ಎಚ್-1ಬಿ ವೀಸಾ ವಂಚನೆ: ಎನ್‌ಆರ್‌ಐ ಬಂಧನ
ವಾಶಿಂಗ್ಟನ್,ನ.3: ಎಚ್-1ಬಿ ವೀಸಾ ಹಾಗೂ ಮೇಲ್‌ವಂಚನೆಗಳನ್ನು ಎಸಗಿದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
46 ವರ್ಷ ವಯಸ್ಸಿನ ಕಿಶೋರ್ ಕುಮಾರ್ ಕವುರು ಎಂಬಾತ ಎಚ್-1ಬಿ ವೀಸಾ ಹಾಗೂ ಮೇಲ್ ವಂಚನೆ ಎಸಗಿದ ಆರೋಪಿಯಾಗಿದ್ದು, ಆತನನ್ನು ಶುಕ್ರವಾರ ಬಂಧಿಸಲಾಗಿದೆ ಹಾಗೂ ಮೆಜಿಸ್ಟ್ರೇಟ್ ನ್ಯಾಯಾಧೀಶೆ ಸೂಸಾನ್ ವಾನ್ ಕ್ಯುಲೆನ್ ಮುಂದೆ ಹಾಜರುಪಡಿಸಲಾಗಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಿಶೋರ್ ಕುಮಾರ್ ವಿರುದ್ಧ ವೀಸಾ ವಂಚನೆ ಹಾಗೂ ಮೇಲ್ ವಂಚನೆಗೆ ಸಂಬಂಧಿಸಿ ತಲಾ 10 ಆರೋಪಗಳನ್ನು ಹೊರಿಸಲಾಗಿದೆ. ಕಿಶೋರ್ ಕುಮಾರ್ ಕವುರು ತನ್ನ ಕನ್ಸಲ್ಟಿಂಗ್ ಕಂಪೆನಿಗಳಿಗೆ ವಿದೇಶಿ ಉದ್ಯೋಗಿಗಳನ್ನು ಅಕ್ರಮವಾಗಿ ನಿಯೋಜಿಸುವ ವ್ಯವಹಾರದಲ್ಲಿ ತೊಡಗಿದ್ದನೆಂದು ಆರೋಪಿಸಲಾಗಿದೆ.
ಒಂದು ವೇಳೆ ಕವುರು ವಿರುದ್ಧ ದೋಷಾರೋಪ ಸಾಬೀತಾದಲ್ಲಿ ಆತನಿಗೆ 10 ವರ್ಷಗಲ ವರೆಗೆ ಜೈಲು ಶಿಕ್ಷೆ ಹಾಗೂ ಗರಿಷ್ಠ 2.50 ಲಕ್ಷ ಡಾಲರ್ ದಂಡ ವಿಧಿಸಬಹುದಾಗಿದೆ.
ಕ್ಯಾಲಿಫೋರ್ನಿಯಾದ ಸನ್ವಿವಾಲೆ ನಗರದ ನಿವಾಸಿಯಾದ ಕಿಶೋರ್ ಕುಮಾರ್, ಸಾಂತಾ ಕ್ಲಾರಾ ಕೌಂಟಿಯಲ್ಲಿರುವ ಐಟಿ ಸಂಸ್ಥೆಗಳಿಗೆ ಸಿಬ್ಬಂದಿಗಳನ್ನು ಒದಗಿಸುವ ವ್ಯವಹಾರ ನಡೆಸಿಕೊಂಡಿದ್ದ. ವಿದೇಶಿ ಉದ್ಯೋಗಿಗಳನ್ನು ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸುತ್ತಿದ್ದ. ಅಮೆರಿಕದಲ್ಲಿ ವಿದೇಶಿ ಉದ್ಯೋಗಿಗಳಿಗೆ ಎಚ್ -1ಬಿ ವೀಸಾದಡಿ ಅನುಮತಿ ದೊರೆಯುವಂತೆ ಮಾಡಲು ಅತ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದನೆಂದು ಆರೋಪಿಸಲಾಗಿದೆ.