ವಲಸಿಗರ ಮಕ್ಕಳ ಪೌರತ್ವ ಹಕ್ಕು ರದ್ದಿಗೆ ಸರಕಾರಿ ಆದೇಶ ಸಾಕು: ಟ್ರಂಪ್
ವಾಶಿಂಗ್ಟನ್, ನ. 1: ಅಮೆರಿಕದಲ್ಲಿ ಹುಟ್ಟುವ ವಲಸಿಗರ ಮಕ್ಕಳಿಗೆ ಹುಟ್ಟಿನಿಂದ ಬರುವ ಅಮೆರಿಕ ಪೌರತ್ವದ ಹಕ್ಕನ್ನು ರದ್ದುಪಡಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾದ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸರಕಾರಿ ಆದೇಶವೊಂದರ ಮೂಲಕ ಇದನ್ನು ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ಹುಟ್ಟುವ ಅಮೆರಿಕೇತರರ ಮಕ್ಕಳು ಸಹಜವಾಗಿ ಅಮೆರಿಕ ಪೌರತ್ವವನ್ನು ಪಡೆಯುವುದನ್ನು ಸರಕಾರಿ ಆದೇಶವೊಂದರ ಮೂಲಕ ನಿಲ್ಲಿಸುವ ಇಂಗಿತವನ್ನು ಟ್ರಂಪ್ ಮಂಗಳವಾರ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಹುಟ್ಟಿನಿಂದ ಬರುವ ಪೌರತ್ವ ಕೊನೆಗೊಳ್ಳಲೇ ಬೇಕು ಎನ್ನುವುದನ್ನು ಅವರು ಸ್ಪಷ್ಟಮಾತುಗಳಲ್ಲಿ ಹೇಳಿದ್ದಾರೆ.
‘‘ಹುಟ್ಟಿನಿಂದ ಬರುವ ಪೌರತ್ವ ಅತ್ಯಂತ ಮಹತ್ವದ ವಿಷಯವಾಗಿದೆ. ನನ್ನ ಅಭಿಪ್ರಾಯದ ಪ್ರಕಾರ, ಅದು ಜನರು ಭಾವಿಸಿರುವುದಕ್ಕಿಂತ ತುಂಬಾ ಕಡಿಮೆ ಜಟಿಲವಾಗಿದೆ. ಜನರು ಏನೆಲ್ಲ ಮಾತನಾಡುತ್ತಿದ್ದಾರೋ ಆ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿಲ್ಲ ಎನ್ನುವುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’’ ಎಂದು ಶ್ವೇತಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
‘‘ಹುಟ್ಟಿನಿಂದ ಬರುವ ಪೌರತ್ವವನ್ನು ರದ್ದುಪಡಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿಲ್ಲ. ಕಾಂಗ್ರೆಸ್‌ನಲ್ಲಿ ಸರಳ ಬಹುಮತ ಸಿಕ್ಕಿದರೆ ಸಾಕು. ಅಷ್ಟೇ ಅಲ್ಲ, ಸರಕಾರಿ ಆದೇಶವೊಂದರ ಮೂಲಕವೂ ಇದನ್ನು ಮಾಡಬಹುದಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಕೆಲವು ಅತ್ಯಂತ ಪ್ರತಿಭಾವಂತ ಕಾನೂನು ಪಂಡಿತರೊಂದಿಗೆ ಸಮಾಲೋಚಿಸಿದ ಬಳಿಕ ನಾನು ಈ ಮಾತನ್ನು ಹೇಳುತ್ತಿದ್ದೇನೆ’’ ಎಂದರು.