ಮಧ್ಯಾವಧಿ ಚುನಾವಣೆ: ಟ್ರಂಪ್ ಮೂಗುದಾರ ಡೆಮಾಕ್ರಟಿಕ್ ಪಕ್ಷದ ಕೈಗೆ

Update: 2018-11-07 15:37 GMT

ವಾಷಿಂಗ್ಟನ್, ನ.7: ಟ್ರಂಪ್ ವಿರುದ್ಧದ ಅಸಮಾಧಾನ ಅಲೆಯ ಲಾಭ ಪಡೆದ ಡೆಮಾಕ್ರಟಿಕ್ ಪಕ್ಷ, ಮಂಗಳವಾರ ನಡೆದ ಮಧ್ಯಾವಧಿ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಪಡೆದು ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟೀವ್ಸ್ ನಿಯಂತ್ರಣ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟ್ರಂಪ್ ಕಾರ್ಯಸೂಚಿ ತಡೆಯುವ ಅವಕಾಶ ಮತ್ತು ಟ್ರಂಪ್ ಆಡಳಿತಕ್ಕೆ ಕಡಿವಾಣ ಹಾಕುವ ಅವಕಾಶ ಡೆಮಾಕ್ರಟಿಕ್ ಪಕ್ಷಕ್ಕೆ ಸಿಕ್ಕಿದಂತಾಗಿದೆ.

ಟ್ರಂಪ್ ಶ್ವೇತಭವನದ ಚುಕ್ಕಾಣಿ ಹಿಡಿದ ಎರಡು ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಟ್ರಂಪ್ ಹಾಗೂ ಅವರ ಅನುಯಾಯಿ ರಿಪಬ್ಲಿಕನ್ನರು ಅಮೆರಿಕನ್ ಸೆನೆಟ್‍ನಲ್ಲಿ ತಮ್ಮ ಬಹುಮತ ಮುಂದುವರಿಸಿದ್ದಾರೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜನಾಂಗೀಯ ಘರ್ಷಣೆಗಳು, ಇಮಿಗ್ರೇಶನ್ ಮತ್ತು ಇತರ ಸಾಂಸ್ಕೃತಿಕ ವಿಷಯಗಳು ಪ್ರಧಾನ ಸ್ಥಾನ ಪಡೆದಿದ್ದವು.

ಟ್ರಂಪ್ ನಾಯಕತ್ವದ ಜನಮತಗಣನೆ ಎಂದು ಬಿಂಬಿಸಲಾದ ಚುನಾವಣೆಯಲ್ಲಿ ರಿಪಬ್ಲಿಕನ್ನರ ಹಿನ್ನಡೆ ಟ್ರಂಪ್ ಅವರಿಗೆ ಕಹಿ ಅನುಭವ ನೀಡಿದೆ. ಎನ್‍ಬಿಸಿ ಅಂದಾಜಿನ ಪ್ರಕಾರ ಡೆಮಾಕ್ರಟಿಕ್ ಪಕ್ಷ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್‍ನಲ್ಲಿ 229-206 ಬಹುಮತ ಪಡೆದಿದ್ದು, ಎಂಟು ವರ್ಷಗಳ ಬಳಿಕ ಮೊಟ್ಟಮೊದಲ ಬಾರಿಗೆ ನಿಯಂತ್ರಣ ಸಾಧಿಸಿದೆ. ರಿಪಬ್ಲಿಕನ್ ಹಿಡಿತದಲ್ಲಿದ್ದ ಕನಿಷ್ಠ 26 ಸ್ಥಾನಗಳನ್ನು ಪಡೆಯುವ ಮೂಲಕ ಡೆಮಾಕ್ರಟಿಕ್ ಪಕ್ಷ ಬಹುಮತ ಸಾಧಿಸಲಿದೆ ಎಂದು ಇತರ ಮಾಧ್ಯಮಗಳು ಅಂದಾಜಿಸಿವೆ.

ಈ ಬಹುಮತದೊಂದಿಗೆ ಡೆಮಾಕ್ರಟಿಕ್ ಪಕ್ಷಕ್ಕೆ ಟ್ರಂಪ್ ಅವರ ತೆರಿಗೆ ರಿಟರ್ನ್ಸ್ ಬಗ್ಗೆ ತನಿಖೆ ನಡೆಸಲು, ಸಂಭಾವ್ಯ ವ್ಯವಹಾರ ಹಿತಾಸಕ್ತಿ ಸಂಘರ್ಷ ಮತ್ತು 2016ರ ಚುನಾವಣಾ ಪ್ರಚಾರಕ್ಕೆ ರಷ್ಯಾ ನಂಟಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಅವಕಾಶವಾಗಲಿದೆ.

ಟ್ರಂಪ್ ನ್ಯಾಯಕ್ಕೆ ತಡೆ ಒಡ್ಡಿದ್ದಾರೆ ಅಥವಾ 2016ರ ಚುನಾವಣಾ ಪ್ರಚಾರದಲ್ಲಿ ರಷ್ಯಾ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಪುರಾವೆಗಳು ಲಭ್ಯವಾದಲ್ಲಿ, ಟ್ರಂಪ್ ವಾಗ್ದಂಡನೆಗೆ ಸರಳ ಬಹುಮತ ಸಾಕಾಗುತ್ತದೆ.

ನಮಗೆ ಅಮೋಘ ಯಶಸ್ಸು: ಟ್ರಂಪ್ ಘೋಷಣೆ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ, ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷವು ಬಹುಮತವನ್ನು ಪಡೆದ ಹೊರತಾಗಿಯೂ, ಈ ಫಲಿತಾಂಶವು ರಿಪಬ್ಲಿಕನ್ ಪಕ್ಷಕ್ಕೆ ಅಗಾಧ ಮುನ್ನಡೆ ದೊರಕಿಸಿಕೊಟ್ಟಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದಾರೆ.

ಚುನಾವಣಾ ಫಲಿತಾಂಶದ ವಿಶ್ಲೇಷಣೆ ನಡೆಸಲು ಟ್ರಂಪ್ ಮಂಗಳವಾರ ತಡರಾತ್ರಿಯವರೆಗೂ ಕಾದರು ಹಾಗೂ ಬಳಿಕ ಸಂದೇಶವೊಂದನ್ನು ಟ್ವೀಟ್ ಮಾಡಿದರು.

‘‘ಇಂದು ರಾತ್ರಿ ನಾವು ಅಮೋಘ ಯಶಸ್ಸು ಗಳಿಸಿದ್ದೇವೆ. ನಿಮೆಲ್ಲರಿಗೂ ಧನ್ಯವಾದಗಳು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News