ಶ್ರೀ ರಾಮನ ಅತ್ಯಂತ ಎತ್ತರದ ವಿಗ್ರಹ ಪ್ರತಿಷ್ಠಾಪನೆಗೆ ಅಯೋಧ್ಯೆ ಅರ್ಚಕರಿಂದಲೇ ವಿರೋಧ

Update: 2018-11-05 11:31 GMT

ಲಕ್ನೋ, ನ.5: ಅಯೋಧ್ಯೆಯಲ್ಲಿ ಶ್ರೀ ರಾಮನ ಅತ್ಯಂತ ಎತ್ತರದ ಮೂರ್ತಿಯನ್ನು ಪ್ರತಿಷ್ಠಾಪಿಸುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಹತ್ವಾಕಾಂಕ್ಷಿ ಯೋಜನೆಗೆ ವಿವಾದಿತ ಸ್ಥಳದಲ್ಲಿರುವ ತಾತ್ಕಾಲಿಕ ದೇವಳದ ಮುಖ್ಯ ಅರ್ಚಕ ಮಹಂತ್ ಸತ್ಯೇಂದ್ರ ದಾಸ್ ಅವರಿಂದಲೇ ವಿರೋಧ ವ್ಯಕ್ತವಾಗಿದೆ.

‘‘ಶ್ರೀ ರಾಮನ ಸ್ಥಳ ದೇವಸ್ಥಾನದಲ್ಲಿಯೇ ಹೊರತು ತೆರೆದ ಜಾಗದಲ್ಲಿ ಅಲ್ಲ’’ ಎಂದು ರಾಮ್ ಲಲ್ಲಾನಿಗೆ ಕಳೆದ 25 ವರ್ಷಗಳಿಂದ ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸುತ್ತಿರುವ ಮಹಂತ್ ಹೇಳಿದರು.

‘‘ತೆರೆದ ಸ್ಥಳದಲ್ಲಿ ಶ್ರೀ ರಾಮನ ಮೂರ್ತಿ ಸ್ವೀಕಾರಾರ್ಹವಲ್ಲ. ಈ ಪ್ರತಿಮೆಯನ್ನು ನೋಡಿಕೊಳ್ಳುವವರು ಹಾಗೂ ಪ್ರತೀ ದಿನ ಪೂಜೆ ಸಲ್ಲಿಸುವವರು ಯಾರು?’’ ಎಂದು ಮಾಜಿ ಸಂಸ್ಕೃತ ಉಪನ್ಯಾಸಕರೂ ಆಗಿರುವ ಸತ್ಯೇಂದ್ರ ದಾಸ್ ಪ್ರಶ್ನಿಸಿದ್ದಾರೆ.

‘‘ಶ್ರೀ ರಾಮನ ಪ್ರತಿಮೆಯೆಂದರೆ ರಾಜಕೀಯ ವ್ಯಕ್ತಿಯ ಮೂರ್ತಿಯಂಥಲ್ಲ. ರಾಜಕಾರಣಿಗಳ ಪ್ರತಿಮೆಗಳ ಸ್ಥಿತಿ ನಿಮಗೆ ತಿಳಿದೇ ಇದೆ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಶ್ರೀ ರಾಮನ ಪ್ರತಿಮಗೂ ಅದೇ ಗತಿಯಾಗುವುದು ಯಾರಿಗೂ ಇಷ್ಟವಾಗದು’’ ಎಂದು ಅವರು ಹೇಳಿದರು.

‘‘ಒಂದು ವೇಳೆ ಸರಕಾರ ರಾಮನ ಪ್ರತಿಮೆ ನಿರ್ಮಿಸಲು ಮುಂದಾಗಿದ್ದೇ ಆದಲ್ಲಿ ಪ್ರತಿಮೆಯನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುವಂತೆ ಅದರ ಎತ್ತರ ಇರಬೇಕು’’ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘‘ರಾಮ ಲಲ್ಲಾನಿಗೆ ಬೇಕೆಂದಾದರೆ ಅಯೋಧ್ಯೆಯಲ್ಲಿ ದೇವಳ ನಿರ್ಮಾಣವಾಗುವುದು. ಆದರೆ ಅವನಿಗೆ ಬೇಡವೆಂದಾದರೆ ಆತ ಟರ್ಪಾಲಿನ ಅಡಿಯಲ್ಲೇ ಇರುತ್ತಾನೆ’’ ಎಂದರು.

ರಾಮನ ಪ್ರತಿಮೆ ರಾಜಕೀಯ ಪ್ರಚಾರದ ಅಸ್ತ್ರವಾಗಬಾರದು ಎಂದ ಅವರು ಬಾಬರಿ ಮಸೀದಿ ಧ್ವಂಸದಿಂದ ಮುಸ್ಲಿಮರಿಗಿಂತ ಹಿಂದುಗಳಿಗೇ ಹೆಚ್ಚು ಹಾನಿಯಾಗಿದೆ ಎಂದು ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News