ಭಡ್ತಿ ಹೊಂದದ ಸೇನಾಧಿಕಾರಿಗಳಿಗೆ ಪ್ರತ್ಯೇಕ ಮೌಲ್ಯಮಾಪನ ಅರ್ಜಿ: ಆಕ್ರೋಶ

Update: 2018-11-03 16:24 GMT

ಹೊಸದಿಲ್ಲಿ,ನ.3: ಭಡ್ತಿ ಹೊಂದದಿರುವ ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಅಧಿಕಾರಿಗಳಿಗೆ ಪ್ರತ್ಯೇಕ ಮೌಲ್ಯಮಾಪನ ಅರ್ಜಿ ನೀಡುವ ಬಗ್ಗೆ ಭಾರತೀಯ ಸೇನೆಯ ಪ್ರಸ್ತಾಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸೇನಾಧಿಕಾರಿಗಳು, ಇದು ತಾರತಮ್ಯ ಮತ್ತು ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಕ

ಳೆದ ತಿಂಗಳು ನಡೆದ ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾರತೀಯ ಸೇನೆಯ ಸೂಚನ ನಿರ್ದೇಶನಾಲಯ ಪ್ರಸ್ತಾಪಿಸಿದ್ದ ಈ ಸಲಹೆಯು, ಹುದ್ದೆಯ ಕೊರತೆ ಮುಂತಾದ ತಮ್ಮ ನಿಯಂತ್ರಣದಲ್ಲಿರದ ಕಾರಣಗಳಿಂದ ಭಡ್ತಿ ವಂಚಿತರಾಗಿರುವ ಅಧಿಕಾರಿಗಳ ಮೇಲೆ ಹೇರಲಾದ ಎರಡನೇ ಶಿಕ್ಷೆಯಾಗಿದೆ ಎಂದು ವಿಮರ್ಶಕರು ದೂರಿದ್ದಾರೆ. ಭಡ್ತಿ ಹೊಂದದ ಅಧಿಕಾರಿಗಳಿಗೆ ನೀಡಲು ಉದ್ದೇಶಿಸಲಾಗಿರುವ ಪ್ರತ್ಯೇಕ ರಹಸ್ಯ ವರದಿ (ಸಿಆರ್) ಅರ್ಜಿಯ ಅಗತ್ಯತೆಯ ಬಗ್ಗೆ ಎಲ್ಲ ಸೇನಾ ಕಮಾಂಡ್‌ಗಳ ಮುಖ್ಯಕಚೇರಿಗಳು ನವೆಂಬರ್ 16ರ ಒಳಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಸೇನಾ ಕಾರ್ಯದರ್ಶಿ ವಿಭಾಗ ತಿಳಿಸಿದೆ. ಈವರೆಗೆ, ಮೇಜರ್‌ರಿಂದ ಲೆಫ್ಟಿನೆಂಟ್ ಕರ್ನಲ್‌ಗೆ ಮತ್ತು ಕರ್ನಲ್ ಪದವಿಗೆ ಭಡ್ತಿ ಹೊಂದುವ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ವೌಲ್ಯಮಾಪನಾ ಅರ್ಜಿ ಒಂದೇ ಆಗಿರುತ್ತಿತ್ತು. ಕರ್ನಲ್‌ನಿಂದ ಬ್ರಿಗೇಡಿಯರ್ ಹಂತಕ್ಕೆ ಬಡ್ತಿ ಹೊಂದುವ ವೇಳೆ ಮಾತ್ರ ಪ್ರತ್ಯೇಕ ಅರ್ಜಿಯನ್ನು ನೀಡಲಾಗುತ್ತಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಕ್ರಮವು ಸೇನೆಯ ಒಳಗೆ ಅಸಮಾಧಾನವನ್ನು ಉಂಟು ಮಾಡಿದ್ದು ಹಾಲಿ ಮತ್ತು ನಿವೃತ್ತ ಸೇನಾಧಿಕಾರಿಗಳು ಈ ಕ್ರಮವನ್ನು ಟೀಕಿಸಿದ್ದಾರೆ. ಈ ಕುರಿತು ಲೆ.ಕರ್ನಲ್ ಒಬ್ಬರು 10 ಕಾರ್ಪ್ಸ್ ಮುಖ್ಯಕಚೇರಿಗೆ ಬರೆದ ಪತ್ರದಲ್ಲಿ ಈ ನಡೆಯು ತಾರತಮ್ಯದಿಂದ ಕೂಡಿದೆ ಮತ್ತು ಅಕ್ರಮವಾಗಿದೆ ಎಂದು ದೂರಿದ್ದಾರೆ. ನ್ಯಾಯಾಲಯ ಕೂಡಾ ಒಬ್ಬ ಅಪರಾಧಿಗೆ ಒಂದು ತಪ್ಪಿಗೆ ಎರಡು ಬಾರಿ ಶಿಕ್ಷೆ ನೀಡುವುದಿಲ್ಲ. ಆದರೆ ಒಬ್ಬ ಸೇನಾಧಿಕಾರಿ ತನ್ನ ಅಸಾಮರ್ಥ್ಯದ ಕಾರಣದಿಂದಲ್ಲದೆ, ಕೇವಲ ಹುದ್ದೆ ಖಾಲಿಯಿಲ್ಲ ಎಂಬ ಕಾರಣಕ್ಕೆ ಭಡ್ತಿಯಿಂದ ವಂಚಿತನಾದಾಗ ಸದ್ಯ ಪ್ರಸ್ತಾಪಿಸಲಾಗಿರುವ ಕ್ರಮವು ಆತನನ್ನು ಹಲವು ಬಾರಿ ಶಿಕ್ಷೆಗೆ ಗುರಿ ಮಾಡಲಿದೆ ಎಂದು ಲೆ.ಕ. ಸಮಿರನ್ ರಾಯ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News