಣೆಯ ದಿನಾಂಕವನ್ನು ಪೀಠ ನಿರ್ಧರಿಸಲಿದೆ. ವಿಚಾರಣೆಯನ್ನು ಜನವರಿಯಲ್ಲೇ ಕೈಗೊಳ್ಳುತ್ತಾರೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಇದರಿಂದಾಗಿ ಜನರು ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ. ಇದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಒಂದಿಷ್ಟು ನಿರಾಸೆಯನ್ನುಂಟು ಮಾಡಿದ ತೀರ್ಪು. ಆದರೂ ಜನವರಿಯ ಹೊತ್ತಿಗೆ ಸುಪ್ರೀಂಕೋರ್ಟ್ ನಿರ್ಧಾರ ಯಾವ ದಿಕ್ಕಿಗೆ ಚಲಿಸಬಹುದು ಎನ್ನುವುದನ್ನು ಊಹಿಸುವಂತಿಲ್ಲ.

ಚುನಾವಣೆಗೆ ದಿನ ಹತ್ತಿರವಿರುವಂತೆಯೇ ಅದರ ಬಾಯಿಯಿಂದ ಅಯೋಧ್ಯೆಯ ಕುರಿತಂತೆ ಪರ-ವಿರುದ್ಧ ಯಾವುದಾದರೊಂದು ತೀರ್ಪು ಹೊರಬೀಳುವಂತೆ ಸರಕಾರವೇ ಪರೋಕ್ಷ ಒತ್ತಡ ಹೇರಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ವಿವಾದಿತ ನಿವೇಶನಕ್ಕೆ ಸಂಬಂಧಿಸಿ ಯಾವುದೇ ತೀರ್ಪನ್ನು ನೀಡಿದರೂ, ಬಿಜೆಪಿ ಮುಂದಿನ ಚುನಾವಣೆಯಲ್ಲಿ ಅದನ್ನು ತನಗೆ ಪೂರಕವಾಗಿ ಬಳಸಿಕೊಳ್ಳುತ್ತದೆ.

 ಅಯೋಧ್ಯೆ ನಿವೇಶನದ ಕುರಿತಂತೆ 2010ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಕುರಿತಂತೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಅಯೋಧ್ಯೆ ಎಲ್ಲ ರೀತಿಯಲ್ಲೂ ಒಂದು ಭೂವಿವಾದವಾಗಿದೆ. ಅದನ್ನು ಧಾರ್ಮಿಕ ಸೂಕ್ಷ್ಮ ವಿಷಯವಾಗಿ ಪರಿವರ್ತಿಸಿದ್ದು ರಾಜಕೀಯ ಪಕ್ಷಗಳು. ರಾಜಕೀಯ ಪಕ್ಷಗಳು ಮತ್ತು ಸಂಘಪರಿವಾರ ಬೀದಿಯಲ್ಲಿ ಅದೇನೇ ಹೇಳಿಕೊಳ್ಳಲಿ. ಒಂದು ವಿವಾದದ ಕುರಿತಂತೆ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅದರದೇ ಆದ ಮಾನದಂಡಗಳಿವೆ. ಯಾರದೋ ಒತ್ತಡಕ್ಕೆ ಮಣಿದು ತೀರ್ಪು ನೀಡುವುದು ಸಲ್ಲ. ಆದರೆ ಅಂದಿನ ತೀರ್ಪು ಎಲ್ಲರನ್ನೂ ಸಮಾಧಾನ ಪಡಿಸುವ ಕಟ್ಟೆ ಪಂಚಾಯಿತಿಯಂತಿತ್ತು. ನಿವೇಶನದ ಮೇಲೆ ಹಕ್ಕು ಚಲಾಯಿಸಿದ ಎಲ್ಲರಿಗೂ ಭೂಮಿಯನ್ನು ಇಷ್ಟಿಷ್ಟು ಎಂದು ಹಂಚಿಕೊಟ್ಟಿತು. ಹಾಗೆ ಹಂಚಿಕೊಡುವ ಸಂದರ್ಭದಲ್ಲಿ ಅದು ಯಾವ ಸಂವಿಧಾನವನ್ನು ಎಷ್ಟರಮಟ್ಟಿಗೆ ಗಣನೆಗೆ ತೆಗೆದುಕೊಂಡಿತು ಎನ್ನುವುದರ ಬಗ್ಗೆ ಸಂವಿಧಾನ ತಜ್ಞರಿಗೆ ಈಗಲೂ ಅನುಮಾನಗಳಿವೆ.

ನ್ಯಾಯಾಲಯಕ್ಕೆ ನ್ಯಾಯ ಮುಖ್ಯವಾಗದೇ, ಮೂರು ಗುಂಪುಗಳನ್ನು ಸಮಾಧಾನಿಸುವುದಷ್ಟೇ ಮುಖ್ಯವಾಯಿತು. ನ್ಯಾಯಾಲಯದ ಕೆಲಸ ಅದಲ್ಲ. ಈ ನಿಟ್ಟಿನಲ್ಲಿ ಒಂದು ಗುಂಪು ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನ ಮೊರೆ ಹೋಯಿತು. ಸುಪ್ರೀಂಕೋರ್ಟ್‌ನಲ್ಲಿ ಅಲಹಾಬಾದ್ ತೀರ್ಪು ನಿಲ್ಲುವುದು ಕಷ್ಟ ಎನ್ನುವುದು ಬಹುತೇಕ ಸಂವಿಧಾನ ತಜ್ಞರ ಅಭಿಮತ. ಒಂದು ವೇಳೆ ನ್ಯಾಯಾಲಯದ ತೀರ್ಪು ಸಂಘಪರಿವಾರಕ್ಕೆ ಪೂರಕವಾದರೆ ಅದನ್ನೇ ವಿಜಯೋತ್ಸವದ ರೀತಿಯಲ್ಲಿ ಆಚರಿಸಿ, ಮುಂದಿನ ಹಂತ ರಾಮಮಂದಿರ ನಿರ್ಮಾಣ ಎಂದು ನಂಬಿಸಿ ಮುಂದಿನ ಚುನಾವಣೆಯಲ್ಲಿ ಮತ ಕೇಳುತ್ತದೆ. ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ಸಂಘಪರಿವಾರಕ್ಕೆ ವಿರುದ್ಧವಾದರೆ, ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಗೋಳಾಡುತ್ತಾ, ಜನರನ್ನು ಪ್ರಚೋದಿಸುತ್ತಾ ಮತ ಯಾಚಿಸುತ್ತದೆ. ‘ರಾಮಮಂದಿರಕ್ಕಾಗಿ’ ಮತ್ತೆ ರಕ್ತಯಾತ್ರೆಯನ್ನು ಹಮ್ಮಿಕೊಂಡರೂ ಅದರಲ್ಲಿ ಅಚ್ಚರಿಯಿಲ್ಲ. ಮೋದಿ ಆಡಳಿತದಿಂದ ಅವರ ಭಕ್ತರೇ ಸಂಪೂರ್ಣ ಭ್ರಮ ನಿರಸನಗೊಂಡಿದ್ದಾರೆ. ‘ಅಚ್ಛೇದಿನ್’ ಆಟ ಮುಂದಿನ ಚುನಾವಣೆಯಲ್ಲಿ ನಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಮುಂದಿನ ಚುನಾವಣೆಗೆ ಬಳಕೆ ಮಾಡಲು ಬಿಜೆಪಿ ಹೊಂಚು ಹಾಕಿದೆ. ಈ ಕಾರಣದಿಂದ, ಸೋಮವಾರದ ಸುಪ್ರೀಂ ಕೋರ್ಟ್‌ನ ನಿರ್ಧಾರ ಬಿಜೆಪಿಗೆ ನಿರಾಸೆ ತಂದಿದೆ.

ಸುಪ್ರೀಂಕೋರ್ಟ್ ತೀರ್ಪು ತನಗೆ ವಿರುದ್ಧವಾಗಿ ಬಂದರೆ ಏನು ಮಾಡಬಹುದು ಎನ್ನುವುದರ ತಾಲೀಮನ್ನು ಸಂಘಪರಿವಾರ ಮತ್ತು ಬಿಜೆಪಿ ಕೇರಳದಲ್ಲಿ ನಡೆಸುತ್ತಿದೆ. ಕೇರಳ ಮಳೆಯಿಂದ ಕೊಚ್ಚಿ ಹೋದಾಗ ಜನರ ಆಕ್ರಂದನಗಳಿಗೆ ಬೆನ್ನು ಹಾಕಿದ್ದ ಕೇಂದ್ರ ಸರಕಾರ, ಶಬರಿಮಲೆಯಲ್ಲಿ ಮಹಿಳೆಯರು ಪ್ರವೇಶಿಸುವ ಕುರಿತ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಂತೆಯೇ ಸರಕಾರದೊಳಗಿರುವ ದೊಡ್ಡ ತಂಡ ಕೇರಳದಲ್ಲಿ ಬೀಡು ಬಿಟ್ಟಿದೆ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರೋಕ್ಷವಾಗಿ ಇದು ನ್ಯಾಯಾಂಗ ನಿಂದನೆಯಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪು ತಪ್ಪೇ ಆಗಿದ್ದರೆ, ಅದನ್ನು ನ್ಯಾಯಾಲಯದಲ್ಲೇ ಇತ್ಯರ್ಥ ಪಡಿಸಬೇಕು ಹೊರತು ಬೀದಿಯಲ್ಲಿ ಇತ್ಯರ್ಥ ಪಡಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಸುಪ್ರೀಂಕೋರ್ಟ್ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿದಾಗ ದಲಿತರು ದೇಶಾದ್ಯಂತ ಬೀದಿಗಿಳಿದರು. ಆದರೆ ಸರಕಾರ ಪೊಲೀಸರ ಲಾಠಿ ಮತ್ತು ಗೋಲಿಬಾರ್ ಮೂಲಕ ಪ್ರತಿಭಟನೆಯನ್ನು ದಮನಿಸಿತು.

ಅಂತಿಮವಾಗಿ ಅದನ್ನು ಸಂಸತ್ತಿನಲ್ಲೇ ಇತ್ಯರ್ಥ ಪಡಿಸಲಾಗಿದೆ. ಇದೀಗ ಕೇಂದ್ರದ ನೇತೃತ್ವದಲ್ಲೇ ಸುಪ್ರೀಂಕೋರ್ಟ್‌ನ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಬೀದಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನಿಸಿ ನ್ಯಾಯಾಲಯ ತನ್ನ ತೀರ್ಪಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎನ್ನುವುದು ಕೇಂದ್ರದ ನಾಯಕರಿಗೆ ಗೊತ್ತಿರಬೇಕು. ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಅನುಷ್ಠಾನಗೊಳಿಸುವುದು ಕೇಂದ್ರ ಸರಕಾರದ ಹೊಣೆಯೇ ಹೊರತು, ಅದರ ವಿರುದ್ಧ ಪ್ರತಿಭಟನೆಗೈದರೆ, ಸ್ವತಃ ತನ್ನ ವಿರುದ್ಧವೇ ತಾನು ಪ್ರತಿಭಟನೆ ನಡೆಸಿದಂತೆ. ಶಬರಿಮಲೆಯಲ್ಲಿ ಮಹಿಳೆಯರೂ ಭಾಗವಹಿಸಬಹುದು ಎನ್ನುವ ತೀರ್ಪನ್ನು ಕೇರಳದ ರಾಜ್ಯ ಸರಕಾರ ನೀಡಿದ್ದೇನೂ ಅಲ್ಲ. ಇಷ್ಟಕ್ಕೂ ಶಬರಿಮಲೆಯಲ್ಲಿ ಭಾಗವಹಿಸುವ ಮಹಿಳೆಯರೂ ಹಿಂದೂಗಳೇ ಆಗಿದ್ದಾರೆ. ಅವರು ಪ್ರವೇಶ ಮಾಡಬಾರದು ಎಂದು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ, ಪರೋಕ್ಷವಾಗಿ ಹಿಂದೂ ಮಹಿಳೆಯರ ಮತಗಳು ನಮಗೆ ಬೇಡ ಎಂದು ಘೋಷಿಸುತ್ತಿದೆಯೇ? ಅಥವಾ ಮಹಿಳೆಯರು ಹಿಂದೂಗಳ ವ್ಯಾಪ್ತಿಗೆ ಸೇರ್ಪಡೆಯಾಗುವುದಿಲ್ಲ ಎಂದು ಭಾವಿಸಿದೆಯೇ? ಒಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಕೇರಳದಲ್ಲಿ ಜನರನ್ನು ಭಾವನಾತ್ಮಕವಾಗಿ ಬೇರ್ಪಡಿಸುವುದಷ್ಟೇ ಬಿಜೆಪಿಯ ಉದ್ದೇಶ. ಮುಂದೆ ಅಯೋಧ್ಯೆಯ ನಿವೇಶನದ ಕುರಿತಂತೆ ತೀರ್ಪು ಹೊರಬಿದ್ದಾಗಲೂ ಬಿಜೆಪಿ ಇದೇ ತಂತ್ರವನ್ನು ಅನುಸರಿಸಿ, ದೇಶಾದ್ಯಂತ ಗಲಭೆ ಎಬ್ಬಿಸಿ ಚುನಾವಣೆಯನ್ನು ಗೆಲ್ಲುವ ತಂತ್ರವನ್ನು ಹೂಡಿದೆ. ಈ ಎಲ್ಲ ಕಾರಣದಿಂದ, ಲೋಕಸಭಾ ಚುನಾವಣೆಯ ಬಳಿಕವೇ ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದದ ಕುರಿತಂತೆ ತೀರ್ಪು ನೀಡುವುದು ಒಳ್ಳೆಯದು. ಇಲ್ಲವಾದರೆ, ಮುಂದಿನ ಲೋಕಸಭಾ ಚುನಾವಣೆ ಮುಗಿಯುವುದರ ಹೊತ್ತಿಗೆ ದೇಶದ ಸಮಗ್ರತೆಯ ಮೇಲೆ ಸಂಘಪರಿವಾರ ಮತ್ತು ಬಿಜೆಪಿ ಜಂಟಿಯಾಗಿ ಸರಿಪಡಿಸಲಾಗದಷ್ಟು ಹಾನಿಯನ್ನು ಮಾಡಿ ಬಿಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News