ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸಿದ್ದೀರಾ? ಇಲ್ಲಿದೆ ನೀವು ತೆಗೆದುಕೊಳ್ಳಬಹುದಾದ ಪರೀಕ್ಷೆಗಳ ಮಾಹಿತಿ....

Update: 2018-11-01 10:14 GMT

ಪ್ರತಿ ವರ್ಷ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳುತ್ತಾರೆ. ನೀವೂ ವಿದೇಶಗಳಲ್ಲಿ ವ್ಯಾಸಂಗ ಮಾಡುವ ಕನಸನ್ನು ಹೊಂದಿರಬಹುದು,ಆದರೆ ನಿಮ್ಮ ಕನಸನ್ನು ನನಸಾಗಿಸಲು ಏನು ಮಾಡಬೇಕು ಎಂದು ಗೊತ್ತಾಗದೆ ಗೊಂದಲದಲ್ಲಿದ್ದಿರಬಹುದು. ಇಂತಹ ಕನಸು ಹೊಂದಿರುವ ಹೆಚ್ಚಿನ ಜನರಿಗೆ ವಿದೇಶಗಳಲ್ಲಿಯ ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೆಲವು ಅತ್ಯಂತ ಸ್ಪರ್ಧಾತ್ಮಕವಾದ ಅಂತರರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಅಗತ್ಯ ಎನ್ನುವುದು ಗೊತ್ತಿಲ್ಲ. ಈ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದರೆ ನಿಮಗೆ ಆರ್ಥಿಕವಾಗಿ ನೆರವಾಗಬಲ್ಲ ಸ್ಕಾಲರ್‌ಷಿಪ್‌ಗಳು ಮತ್ತು ಇತರ ಬೆಂಬಲಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಅಂತರರಾಷ್ಟ್ರೀಯ ವಿವಿಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಾಜರಾಗಬೇಕಾದ ಕೆಲವು ಪರೀಕ್ಷೆಗಳ ಕುರಿತು ಮಾಹಿತಿಗಳಿಲ್ಲಿವೆ.......

► ಟಿಒಇಎಫ್‌ಎಲ್

ವಿದೇಶಿ ಭಾಷೆಯಾಗಿ ಇಂಗ್ಲಿಷ್ ಪರೀಕ್ಷೆ ಅಥವಾ ಟಿಒಇಎಫ್‌ಎಲ್ ಅತ್ಯಂತ ಪ್ರಸಿದ್ಧ ಇಂಗ್ಲಿಷ್ ದಕ್ಷತೆಯ ಪರೀಕ್ಷೆಯಾಗಿದೆ. ವಿಶ್ವಾದ್ಯಂತ ಇಂಗ್ಲಿಷ್ ಭಾಷಿಕ ವಿವಿಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದೇಶಿ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಟಿಒಇಎಫ್‌ಎಲ್ ಕೆನಡಾ,ಅಮೆರಿಕಾ,ಬ್ರಿಟನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿಶ್ವಾದ್ಯಂತ 130ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿನ 10,000ಕ್ಕೂ ಅಧಿಕ ವಿವಿಗಳು ಮತ್ತು ಸಂಸ್ಥೆಗಳ ಮಾನ್ಯತೆಯನ್ನು ಹೊಂದಿದೆ. ಹೆಚ್ಚಿನ ವಿವರಗಳಿಗಾಗಿ ets.org/toefl ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

► ಐಇಎಲ್‌ಟಿಎಸ್

ಐಇಎಲ್‌ಟಿಸ್ ಅಥವಾ ಅಂತರರಾಷ್ಟ್ರೀಯ ಇಂಗ್ಲಿಷ್ ಭಾಷೆ ಪರೀಕ್ಷೆ ವ್ಯವಸ್ಥೆಯು ವಿದ್ಯಾರ್ಥಿಗಳು ಟಿಒಇಎಫ್‌ಎಲ್‌ನೊಂದಿಗೆ ತೆಗೆದುಕೊಳ್ಳುವ ಎರಡನೇ ಇಂಗ್ಲಿಷ್ ಭಾಷಾ ಪ್ರೌಢಿಮೆ ಪರೀಕ್ಷೆಯಾಗಿದೆ. ವಿಶ್ವಾದ್ಯಂತ 1,200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಐಇಎಲ್‌ಟಿಎಸ್‌ನ ವೆಬ್‌ಸೈಟ್‌ನಲ್ಲಿ ವರ್ಷದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವ 48 ದಿನಾಂಕಗಳನ್ನು ಪ್ರಕಟಿಸಲಾಗಿದೆ.

ಐಇಎಲ್‌ಟಿಎಸ್ ಅಕಾಡಮಿಕ್ ಮತ್ತು ಐಇಎಲ್‌ಟಿಎಸ್ ಜನರಲ್ ಟ್ರೇನಿಂಗ್ ಇವು ಐಇಎಲ್‌ಟಿಎಸ್ ಪರೀಕ್ಷೆಯ ಎರಡು ವಿಧಗಳಾಗಿವೆ. ಉನ್ನತ ಶಿಕ್ಷಣ ಅಥವಾ ವೃತ್ತಿಪರ ನೋಂದಣಿಗೆ ಅರ್ಜಿ ಸಲ್ಲಿಸುವವರು ಅಕಾಡಮಿಕ್ ಪರೀಕ್ಷೆಯನ್ನು ತೆಗೆದುಕೊಂಡರೆ, ಪೂರಕ ಶಿಕ್ಷಣ,ಕೆಲಸದ ಅನುಭವ ಮತ್ತು ತರಬೇತಿಗಳನ್ನು ಪಡೆಯಲು ಇಂಗ್ಲಿಷ್ ಭಾಷಿಕ ರಾಷ್ಟ್ರಗಳಿಗೆ ತೆರಳುವವರು ಜನರಲ್ ಟ್ರೇನಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

► ಜಿಆರ್‌ಇ

ಗ್ರಾಜ್ಯುವೇಟ್ ರೆಕಾರ್ಡ್ ಎಕ್ಸಾಮಿನೇಷನ್ಸ್ ಅಥವಾ ಜಿಆರ್‌ಇ ಅಮೆರಿಕದಲ್ಲಿಯ ಹೆಚ್ಚಿನ ಗ್ರಾಜ್ಯುವೇಟ್ ಸ್ಕೂಲ್‌ಗಳಲ್ಲಿ ಪ್ರವೇಶ ಪಡೆಯಲು ಅಗತ್ಯವಾಗಿರುವ ಪರೀಕ್ಷೆಯಾಗಿದೆ. ಈ ಪರೀಕ್ಷೆಯು ಅಭ್ಯರ್ಥಿಗಳ ಚಿಂತನಾ ಶಕ್ತಿ,ವೌಖಿಕ ತಾರ್ಕಿಕ ಜ್ಞಾನ,ವಿಶ್ಲೇಷಣಾತ್ಮಕ ಬರವಣಿಗೆ ಮತ್ತು ಪರಿಮಾಣಾತ್ಮಕ ತಾರ್ಕಿಕ ಕೌಶಲ್ಯಗಳನ್ನು ಅಳೆಯುತ್ತದೆ. ಇದು ಅಮೆರಿಕ ಅಥವಾ ಕೆನಡಾಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.

► ಎಸ್‌ಎಟಿ

ಸ್ಕಾಲಸ್ಟಿಕ್ ಆ್ಯಪ್ಟಿಟ್ಯೂಡ್ ಟೆಸ್ಟ್ ಅಥವಾ ಎಸ್‌ಎಟಿ ಅಮೆರಿಕದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹೆಚ್ಚು ಜನಪ್ರಿಯವಾಗಿರುವ ಪರೀಕ್ಷೆಯಾಗಿದೆ. ಬರವಣಿಗೆ ಮತ್ತು ಭಾಷೆ,ಓದುವಿಕೆ,ಗಣಿತ(ಕ್ಯಾಲ್ಕುಲೇಟರ್ ಸಹಿತ) ಮತ್ತು ಗಣಿತ(ಕ್ಯಾಲ್ಕುಕೇಟರ್ ರಹಿತ) ಹೀಗೆ ನಾಲ್ಕು ವಿವಿಧ ವಿಭಾಗಗಳನ್ನು ಈ ಪರೀಕ್ಷೆಯು ಒಳಗೊಂಡಿದೆ. ಐದನೇ ಐಚ್ಛಿಕ ವಿಷಯವಾಗಿ ಅಭ್ಯರ್ಥಿಗಳು ಪ್ರಬಂಧ ಪರೀಕ್ಷೆಗೂ ಹಾಜರಾಗಬಹುದು,ಆದರೆ ಇದು ಕಡ್ಡಾಯವಲ್ಲ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಅಮೆರಿಕದ ಹೊರಗೆ ವರ್ಷದಲ್ಲಿ ನಾಲ್ಕು ಬಾರಿ ಎಸ್‌ಎಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಳಿಗಾಗಿ sat.collegeboard.org ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News