ಈ 85 ವರ್ಷದ ಅಜ್ಜಿಗಿದೆ ವಿಶೇಷ ಚಟ!

Update: 2018-11-04 13:46 GMT

ಫ್ರಾನ್ಸ್‌ನಲ್ಲಿ ಜನಿಸಿ ಈಗ ಅಮೆರಿಕದ ನ್ಯೂಯಾರ್ಕ್ ನಿವಾಸಿಯಾಗಿರುವ ಈ ಮಹಿಳೆ ಬಿಸಿಲಿರಲಿ,ಮಳೆಯಿರಲಿ ಅಥವಾ ಚಳಿಯಿರಲಿ,ವರ್ಷದ 365 ದಿನಗಳ ಕಾಲವೂ ಪ್ರತಿದಿನ ಮೂರು ಗಂಟೆ ಓಡುತ್ತಾರೆ. ಆದರೆ ಡಯಟಿಂಗ್‌ನ ಒಂದು ಭಾಗವಾಗಿ ಅಥವಾ ದೈಹಿಕ ಕಸರತ್ತಿಗೆ ಪೂರಕವಾಗಿ ಆಕೆ ಓಡುತ್ತಿಲ್ಲ.

85ರ ಹರೆಯದ ಜಿನೆಟ್ ಬೆಡಾರ್ಡ್‌ಗೆ ಓಟ ಆಕೆಯ ಸುದೀರ್ಘ ಬದುಕಿನ ಅಂಗವಾಗಿದೆ ಮತ್ತು ಇದು ಇಳಿವಯಸ್ಸಿನಲ್ಲಿ ಆಕೆಯ ಒಬ್ಬಂಟಿತನವನ್ನು ನೀಗಿಸಿದೆ.

ಅಂದ ಹಾಗೆ ರವಿವಾರ 16ನೇ ನ್ಯೂಯಾರ್ಕ್ ಸಿಟಿ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿರುವ ಜಿನೆಟ್ ಕಣದಲ್ಲಿರುವ ಅತ್ಯಂತ ಹಿರಿಯ ಮಹಿಳೆಯಾಗಿದ್ದಾರೆ. ಓಟಕ್ಕೆ ಮುನ್ನ ತಯಾರಿಗೆ ಈ ಅಜ್ಜಿ ಚೂರು ವೈನ್,ಚೀಸ್ ಮತ್ತು ಐಸ್‌ಕ್ರೀಂ ಸೇವಿಸುತ್ತಾರೆ.

 ತನಗೆ ಓಟಕ್ಕೆ ವಿಶೇಷ ಸಿದ್ಧತೆಗಳ ಅಗತ್ಯವಿಲ್ಲ,ಹೇಗಿದ್ದರೂ ತಾನು ದಿನಕ್ಕೆ ಮೂರು ಗಂಟೆಗಳ ಕಾಲ ಓಡುತ್ತೇನೆ ಮತ್ತು ಓಟಕ್ಕೆ ತಾನು ಸದಾ ಸನ್ನದ್ಧ ಎನ್ನುವ ಜಿನೆಟ್,ಓಟ ತನ್ನ ಪಾಲಿಗೆ ಬಿಡಲಾಗದ ಚಟವಾಗಿದೆ. ತಾನು ನಿವೃತ್ತಳಾಗಿದ್ದೇನೆ,ತನ್ನ ಬಳಿ ಬೇಕಾದಷ್ಟು ಸಮಯವಿದೆ. ನಾಲ್ಕು ವರ್ಷಗಳ ಹಿಂದೆ ತನ್ನ ಗಂಡನೂ ತನ್ನನ್ನು ಅಗಲಿದ್ದಾರೆ. ಹೀಗಾಗಿ ತಾನು ಏನು ಮಾಡಬೇಕು?, ಅದಕ್ಕಾಗಿಯೇ ಓಡುತ್ತೇನೆ, ಅದು ಕಾಲ ಕಳೆಯುವ ಮಾರ್ಗವಾಗಿದೆ ಎನ್ನುವ ಜಿನೆಟ್‌ರ ಕಚೇರಿಯು ಆಕೆ ಗೆದ್ದಿರುವ ಪದಕಗಳಿಂದ ತುಂಬಿ ಹೋಗಿದೆ.

 ಜಿನೆಟ್ ಮಾತ್ರ ಮ್ಯಾರಥಾನ್‌ಗಳಲ್ಲಿ ಭಾಗವಹಿಸುತ್ತಿರುವ ಹಿರಿಯ ಮಹಿಳೆಯಲ್ಲ. ಶ್ರೀಮಂತ ರಾಷ್ಟ್ರಗಳಲ್ಲಿ ಜನರ ಜೀವಿತಾವಧಿ ಹೆಚ್ಚುತ್ತಿದೆ ಮತ್ತು ಆರೋಗ್ಯವನ್ನು ಕಾಯ್ದುಕೊಳ್ಳಲು ಓಟ ದಿನೇ ದಿನೇ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಮ್ಯಾರಥಾನ್‌ಗಳಲ್ಲಿ ಓಡುತ್ತಿರುವ 80 ಮತ್ತು 90 ವರ್ಷ ದಾಟಿದವರ ಸಂಖ್ಯೆ ಈಗ ಹಿಂದಿಗಿಂತಲೂ ಹೆಚ್ಚಿದೆ.

 ಪ್ರತಿದಿನ ಬೆಳಿಗ್ಗೆ ನ್ಯೂಯಾರ್ಕ್‌ನ ಕ್ವೀನ್ಸ್ ಬರೋದಲ್ಲಿರುವ ತನ್ನ ಮನೆಯಿಂದ ಕೂಗಳತೆಯ ದೂರದಲ್ಲಿರುವ ಬೀಚ್‌ಗೆ ತೆರಳುವ ಜಿನೆಟ್ ಓಡುವಾಗ ಸಂಗೀತವನ್ನು ಆಲಿಸಲು ಸಾಧನಗಳನ್ನು ಬಳಸುವುದಿಲ್ಲ. ‘‘ನನ್ನ ಕಿವಿಗಳಲ್ಲಿ ಏನನ್ನೂ ಇಟ್ಟುಕೊಳ್ಳಲು ನಾನು ಬಯಸುವುದಿಲ್ಲ. ಓಡುತ್ತಿರುವಾಗ ನನ್ನ ತಾರುಣ್ಯದ ದಿನಗಳು, ಫ್ರಾನ್ಸ್ ಮತ್ತು ಅಮೆರಿಕಗಳಲ್ಲಿ ನನ್ನ ಜೀವನ,ಪಾವತಿಸಬೇಕಾದ ಬಿಲ್‌ಗಳು,ಹಣಕಾಸು ಇತ್ಯಾದಿಗಳ ಬಗ್ಗೆ ಆಲೋಚಿಸುತ್ತಿರುತ್ತೇನೆ ಎನ್ನುತ್ತಾರೆ ಜಿನೆಟ್. ಆಕೆ ಪ್ರತಿದಿನ 20 ಕಿ.ಮೀ.ಗಳಷ್ಟು ದೂರವನ್ನು ಓಡುತ್ತಾರೆ.

1970ರ ದಶಕದಲ್ಲಿ ಫ್ರಾನ್ಸ್‌ನಿಂದ ನ್ಯೂಯಾರ್ಕ್‌ಗೆ ವಲಸೆ ಬಂದಿದ್ದ ಜಿನೆಟ್‌ಗೆ 20 ವರ್ಷಗಳ ಹಿಂದೆ ಅಮೆರಿಕದ ಪೌರತ್ವ ಲಭಿಸಿದೆ.

ತಾನೇನು ಮಾಡಬೇಕು ಎನ್ನುವುದನ್ನು ತನ್ನ ಶರೀರವು ಹೇಳುತ್ತದೆ ಮತ್ತು ತಾನು ಅದರ ಮಾತುಗಳನ್ನು ಕೇಳುತ್ತೇನೆ. ವಿಶೇಷ ಆಹಾರಗಳಲ್ಲಿ ತನಗೆ ನಂಬಿಕೆಯಿಲ್ಲ,ಅವುಗಳಿಂದ ಸುಮ್ಮನೆ ಖರ್ಚು ಹೆಚ್ಚು ಎನ್ನುತ್ತಾರೆ ಆಕೆ.

 ತನ್ನ 69ರ ಹರೆಯದಲ್ಲಿ ಓಡುವುದನ್ನು ಆರಂಭಿಸಿದ್ದ ಜಿನೆಟ್‌ಗೆ 2005ರಲ್ಲಿ 72ನೇ ವಯಸ್ಸಿನಲ್ಲಿ ಮ್ಯಾರಥಾನ್‌ನಲ್ಲಿಯ ತನ್ನದೇ ಆದ 3 ಗಂಟೆ 46 ನಿಮಿಷಗಳ ದಾಖಲೆಯನ್ನು ಮುರಿಯಬೇಕೆಂಬ ಬಲವಾದ ಬಯಕೆಯಿದೆ. ಆ ಸಂದರ್ಭದಲ್ಲಿ ಅದು ಆಕೆಯ ವಯಸ್ಸಿನ ವರ್ಗದಲ್ಲಿ ಹೊಸ ವಿಶ್ವ ದಾಖಲೆಯಾಗಿತ್ತು. ನಂತರದ ವರ್ಷಗಳಲ್ಲಿ ಆ ದಾಖಲೆಯನ್ನು ಇತರರು ಇನ್ನಷ್ಟು ಉತ್ತಮಗೊಳಿಸಿದ್ದಾರೆ.

 ದೈಹಿಕವಾಗಿ ಮತ್ತು ಮಾನಸಿಕವಾಗಿ ತನಗಿನ್ನೂ ಇಪ್ಪತ್ತೇ ವರ್ಷ ಎಂದೇ ತಾನು ಭಾವಿಸಿದ್ದೇನೆ. 16ನೇ ವಯಸ್ಸಿನಲ್ಲಿ ಧರಿಸುತ್ತಿದ್ದ ಬಿಕಿನಿಯನ್ನು ತಾನು ಈಗಲೂ ಧರಿಸಬಲ್ಲೆ ಎನ್ನುತ್ತಾರೆ ಜಿನೆಟ್.

ಆಕೆ ಹಿಂದೆ ತನ್ನ ಪತಿ ಅಥವಾ ಸೋದರಿಯೊಂದಿಗೆ ಓಡುತ್ತಿದ್ದರು. ಆದರೆ ಈಗ ಒಬ್ಬಂಟಿಯಾಗಿ ಓಡುತ್ತಾರೆ.

 ಅದೇನೂ ದೊಡ್ಡದಲ್ಲ,ಒಂಟಿಯಾಗಿರುವುದನ್ನೇ ತಾನೀಗ ಬಯಸುತ್ತಿದ್ದೇನೆ. ತಾನೀಗ ಓಟಕ್ಕೆ ಜೊತೆಯಾಗಿ ಯಾರನ್ನಾದರೂ ಕರೆದುಕೊಂಡರೂ ಅವರು ತನ್ನ ವೇಗಕ್ಕೆ ಸ್ಪಂದಿಸುತ್ತಾರೆ,ತನ್ನಷ್ಟು ಉತ್ಸಾಹ ಹೊಂದಿರುತ್ತಾರೆ ಎಂದು ತನಗನ್ನಿಸುವುದಿಲ್ಲ ಎಂದು ಅಲಿಟಾಲಿಯಾದ ಮಾಜಿ ಉದ್ಯೋಗಿಯಾಗಿರುವ ಜಿನೆಟ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News