ಬಾನೆತ್ತರದ ಪಟೇಲ್ ವ್ಯಕ್ತಿತ್ವವನ್ನು 182 ಮೀಟರ್‌ಗೆ ಇಳಿಸಿದ ಪ್ರಧಾನಿ

Update: 2018-11-02 03:43 GMT

ಸರ್ದಾರ್ ವಲ್ಲಭ ಭಾಯ್ ಪಟೇಲ್ ಸ್ವಾತಂತ್ರ ಪೂರ್ವದಲ್ಲೂ, ಸ್ವಾತಂತ್ರಾನಂತರವೂ ದೇಶಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾದುದು. ಗಾಂಧೀಜಿಗೆ ಆಪ್ತರಾಗಿದ್ದುಕೊಂಡು ಸ್ವಾತಂತ್ರಚಳವಳಿಯಲ್ಲಿ ತೊಡಗಿದವರು. ಸ್ವಾತಂತ್ರಾನಂತರವೂ ಅವರು ಭಾರತವನ್ನು ಕಟ್ಟಲು ಜವಾಹರಲಾಲ್ ನೆಹರೂ ಅವರಿಗೆ ಹೆಗಲು ಕೊಟ್ಟು ನಿಂತರು. ಭಾರತದ ಮೊತ್ತ ಮೊದಲ ಉಪ ಪ್ರಧಾನಿಯೂ, ಗೃಹ ಸಚಿವರೂ ಆಗಿದ್ದ ಪಟೇಲ್, ನೆಹರೂ ಅವರ ಮಾರ್ಗದರ್ಶನದಲ್ಲಿ ಬಿಡಿಬಿಡಿಯಾಗಿದ್ದ ಪ್ರಾಂತಗಳನ್ನು ಒಂದಾಗಿಸಿದವರು.

ಮೈಸೂರು ಸೇರಿದಂತೆ ದೇಶಾದ್ಯಂತ ಸಣ್ಣ ಪುಟ್ಟ ಅರಸರು ಭಾರತದ ಸತ್ತೆಯ ಅಡಿಯಲ್ಲಿ ಸೇರಲು ಹಿಂಜರಿದಾಗ ಅವರ ಮನವೊಲಿಸಿದರು. ಅಗತ್ಯ ಬಿದ್ದಾಗ ಸೇನೆಯನ್ನೂ ಬಳಸಿದರು. ಒಂದು ಸಂಯುಕ್ತ ದೇಶವನ್ನು ಕಟ್ಟುವುದೆಂದರೆ, ಬರೇ ಭೌಗೋಳಿಕವಾಗಿ ಅವುಗಳನ್ನು ತನ್ನದಾಗಿಸುವುದು ಎಂದು ಅವರು ಭಾವಿಸಿರಲಿಲ್ಲ. ಮಾನಸಿಕವಾಗಿ ಅವರನ್ನು ನಮ್ಮವರನ್ನಾಗಿಸಿಕೊಳ್ಳದೇ, ಆ ನೆಲವನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಕಟ್ಟ ಕಡೆಯವರೆಗೂ ಅವರು ನಂಬಿದ್ದರು. ಆದುದರಿಂದಲೇ, ವಿವಿಧ ಪ್ರಾಂತಗಳು ದೇಶದೊಳಗೆ ವಿಲೀನಗೊಂಡಾಗಲೂ, ಆ ನೆಲದ ಸಾಂಸ್ಕೃತಿಕ ಅಸ್ಮಿತೆಯ ಮೇಲೆ ಎಂದಿಗೂ ಹಸ್ತಕ್ಷೇಪ ಮಾಡಲು ಹೊಗಲಿಲ್ಲ. ಆಯಾ ರಾಜ್ಯಗಳ ಭಾಷೆಗಳೂ ಸೇರಿದಂತೆ ಅವುಗಳ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಅವಕಾಶ ನೀಡಿದರು. ಇದೇ ಸಂದರ್ಭದಲ್ಲಿ ದೇಶದ ಸಮಗ್ರತೆಗೆ ಭಂಗವುಂಟು ಮಾಡಿದ ಸಂಘಪರಿವಾರದ ವಿರುದ್ಧ ನಿಷೇಧ ಹೇರಿದವರೂ ಪಟೇಲರೇ ಆಗಿದ್ದರು. ಆಗಲೂ ಅವರ ಮನದಲ್ಲಿದ್ದುದು ದೇಶದ ‘ಏಕತೆ’ಯೇ ಆಗಿತ್ತು. ಗಾಂಧೀಜಿಯ ಕೊಲೆ ಯನ್ನು ಆರೆಸ್ಸೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದಾಗ ಅತಿ ನೊಂದವರು ಪಟೇಲರೇ ಆಗಿದ್ದಾರೆ. ‘‘ಆರೆಸ್ಸೆಸ್ ದೇಶಕ್ಕೆ ಹೇಗೆ ಆತಂಕಕಾರಿಯಾಗಿದೆ’’ ಎನ್ನುವುದನ್ನು ಗೋಳ್ವಾಲ್ಕರ್ ಅವರಿಗೆ ಬರೆದ ಪತ್ರದಲ್ಲಿಯೂ ಅವರು ಹಂಚಿಕೊಂಡಿದ್ದರು. ಬಳಿಕ, ಇದೇ ಆರೆಸ್ಸೆಸ್ ಮುಖಂಡರು ‘ನಾವೆಂದೂ ರಾಜಕೀಯ ಚಟುವಟಿಕೆಗಳನ್ನು ನಡೆಸುವುದಿಲ್ಲ, ಸಾಂಸ್ಕೃತಿಕವಾಗಿಯಷ್ಟೇ ಕೆಲಸ ಮಾಡುತ್ತೇವೆ’’ ಎಂದು ಪಟೇಲರಿಗೆ ಬರೆದುಕೊಟ್ಟು, ನಿಷೇಧವನ್ನು ಹಿಂದೆಗೆಸಿದ್ದರು. ಆದರೆ ಬಳಿಕ ಕೊಟ್ಟ ಮಾತನ್ನು ಮುರಿದು ಪಟೇಲರಿಗೆ ದ್ರೋಹವೆಸಗಿದರು. ಸ್ವಾತಂತ್ರಾನಂತರ ಹೆಚ್ಚು ಸಮಯ ಜೀವಿಸದಿದ್ದರೂ, ಇರುವ ಅವಧಿಯಲ್ಲಿ ದೇಶದ ಏಕತೆಗಾಗಿ ಅವರು ಕೊಟ್ಟ ಕೊಡುಗೆ ಅಪಾರವಾದುದು. ಈ ಎಲ್ಲ ಕಾರಣಕ್ಕಾಗಿ ಪಟೇಲರನ್ನು ವರ್ಷಕ್ಕೊಂದು ಬಾರಿಯಲ್ಲ, ಪ್ರತಿದಿನವೂ ಸ್ಮರಿಸಬೇಕಾದುದು ಭಾರತೀಯರ ಕರ್ತವ್ಯವಾಗಿದೆ.

ಈ ದೇಶದ ಏಕತೆಯನ್ನು ವಿಭಜಿಸುವ ಶಕ್ತಿಗಳನ್ನು ಗಟ್ಟಿಯಾಗಿ ಪ್ರತಿರೋಧಿಸುವುದೇ ಪಟೇಲರನ್ನು ಸ್ಮರಿಸುವ ಅತ್ಯುತ್ತಮ ಮಾರ್ಗವಾಗಿದೆ. ಎಲ್ಲ ಧರ್ಮ, ಜಾತಿ, ವರ್ಗಗಳನ್ನು ಮನವೊಲಿಸಿ ದೇಶವನ್ನು ಪಟೇಲರು ಒಂದಾಗಿಸಿದರೆ, ಇಂದು ಅದೇ ಧರ್ಮ, ಜಾತಿ, ವರ್ಗಗಳ ಹೆಸರಲ್ಲಿ ದೇಶವನ್ನು ವಿಭಜಿಸುವ ಕೆಲಸಕ್ಕೆ ಕೆಲವು ಶಕ್ತಿಗಳು ಇಳಿದಿವೆ. ದೇಶದಲ್ಲಿ ನಿಧಾನಕ್ಕೆ ಉತ್ತರ ಭಾರತ-ದಕ್ಷಿಣ ಭಾರತ ಎನ್ನುವ ವಿಭಜನೆ ವಿಸ್ತಾರವಾಗುತ್ತಿದೆ. ಉತ್ತರ ಭಾರತೀಯರು ದಕ್ಷಿಣ ಭಾರತೀಯರ ಮೇಲೆ ಸಾಂಸ್ಕೃತಿಕ ದಾಳಿಗಳನ್ನು ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯೂ ದಕ್ಷಿಣ ಭಾರತೀಯರಲ್ಲಿ ಅಸಮಾಧಾನ ಹುಟ್ಟಿಸಿದೆ. ಇವುಗಳ ಜೊತೆಗೆ, ಪಟೇಲರು ನಿಷೇಧಿಸಿದ ಕೋಮುಶಕ್ತಿಗಳು ಮುಖ್ಯವಾಗಿ ಆರೆಸ್ಸೆಸ್ ಸಂಘಟನೆ ವಿಜೃಂಭಿಸುತ್ತಿದೆ. ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವಲ್ಲೂ ಅದು ಯಶಸ್ವಿಯಾಗಿದೆ. ಪಟೇಲರಿದ್ದಿದ್ದರೆ ಖಂಡಿತವಾಗಿಯೂ ಇದನ್ನು ಸಹಿಸುತ್ತಿರಲಿಲ್ಲ ಮಾತ್ರವಲ್ಲ, ಮತ್ತೊಮ್ಮೆ ಆರೆಸ್ಸೆಸ್‌ಗೆ ನಿಷೇಧವನ್ನು ಹೇರುತ್ತಿದ್ದರು. ಬೀದಿಯಲ್ಲಿ ಬಜರಂಗದಳಗಳು, ಸಂಘಪರಿವಾರದ ಗೂಂಡಾಗಳ ಕೈಗೆ ಆಡಳಿತವನ್ನು ಕೊಡುವುದನ್ನು ಅವರೆಂದೂ ಇಷ್ಟ ಪಡುತ್ತಿರಲಿಲ್ಲ. ಪಟೇಲರು ಯಾವುದನ್ನೆಲ್ಲ ವಿರೋಧಿಸಿದರೋ, ಅವುಗಳೇ ಮೋದಿಯ ಭಾರತದಲ್ಲಿ ಅಟ್ಟಹಾಸಗೈಯುತ್ತಿವೆೆ.

ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 3000 ಕೋಟಿ ರೂಪಾಯಿ ವೆಚ್ಚದಲ್ಲಿ 182 ಮೀಟರ್ ಎತ್ತರದ ಪಟೇಲ್ ಪ್ರತಿಮೆಯೊಂದನ್ನು ನಿರ್ಮಿಸಿ ಅದಕ್ಕೆ ‘ಏಕತಾ ಪ್ರತಿಮೆ’ ಎಂಬ ಹೆಸರನ್ನು ಕೊಟ್ಟು ಉದ್ಘಾಟಿಸಿದ್ದಾರೆ. ಪಟೇಲರ ಚಿಂತನೆ, ವ್ಯಕ್ತಿತ್ವ, ಕಾಳಜಿ, ದೂರದೃಷ್ಟಿಯನ್ನೆಲ್ಲ ಕಾಲಕಸವಾಗಿ ಮಾಡಿ, ಅವುಗಳ ಮೇಲೆ ಪ್ರತಿಮೆಯನ್ನು ನಿಲ್ಲಿಸಿ ಪಟೇಲರನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಹವಣಿಸಿದ್ದಾರೆ.

  ಜವಾಹರಲಾಲ್ ನೆಹರೂ ಮತ್ತು ಪಟೇಲರು ಈ ದೇಶವನ್ನು ಉದ್ಧರಿಸುವ ಕನಸು ಕಂಡಿದ್ದರು. ಬೃಹತ್ ವಿಶ್ವವಿದ್ಯಾನಿಲಯಗಳು, ವಿಜ್ಞಾನ ಸಂಸ್ಥೆಗಳು, ಬೃಹತ್ ಅಣೆಕಟ್ಟುಗಳು, ಕೈಗಾರಿಕೆಗಳು ಈ ನಾಯಕರ ಕನಸುಗಳಾಗಿದ್ದವು. ಇಂದು ಈ ದೇಶ ವಿಶ್ವದಲ್ಲಿ ಈ ಮಟ್ಟಿಗೆ ತಲೆಯೆತ್ತಿ ನಿಂತಿದ್ದರೆ ನೆಹರೂ, ಪಟೇಲರ ದೂರದೃಷ್ಟಿಯೇ ಕಾರಣ. ಆದರೆ ಈ ಎಲ್ಲ ನಾಯಕರ ಕನಸುಗಳನ್ನು ಸಮಾಧಿ ಮಾಡುವಂತೆ, ಇಡೀ ದೇಶ ಆರ್ಥಿಕವಾಗಿ ತತ್ತರಿಸಿ ಕೂತಿರುವಾಗ ಮೋದಿ ನೇತೃತ್ವದ ಸರಕಾರ 3000 ಕೋಟಿ ರೂಪಾಯಿಗಳ ಪ್ರತಿಮೆಯೊಂದನ್ನು ನಿರ್ಮಿಸಿ, ಈ ದೇಶಕ್ಕೆ ಅದೇನೋ ದೊಡ್ಡ ಕೊಡುಗೆಯನ್ನು ಕೊಡುತ್ತಿದ್ದೇನೆ ಎಂಬಂತೆ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಹೊರಡಿಸುತ್ತಿದ್ದಾರೆ. ನೋಟು ನಿಷೇಧದ ಬಳಿಕ ಭಾರತದ ಆರ್ಥಿಕತೆ ಕುಸಿದಿದೆ. ಗ್ರಾಮೀಣ ಉದ್ದಿಮೆಗಳು ನಾಶವಾಗಿವೆ. ರೂಪಾಯಿ ದಿನದಿಂದ ದಿನಕ್ಕೆ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ದೇಶದ ವಿದೇಶಿ ಸಾಲ ಹೆಚ್ಚುತ್ತಿದೆ. ಇಂತಹ ಹೊತ್ತಿನಲ್ಲಿ 3000 ಕೋಟಿ ರೂಪಾಯಿಯನ್ನು ಪ್ರತಿಮೆಗೆ ಸುರಿಯುವಷ್ಟು ಭಾರತ ಶಕ್ತವಾಗಿದೆಯೇ? ಈ ದೇಶವನ್ನು ಒಡೆಯುವ ಶಕ್ತಿಗಳನ್ನು ಬಗಲಲ್ಲೇ ಕಟ್ಟಿಕೊಂಡು ಆಡಳಿತ ನಡೆಸುತ್ತಿರುವ ಮೋದಿ ಸರಕಾರಕ್ಕೆ, ಪಟೇಲರ ಪ್ರತಿಮೆಯಿಂದ ಏಕತೆ ಮೂಡಿಸಲು ನಿಜಕ್ಕೂ ಸಾಧ್ಯವೇ? ಅಥವಾ ಈ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಪಟೇಲರ ಏಕತೆಯನ್ನು ಆರೆಸ್ಸೆಸ್ ಮತ್ತು ಮೋದಿ ಪರಿವಾರ ಅಣಕಿಸಲು ಹೊರಟಿದೆಯೇ?

ಪಟೇಲರ ಪ್ರತಿಮೆಗೆ ವ್ಯಯಿಸಿದ ಹಣದಿಂದ ಎರಡು ಐಐಟಿ ಕ್ಯಾಂಪಸ್ ಅಥವಾ ಐದು ಐಐಎಂ ಕ್ಯಾಂಪಸ್ ನಿರ್ಮಿಸಲು ಸಾಕಾಗುತ್ತಿತ್ತು. ಅಥವಾ ಇಸ್ರೋ ಸಂಸ್ಥೆ ಈ ಹಣದಿಂದ ಆರು ಬಾರಿ ಮಂಗಳಯಾನ ಮಾಡಿ ಬರಬಹುದಿತ್ತು. ಕರ್ನಾಟಕದ ರೈತರ ಸಾಲ ಮನ್ನಾ ಮಾಡಿ ಎಂದು ಕೇಂದ್ರಕ್ಕೆ ಹಲವು ವರ್ಷಗಳಿಂದ ಮೊರೆಇಡಲಾಗುತ್ತಿದೆ. ಕೇಂದ್ರ ನಿರಾಕರಿಸುತ್ತಾ ಬರುತ್ತಿದೆ. ವಿಪರ್ಯಾಸವೆಂದರೆ, ಪ್ರತಿಮೆಗೆ ವ್ಯಯಿಸಿದ ಹಣದಿಂದ ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಿತ್ತು. ಇದರ ಜೊತೆ ಜೊತೆಗೆ 162 ಸಣ್ಣ ನೀರಾವರಿ ಯೋಜನೆಗಳ ದುರಸ್ತಿ, ಆಧುನೀಕರಣ ಮತ್ತು 425 ಚೆಕ್‌ಡ್ಯಾಂಗಳನ್ನು ನಿರ್ಮಿಸಬಹುದಿತ್ತು. ಇವೆಲ್ಲ ಯೋಜನೆಗಳಿಗೆ ಸರ್ದಾರ್ ಪಟೇಲರ ಹೆಸರನ್ನೇ ಇಡಬಹುದಿತ್ತು. ಅವರ ಸ್ಮರಣೆಯೂ, ದೇಶದ ಅಭಿವೃದ್ಧಿಯೂ ಜೊತೆ ಜೊತೆಗೇ ಸಾಗುತ್ತಿತ್ತು. ರೈತರಿಗೆ ಸಹಾಯ ಮಾಡುವುದು ಪಕ್ಕಕ್ಕಿರಲಿ, ಪ್ರತಿಮೆಯ ಸ್ಥಾಪನೆಯ ಮೂಲಕ 75 ಸಾವಿರ ಬುಡಕಟ್ಟು ಜನರ ಬದುಕಿಗೆ ಧಕ್ಕೆ ತಂದಿದ್ದಾರೆ. ಇದು ಪಟೇಲರ ವ್ಯಕ್ತಿತ್ವಕ್ಕೆ ಮಾಡಿದ ಅಪಮಾನವಲ್ಲವೇ? ತನ್ನ ಹೆಸರಿನಲ್ಲಿ ಈ ದೇಶದ ರೈತರು ತೊಂದರೆ ಅನುಭವಿಸಿದ್ದಾರೆ ಎನ್ನುವುದನ್ನು ಪಟೇಲರ ಅತ್ಮ ಸಹಿಸಿಕೊಳ್ಳಬಹುದೇ?

ಪ್ರತಿಮೆಯ ನಿರ್ಮಾಣದಿಂದ ಗುಜರಾತ್‌ನ ನರ್ಮದಾ ಜಿಲ್ಲೆಯ ಸುಮಾರು 72 ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ತೊಂದರೆಯಾಗಿದೆ. 32 ಗ್ರಾಮಗಳಿಗೆ ತೀವ್ರ ಹಾನಿಯಾಗಿದೆ. 19 ಗ್ರಾಮಗಳಲ್ಲಿ ಪುನರ್ವಸತಿ ಕಾರ್ಯ ಪೂರ್ಣಗೊಂಡಿಲ್ಲ. ಅವರೆಲ್ಲರ ಪ್ರತಿಭಟನೆ ಆಕ್ರೋಶಗಳ ನಡುವೆ ಪ್ರತಿಮೆ ಉದ್ಘಾಟನೆಗೊಂಡಿದೆ. ಅಂದರೆ ಸ್ಥಳೀಯ ಜನರನ್ನೇ ವಿಭಜಿಸಿದ ಈ ಪ್ರತಿಮೆ, ದೇಶವನ್ನು ಒಂದುಗೂಡಿಸುವುದುಂಟೆ? ಅದೇ ಪರಿಸರದಲ್ಲಿ ಕಬ್ಬು ಬೆಳೆಯುವ ರೈತರಿಗೆ ಕಾರ್ಖಾನೆಗಳು ನೂರಾರು ಕೋಟಿ ರೂಪಾಯಿ ಬಾಕಿಯುಳಿಸಿದೆ. ರೈತರ ಅಳಲನ್ನು ಕೇಳುವವರೇ ಇಲ್ಲವಾಗಿದ್ದಾರೆ. ಕನಿಷ್ಠ ನರ್ಮದಾ ನದಿ ತೀರದ ರೈತರ ನೀರಾವರಿಗಾದರೂ ಈ ಹಣವನ್ನು ಬಳಸಬಹುದಿತ್ತು ಎನ್ನುವುದು ತಜ್ಞರ ಅಭಿಮತವಾಗಿದೆ.

ಈ ಪ್ರತಿಮೆಗೆ ವೆಚ್ಚವಾಗಿರುವ ಹಣವನ್ನು ಪ್ರವಾಸೋದ್ಯಮದ ಮೂಲಕ ಮರಳಿ ಗಳಿಸುತ್ತೇವೆ ಎಂದು ಸರಕಾರ ಹೇಳುತ್ತಿದೆ. ಪ್ರತಿಮೆ ಉದ್ಘಾಟನೆ ಮಾಡಿದಾಕ್ಷಣ ಜನರು ಅದನ್ನು ನೋಡಲು ನೆರೆಯುತ್ತಾರೆ ಎಂಬಂತಿದೆ ಸರಕಾರದ ಹೇಳಿಕೆ. ಬರೇ ಪ್ರತಿಮೆಯ ಮೂಲಕ ಪ್ರವಾಸೋದ್ಯಮಗಳನ್ನು ಸೃಷ್ಟಿಸಿದ ಯಾವ ದೇಶಗಳೂ ಇಲ್ಲ. ಅದು ಸಾಧ್ಯವಾಗಿದ್ದಿದ್ದರೆ ವಿಶ್ವದಲ್ಲಿ ಬೃಹತ್ ಪ್ರತಿಮೆಗಳ ಸಾಲುಗಳೇ ನೆರೆದು ಬಿಡುತ್ತಿದ್ದವು. ತಜ್ಞರು ಹೇಳುವಂತೆ, ಪ್ರತಿಮೆ ಇರುವ ಸ್ಥಳ ಯಾವ ರೀತಿಯಲ್ಲೂ ಪ್ರವಾಸೋದ್ಯಮಕ್ಕೆ ಯೋಗ್ಯವಾಗಿಲ್ಲ. ವಿಶ್ವದಲ್ಲೇ ಅತಿ ಎತ್ತರದ ಬುದ್ಧನ ಪ್ರತಿಮೆ ಚೀನಾದಲ್ಲಿದೆ. ಆದರೆ ಚೀನಾದ ಪ್ರಮುಖ ಪ್ರವಾಸೋದ್ಯಮ ಪ್ರದೇಶಗಳ ಪಟ್ಟಿಯಲ್ಲಿ ಆ ಪ್ರತಿಮೆಯ ಹೆಸರೇ ಇಲ್ಲ. ಸರಿ. ಪ್ರವಾಸಿಗರು ಆಗಮಿಸುತ್ತಾರೆ ಎಂದೇ ಇಟ್ಟುಕೊಳ್ಳೋಣ. ಒಂದು ವೇಳೆ ತಾಜ್‌ಮಹಲ್‌ಗೆ ಭೇಟಿಕೊಟ್ಟಷ್ಟೇ ಜನರು ಪ್ರತಿದಿನ ಭೇಟಿ ಕೊಟ್ಟರೂ, ವೆಚ್ಚ ಮಾಡಿದ ಹಣ ವಸೂಲಾಗಲು ಸುಮಾರು 150 ವರ್ಷಗಳು ಬೇಕು. ನಿಜಕ್ಕೂ ಈ ಪ್ರತಿಮೆಯಿಂದ ಲಾಭವಾಗಿದ್ದು ಚೀನಾಕ್ಕೆ ಮಾತ್ರ. ಯಾಕೆಂದರೆ ಅಲ್ಲಿನ ಒಂದಿಷ್ಟು ಯುವಕರಿಗೆ ಕೆಲ ಕಾಲ ಈ ಪ್ರತಿಮೆಯ ದೆಸೆಯಿಂದ ಉದ್ಯೋಗ ದೊರಕಿತು. ಉಳಿದಂತೆ, ಈ ಪ್ರತಿಮೆ ಪಟೇಲರ ಪಾಲಿಗೆ ಶಾಶ್ವತ ಕಳಂಕ. ಅವರ ಆಕಾಶದೆತ್ತರದ ವ್ಯಕ್ತಿತ್ವವನ್ನು 182 ಮೀಟರ್‌ಗೆ ಇಳಿಸಿದ ಹೆಗ್ಗಳಿಕೆಯನ್ನು ನರೇಂದ್ರ ಮೋದಿ ತನ್ನದಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News