ನಿಮ್ಮ ಡೆಬಿಟ್ ಕಾರ್ಡ್ ಕಳೆದಿದೆಯೇ?: ನೀವೇ ಅದನ್ನು ಹೀಗೆ ಬ್ಲಾಕ್ ಮಾಡಬಹುದು

Update: 2018-11-01 13:59 GMT

ಇಂದು ಡೆಬಿಟ್ ಕಾರ್ಡ್ ನಮ್ಮ ಹಣಕಾಸು ಜೀವನದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯುವುದನ್ನು ಅಥವಾ ಆನ್‌ಲೈನ್ ವಹಿವಾಟು ನಡೆಸುವುದನ್ನು ಸುಲಭವಾಗಿಸಿದೆ.

ನಾವು ಡೆಬಿಟ ಕಾರ್ಡ್‌ನ್ನು ಕಳೆದುಕೊಂಡರೆ ನಮ್ಮ ಬದುಕು ಹೆಚ್ಚುಕಡಿಮೆ ಸ್ಥಗಿತಗೊಂಡು ಬಿಡುತ್ತದೆ ಮತ್ತು ಹೊಸ ಡೆಬಿಟ್ ಕಾರ್ಡ್‌ನ್ನು ಪಡೆಯುವ ಮುನ್ನ ಹಳೆಯ ಕಾರ್ಡ್‌ನ ಸಂಭಾವ್ಯ ದುರ್ಬಳಕೆಯನ್ನು ತಡೆಯಲು ಅದನ್ನು ಬ್ಲಾಕ್ ಮಾಡಿಸಬೇಕಾಗುತ್ತದೆ.

ಡೆಬಿಟ್ ಕಾರ್ಡ್‌ನ್ನು ನಿಮ್ಮ ಬ್ಯಾಂಕಿನ ಕಸ್ಟಮರ್ ಕೇರ್ ನಂಬರ್ ಮೂಲಕ ಬ್ಲಾಕ್ ಮಾಡಿಸಬಹುದು. ಆದರೆ ಇದಕ್ಕಾಗಿ ಫೋನ್‌ಲೈನ್‌ನಲ್ಲಿ ಸುದೀರ್ಘ ಕಾಯುವಿಕೆ ಅನಿವಾರ್ಯ ಮತ್ತು ಖಾತೆ ಸಂಖ್ಯೆ,ಡೆಬಿಟ್ ಕಾರ್ಡ್ ಕಳೆಯಲು ಕಾರಣ,ವಿಳಾಸ ಇತ್ಯಾದಿ ವಿಪ್ರವರಗಳನ್ನೊದಗಿಸಬೇಕಾಗುತ್ತದೆ. ಹೀಗಾಗಿ ಹೆಚ್ಚಿನವರಿಗೆ ಈ ವಿಧಾನ ರಗಳೆಯದಾಗುತ್ತದೆ. ಅಂತಹವರು ತಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಾನ್ ಆಗುವ ಮೂಲಕ ಕಳೆದುಹೋಗಿರುವ ಡೆಬಿಟ್ ಕಾರ್ಡ್‌ನ್ನು ಖುದ್ದಾಗಿ ಬ್ಲಾಕ್ ಮಾಡಬಹುದು. ಇದಕ್ಕಾಗಿ ಅನುಸರಿಸಬೇಕಾದ ಹೆಜ್ಜೆಗಳು ಇಲ್ಲಿವೆ......

1. ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡುವ ಮೂಲಕ ನಿಮ್ಮ ನೆಟ್‌ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಿ.

2. ‘ಇ -ಸರ್ವಿಸಿಸ್’ ಕೊಂಡಿಯನ್ನು ಕ್ಲಿಕ್ ಮಾಡಿ ಎಟಿಎಂ ಕಾರ್ಡ್ ಸರ್ವಿಸಸ್‌ನಡಿ ಇರುವ ಬ್ಲಾಕ್ ಎಟಿಎಂ ಕಾರ್ಡ್‌ನ್ನು ಆಯ್ಕೆ ಮಾಡಿಕೊಳ್ಳಿ.

3. ಈಗ ನೀವು ಡೆಬಿಟ್ ಕಮ್ ಎಟಿಎಂ ಕಾರ್ಡ್‌ನ್ನು ಬ್ಲಾಕ್ ಮಾಡಲು ಬಯಸಿರುವ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಎಟಿಎಂ ಕಾರ್ಡ್‌ನ ಮೊದಲ ನಾಲ್ಕು ಮತ್ತು ಕೊನೆಯ ನಾಲ್ಕು ಅಂಕಿಗಳು ಪರದೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ಹಾಲಿ ಸಕ್ರಿಯವಾಗಿರುವ ಅಥವಾ ಬ್ಲಾಕ್ ಮಾಡಲಾಗಿರುವ ನಿಮ್ಮ ಎಲ್ಲ ಕಾರ್ಡ್‌ಗಳು ಉಲ್ಲೇಖಗೊಂಡಿರುತ್ತವೆ.

4. ನೀವು ಬ್ಲಾಕ್ ಮಾಡಬೇಕಾದ ಡೆಬಿಟ್ ಕಾರ್ಡ್‌ನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ವೆರಿಫಿಕೇಷನ್‌ನ ಬಳಿಕ ಸಬ್‌ಮಿಟ್ ಆಪ್ಶನ್‌ನ್ನು ಕ್ಲಿಕ್ ಮಾಡಿ.

5. ಮುಂದಿನ ದೃಢೀಕರಣಕ್ಕಾಗಿ ಪ್ರೊಫೈಲ್ ಪಾಸ್‌ವರ್ಡ್ ಮೂಲಕ ಅಥವಾ ಎಸ್‌ಎಂಎಸ್ ಒಟಿಪಿ ಮೂಲಕ ಹೀಗೆ ಯಾವುದಾದರರೂ ದೃಢೀಕರಣ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

6. ಪ್ರೊಫೈಲ್ ಪಾಸ್‌ವರ್ಡ್ ಅಥವಾ ಎಸ್‌ಎಂಎಸ್ ಒಟಿಪಿ ಸಲ್ಲಿಸಿದ ಬಳಿಕ ಕನ್ಫರ್ಮ್ ಟ್ಯಾಬ್‌ನ್ನು ಕ್ಲಿಕ್ ಮಾಡಿ.

7. ಅಂತಿಮ ಹಂತದಲ್ಲಿ,ನಿಮ್ಮ ಎಟಿಎಂ ಕಾರ್ಡ್‌ನ್ನು ಬ್ಲಾಕ್ ಮಾಡುವಂತೆ ಕೋರಿಕೆಯನ್ನು ಯಶಸ್ವಿಯಾಗಿ ಸಲ್ಲಿಸಿದಾಗ,ಟಿಕೆಟ್ ಅಥವಾ ರೆಫರನ್ಸ್ ನಂ. ಸೃಷ್ಟಿಯಾಗುತ್ತದೆ ಮತ್ತು ಕಾರ್ಡ್‌ನ್ನು ನೀಡಿರುವ ಹಣಕಾಸು ಸಂಸ್ಥೆಯೊಂದಿಗೆ ಮುಂದಿನ ಉಲ್ಲೇಖ ಮತ್ತು ಸಂವಹನಕ್ಕಾಗಿ ಇದನ್ನು ನೋಟ್ ಮಾಡಿಕೊಳ್ಳಿ.

8. ಟಿಕೆಟ್ ನಂ.ಪಡೆದುಕೊಂಡ ನಂತರ ಹೊಸ ಎಟಿಎಂ ಕಾರ್ಡ್ ಪಡೆಯಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಬ್ಯಾಂಕ್ ಅಧಿಕಾರಿಗಳು ಹೊಸ ಎಟಿಎಂ ಕಾರ್ಡ್‌ನ್ನು ನಿಮ್ಮ ಕೈಗೆ ನೀಡಬಹುದು ಮತ್ತು ಒಂದೆರಡು ದಿನಗಳಲ್ಲಿ ಅದು ಸಕ್ರಿಯಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News