ಯುದ್ಧಪೀಡಿತ ಯೆಮೆನ್‌ನ ದುಸ್ಥಿತಿಗೆ ಕನ್ನಡಿ ಹಿಡಿದ ಬಾಲಕಿ ಅಮಲ್ ಇನ್ನಿಲ್ಲ

Update: 2018-11-03 17:53 GMT

ಲಂಡನ್,ನ.3: ಯುದ್ಧ ಪೀಡಿತ ಯೆಮೆನ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ 7 ವರ್ಷದ ಬಾಲಕಿ ಅಮಲ್ ಹುಸೇನ್‌ ಳ ಛಾಯಾಚಿತ್ರವು ಮಾಧ್ಯಮಗಳಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪ್ರಸಾರವಾದಾಗ ವಿಶ್ವದಾದ್ಯಂತ ಭಾರೀ ಆಕ್ರೋಶ ಹಾಗೂ ದುಃಖ ವ್ಯಕ್ತವಾಗಿತ್ತು. ಜೊತೆಗೆ ಆಕೆಗೆ ಎಲ್ಲೆಡೆಯಿಂದ ನೆರವಿನ ಕೊಡುಗೆ ಹರಿದುಬಂದಿತ್ತು. ತೀವ್ರವಾದ ಅಪೌಷ್ಟಿಕತೆಯಿಂದ ತುತ್ತಾಗಿದ್ದ ಆಕೆ ಗುರುವಾರ ಕೊನೆಯುಸಿರೆಳೆದಿದ್ದಾಳೆ.

ಸುಕ್ಕುಗಟ್ಟಿದ ಚರ್ಮದಲ್ಲಿ ಮೂಳೆಗಳು ಎದ್ದುಕಾಣುತ್ತಿದ್ದ ಅಮಲಾ ಹುಸೇನ್ ಶೂನ್ಯ ಆಗಸದತ್ತ ದಿಟ್ಟಿಸುತ್ತಿರುವ ಕರುಣಾಜನಕ ಛಾಯಾಚಿತ್ರವು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕೋಟ್ಯಂತರ ಮಂದಿ ಮಮ್ಮಲ ಮರುಗಿದ್ದರು.

ಆದರೆ ಆಕೆಗೆ ನೆರವು ದೊರೆತಾಗ ತುಂಬಾ ತಡವಾಗಿತ್ತು. ಅಮಲಾ ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಕೇವಲ ನಾಲ್ಕು ಮೈಲು ದೂರದಲ್ಲಿರುವ ನಿರಾಶ್ರಿತ ಶಿಬಿರವೊಂದರಲ್ಲಿ ಕೊನೆಯುಸಿರೆಳೆದಳೆಂದು ಆಕೆಯ ಕುಟುಂಬಿಕರು ತಿಳಿಸಿದ್ದಾರೆ.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಟಿಸಿದ ವರದಿಯ ಪ್ರಕಾರ ಅಮಲ್ ಗಂಭೀರವಾಗಿ ಅನಾರೋಗ್ಯಕ್ಕೀಡಾದಾಗ ಹೊರತಾಗಿಯೂ, ಹೊಸ ರೋಗಿಗಳಿಗೆ ಜಾಗ ಮಾಡಿಕೊಡುವುದಕ್ಕಾಗಿ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು ಎಂದು ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ಮಾಹ್ದಿ ಹೇಳಿದ್ದಾರೆ. ಆಕೆಯನ್ನು ಉತ್ತಮವಾದ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಾನು ಆಕೆ ತಾಯಿಗೆ ಸಲಹೆ ಮಾಡಿದ್ದಾಗಿಯೂ ಮಾಹ್ದಿ ಹೇಳಿದ್ದಾರೆ.

 ನ್ಯೂಯಾರ್ಕ್ ಟೈಮ್ಸ್‌ನ ಛಾಯಾಚಿತ್ರಗ್ರಾಹಕ ಟೈಲರ್ ಹಿಕ್ಸ್ ಅವರು ಯೆಮೆನ್‌ನ ಅಸ್ಲಾಮ್ ಪಟ್ಟಣದಲ್ಲಿರುವ ಸಂಚಾರಿ ಯುನಿಸೆಫ್ ಕ್ಲಿನಿಕ್‌ನಲ್ಲಿ ಅಮಲ್ ಹುಸೇನ್‌ಳ ಛಾಯಾಚಿತ್ರವನ್ನು ತೆಗೆದಿದ್ದರು.

ಮಧ್ಯಪ್ರಾಚ್ಯದ ರಾಷ್ಟ್ರವಾದ ಯೆಮೆನ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಭೀಕರ ಅಂತರ್ಯುದ್ಧದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಭೀಕರ ಬರ ಹಾಗೂ ಆಹಾರದ ಕೊರತೆಯಿಂದಾಗಿ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಸಾವಿನಂಚಿಗೆ ತಲುಪಿದ್ದಾರೆ. ಮುಂಬರುವ ತಿಂಗಳುಗಳಲ್ಲಿ 1.40 ಕೋಟಿಗೂ ಅಧಿಕ ಮಂದಿ ಯೆಮೆನ್ ನಾಗರಿಕರು ಬರದ ದವಡೆಗೆ ಸಿಲುಕಲಿದ್ದಾರೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗ್ಯುಟೆರಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News