ಈ ಊರುಗಳಲ್ಲಿ ದೀಪಾವಳಿಯ ಮುಂಜಾನೆ ಆರಂಭವಾಗುವುದೇ ಮಟನ್ ಕರಿ ಜೊತೆ !

Update: 2018-11-03 06:54 GMT

ಚೆನ್ನೈ, ನ. 3: ದೀಪಾವಳಿಯ ದಿನ ದೇಶದ ಹೆಚ್ಚಿನೆಡೆ ಜನರು ಸಸ್ಯಾಹಾರವನ್ನೇ ಸೇವಿಸುವ ಪದ್ಧತಿಯನ್ನೇ ರೂಢಿಸಿಕೊಂಡಿದ್ದರೆ ದಕ್ಷಿಣದ ರಾಜ್ಯವಾದ ತಮಿಳುನಾಡಿನ ಚೆನ್ನೈ, ಪಳನಿ, ಮಧುರೈ, ಕೊಯಂಬತ್ತೂರು ಮುಂತಾದೆಡೆ ಈ ಹಬ್ಬದ ದಿನ ತೈಲಾಭ್ಯಂಜನದ ನಂತರ ಇಡ್ಲಿ ಮತ್ತು ಮಟನ್ ಕರಿ ಬೆಳಗ್ಗಿನ ಉಪಾಹಾರವಾಗಿದೆ ಎಂಬುದು ಅಚ್ಚರಿಯ ವಿಚಾರವಲ್ಲವೇ ?

''ನಮ್ಮಲ್ಲಿ ಮಾಂಸದಂಗಡಿಗಳು ಆ ದಿನ ಬೆಳಗ್ಗೆ 5 ಗಂಟೆಗೇ ತೆರೆದುಕೊಳ್ಳುತ್ತವೆ'' ಎಂದು ಮೂಲತಃ ಪಳನಿಯವರಾದ ಹಾಗೂ ಈಗ ಚೆನ್ನೈಯಲ್ಲಿ ನೆಲೆಸಿರುವ ರಮಾದೇವಿ ರಾಮದಾಸ್ ಹೇಳುತ್ತಾರೆ.

''ನಮ್ಮ ಶಾಲಾ ದಿನಗಳಲ್ಲಿ ದೀಪಾವಳಿ ದಿನ ಬೆಳಗ್ಗೆ 4.30ಕ್ಕೇ ಎದ್ದು ತೈಲಾಭ್ಯಂಜನದ ನಂತರ 7 ಗಂಟೆಯೊಳಗಾಗಿ ಇಡ್ಲಿ ಮತ್ತು ಮಾಂಸದ ಪದಾರ್ಥ ಸೇವಿಸಿ ನಂತರ ಪಟಾಕಿ ಸಿಡಿಸಲು ಓಡುತ್ತಿದ್ದೆವು'' ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಪಳನಿ, ಮಧುರೈ ಮತ್ತು ಕೊಯಂಬತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೀಪಾವಳಿಯಂದು ಮಾಂಸ ಪದಾರ್ಥ ಇರಲೇಬೇಕು. ಪ್ರತಿ ದಿನ ಎರಡು ಇಡ್ಲಿ ತಿನ್ನುವವರು ಆ ದಿನ ಮಟನ್ ಕರಿಯೊಂದಿಗೆ ನಾಲ್ಕು ಇಡ್ಲಿ ಸೇವಿಸುತ್ತಾರೆ ಎಂದು ಅವರು ಹೇಳುತ್ತಾರೆ.

ಚೆನ್ನೈಯಲ್ಲಿ ದೀಪಾವಳಿಯಂದು ಮಾಂಸ ಪದಾರ್ಥದೊಂದಿಗೆ ದೋಸೆಯನ್ನು ಜನ ಉಪಾಹಾರಕ್ಕೆ ಸವಿಯುತ್ತಾರೆ, ಮಧುರೈ ತಿರುಚ್ಚಿ ಪ್ರದೇಶದಲ್ಲೂ ದೀಪಾವಳಿಯಂದು ಇದೇ ಉಪಾಹಾರವಾಗಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ವಿವರಿಸುತ್ತಾರೆ. ಕೆಲವರು ಇತ್ತೀಚಿಗಿನ ವರ್ಷಗಳಲ್ಲಿ ಪೂರಿ ಮತ್ತು ಮಟನ್ ಕರಿ ಸೇವಿಸುತ್ತಾರೆ.

ದೀಪಾವಳಿಯಂದು ಇಡ್ಲಿ ಮತ್ತು ಮಟನ್ ಕರಿ ಸೇವಿಸುವ ಪದ್ಧತಿ ಯಾವಾಗ ಆರಂಭವಾಯಿತು ಎಂದು ಹೆಚ್ಚಿನವರಿಗೆ ತಿಳಿದಿಲ್ಲ, ಆದರೆ ತಮಗೆ ನೆನಪಿರು ವಷ್ಟು ಸಮಯದ ಹಿಂದಿನಿಂದ ದೀಪಾವಳಿಗೆ ಇದೇ ಉಪಾಹಾರವಾಗಿದೆ ಎಂದು ಹಲವರು ಹೇಳುತ್ತಾರೆ.

ಇಡ್ಲಿ ಮತ್ತು ಮಟನ್ ಕರಿ ಹೊರತಾಗಿ ಸಿಹಿ ತಿಂಡಿ ಕೇಸರಿ ಅಥವಾ ಸುಯ್ಯಮ್ ಹಾಗೂ ದಪ್ಪ ತೆಂಗಿನ ಕಾಯಿ ಚಟ್ನಿಯನ್ನೂ ಜನ ದೀಪಾವಳಿಯ ಮುಂಜಾನೆ ಸವಿಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News